×
Ad

‘ಸಸ್ಯಕಾಶಿ’ಯಲ್ಲಿ ಜ.16ರಿಂದ ಫಲ-ಪುಷ್ಪ ಪ್ರದರ್ಶನ

Update: 2016-01-14 23:37 IST

ಬೆಂಗಳೂರು, ಜ. 14: ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘದ ವತಿಯಿಂದ ಗಣರಾಜ್ಯೋತ್ಸವ ಹಾಗೂ ಜಿ.ಎಚ್.ಕ್ರುಂಬಿಗಲ್ ಅವರ 150ನೆ ವರ್ಷಾಚರಣೆ ಪ್ರಯುಕ್ತ ಜ.16ರಿಂದ 26ರವರೆಗೆ ಲಾಲ್‌ಬಾಗ್‌ನಲ್ಲಿ ಫಲಪುಷ್ಪಪ್ರದರ್ಶನವನ್ನು ಆಯೋ ಜಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆ ನಿರ್ದೇಶಕ ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
 ಈ ಬಾರಿ ಸುಮಾರು 1.2 ಕೋಟಿ ರೂ. ವೆಚ್ಚದಲ್ಲಿ ಫಲಪುಷ್ಪಪ್ರದರ್ಶನವನ್ನು ಆಯೋ ಜಿಸಲಾಗಿದ್ದು, 40ರಿಂದ 50 ರೀತಿಯ ಫಲಪುಷ್ಪಗಳ ಪ್ರದರ್ಶನ ನಡೆಯಲಿದ್ದು, 4ರಿಂದ 5 ಲಕ್ಷ ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ. ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 6ರ ತನಕ ಪುಷ್ಪಪ್ರದರ್ಶನ ನಡೆಯಲಿದ್ದು, 16 ರಂದು ಬೆಳಗ್ಗೆ ರಾಷ್ಟ್ರೀಯ ಪುಷ್ಪಹಬ್ಬಕ್ಕೆ ಚಾಲನೆ ದೊರೆಯಲಿದೆ ಎಂದು ನಿರ್ದೇಶಕ ಬೊಮ್ಮನಹಳ್ಳಿ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.
ಪುಷ್ಪಪ್ರದರ್ಶನದ ವೇಳೆ ನೂರು ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಅದರಲ್ಲಿ ಮೇಲುಗಡೆ ಇರುವ ಮಳಿಗೆಗಳಿಗೆ 20 ಸಾವಿರ ರೂ. ಹಾಗೂ ಕೆಳಗಡೆ ಇರುವ ಮಳಿಗೆಗಳಿಗೆ 15 ಸಾವಿರ ರೂ. ಬಾಡಿಗೆ ದರ ನಿಗದಿ ಮಾಡಲಾಗಿದೆ. ರಾಜ್ಯದ 7 ಸಂಸ್ಥೆಗಳು, ಮಹಾರಾಷ್ಟ್ರದ 3 ಸಂಸ್ಥೆಗಳು ಹಾಗೂ ಅಸ್ಸಾಂನ ಒಂದು ಸಂಸ್ಥೆ ಪುಷ್ಪಪ್ರದರ್ಶನದಲ್ಲಿ ಭಾಗಿಯಾಗಲಿದೆ ಎಂದು ಹೇಳಿದರು.
ರಾಜ್ಯದ ತೋಟಗಾರಿಕೆ ಇಲಾಖೆಗೆ ಕೊಡುಗೆ ನೀಡಿದ ಜಿ.ಎಚ್. ಕ್ರುಂಬಿಗಲ್ ಅವರ 150ನೆ ವರ್ಷಾಚರಣೆಯ ಅಂಗವಾಗಿ ಅವರ ಪ್ರತಿಮೆ ಮುಂಭಾಗದಲ್ಲಿ ಎರಡು ಲಕ್ಷಕ್ಕೂ ಅಧಿಕ ಹೂವಿನ ಗಿಡಗಳಿಂದ ಅಲಂಕರಿಸಲಾಗುವುದು, ಗಾಜಿನ ಮನೆಯಲ್ಲಿ ವೈವಿಧ್ಯಮಯ ಹಾಗೂ ಚಿತ್ತಾಕರ್ಷಕ ಹೂವಿನ ಕುಂಡಗಳಿಂದ 150ಕ್ಕೂ ಹೆಚ್ಚು ವಿವಿಧ ಹೂವುಗಳು ಪ್ರವಾಸಿಗರನ್ನು ಆಕರ್ಷಿಸಲಿವೆ. ಇದಕ್ಕಾಗಿ ಅಂತಿಮ ಹಂತದ ಸಿದ್ಧತೆಗಳು ನಡೆದಿವೆ ಎಂದು ಹೇಳಿದರು.
ಪುಷ್ಪಪ್ರದರ್ಶನದ ಪ್ರಯುಕ್ತ ಲಾಲ್‌ಬಾಗ್ ಒಳಗೆ ಪಾರ್ಕಿಂಗ್ ನಿಷೇಧಿಸಿದ್ದು, ಶಾಂತಿನಗರ ಬಸ್ ನಿಲ್ದಾಣದ ಬಹುಮಹಡಿ ಕಟ್ಟಡ, ಜೆ.ಪಿ. ರಸ್ತೆಯ ವಾಹನ ನಿಲುಗಡೆ ಕಟ್ಟಡ, ಅಲ್ ಅಮೀನ್ ಕಾಲೇಜಿನ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಎಸಿಪಿ ಕಾಂತರಾಜು ಮಾತನಾಡಿ, ಪುಷ್ಪಪ್ರದರ್ಶನಕ್ಕೆ ಆಗಮಿಸುವ ಪ್ರವಾಸಿಗರಿಗೆ ಭದ್ರತೆ ನೀಡಲು 500 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೆ, 50 ಮಂದಿ ಮಫ್ತಿಯಲ್ಲಿ ಪೊಲೀಸರು ಕಾರ್ಯನಿರ್ವಹಿಸಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮೈಸೂರು ಉದ್ಯಾನ ಕಲಾಸಂಘದ ಉಪಾಧ್ಯಕ್ಷ ಶ್ರೀಕಂಠಯ್ಯ, ಖಜಾಂಚಿ ಎಂ. ಪುಟ್ಟಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News