ಹುಸಿ ಬಾಂಬ್‌ಗೆ ಬೆದರಿದ ಬೆಂಗಳೂರು
ಬೆಂಗಳೂರು, ಜ.15: ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿದ್ದ ಉದ್ಯಾನನಗರಿಯ ಜನತೆ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿ ಕೆಲಕಾಲ ಆತಂಕಗೊಂಡು, ತಪಾಸಣೆಯ ನಂತರ ಸ್ಫೋಟಕವಲ್ಲವೆಂದು ಖಚಿತಗೊಂಡ ಹಿನ್ನೆಲೆಯಲ್ಲಿ ನಿಟ್ಟುಸಿರುಬಿಟ್ಟ ಪ್ರಸಂಗವೊಂದಕ್ಕೆ ಇಲ್ಲಿನ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಾವೇರಿ ಜಂಕ್ಷನ್ ಸಾಕ್ಷಿಯಾಯಿತು.
ಶುಕ್ರವಾರ ಇಲ್ಲಿನ ಸದಾಶಿವನಗರದ ಕಾವೇರಿ ಜಂಕ್ಷನ್ ಬಳಿಯ ಎಚ್‌ಡಿಎಫ್‌ಸಿ ಬ್ಯಾಂಕ್ ಸಮೀಪ ಅನು ಮಾನಾಸ್ಪದ ವಸ್ತುಗಳಿದ್ದ ಪೆಟ್ಟಿಗೆಯೊಂದನ್ನು ಗಮನಿಸಿದ ಚಾಲಕನೋರ್ವ ಆತಂಕಗೊಂಡು ಪೊಲೀಸ್ ನಿಯಂತ್ರಣ ಕೊಠಡಿಗೆ ಸುದ್ದಿ ರವಾನಿಸಿದ್ದಾನೆ.
ಈ ವೇಳೆಗಾಗಲೇ ಪ್ರಮುಖ ರಸ್ತೆಗೆ ಸಂಪರ್ಕ ಕಲ್ಪಿಸುವ ಜನನಿಬಿಡ ಸ್ಥಳ ಇದಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದು, ಅನುಮಾನಾಸ್ಪದ ವಸ್ತುವಿನ ಬಗ್ಗೆ ಭಿನ್ನ-ಭಿನ್ನ ಕಥೆಗಳನ್ನು ಹೆಣೆದು, ಮೊಬೈಲ್ ಕ್ಯಾಮರಾಗಳಿಂದ ಛಾಯಾಚಿತ್ರ ತೆಗೆದು ಸ್ನೇಹಿತರಿಗೆ ರವಾನಿಸುತ್ತಿದ್ದರು.
ಕೂಡಲೇ ಸ್ಥಳಕ್ಕೆ ಧಾವಿಸಿ ಬಂದ ಹಿರಿಯ ಪೊಲೀಸ್ ಅಧಿಕಾರಿಗಳು, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ, ಕಮಾಂಡೋ ಪಡೆ ಪರಿಶೀಲನೆ ನಡೆಸಿದ್ದು, ಚೀಲದಲ್ಲಿ ಒಂದೂವರೆ ಅಡಿ ಎತ್ತರದ ಬಾಕ್ಸ್ ಹಾಗೂ ಟೇಪ್ ಸುತ್ತಿದ್ದ ಗಾಜಿನ ಜಾರ್ ಪತ್ತೆಯಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಅನುಮಾನಾಸ್ಪದ ವಸ್ತುವೆಂದು ಹೇಳಲಾದ ಸ್ಥಳದಲ್ಲಿ ಯಾವುದೇ ರೀತಿಯ ಸ್ಫೋಟಕ ಪತ್ತೆಯಾಗಿಲ್ಲ. ಬೆಳಗ್ಗೆ 11ಗಂಟೆಯ ಸುಮಾರಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಸಮೀಪದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿಕ ಅನುಮಾನಾಸ್ಪದ ವಸ್ತು ಪತ್ತೆಯಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.