ಪತ್ರಕರ್ತರ ಬೇಡಿಕೆಗಳ ಈಡೇರಿಗೆ ಶ್ರಮಿಸುವೆ: ಮದನಗೌಡ
ಬೆಂಗಳೂರು, ಜ.15: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾಧ್ಯಮದವರ ವಾಹನ ಸಂಚಾರಕ್ಕೆ ಟೋಲ್ ಶುಲ್ಕ ವಿನಾಯಿತಿ ಸೇರಿದಂತೆ ಪತ್ರಕರ್ತರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಶ್ರಮಿಸುವೆ ಎಂದು ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ನೂತನ ನಿಯೋಜಿತ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಮದನಗೌಡ ಭರವಸೆ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನಿಯೋಜನೆಗೊಂಡ ನಂತರ ದಿಲ್ಲಿಯಿಂದ ಬೆಂಗಳೂರಿಗೆ ಆಗಮಿಸಿದ ಅವರನ್ನು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕೇಂದ್ರ ಕಚೇರಿಯಲ್ಲಿ ಅಭಿನಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, 1950ರಲ್ಲಿ ರಾಷ್ಟ್ರದ ಮೊದಲ ಪ್ರಧಾನಿ ನೆಹರು ಅವರಿಂದ ಸ್ಥಾಪನೆಗೊಂಡ ಕಾರ್ಯನಿರತ ಪತ್ರಕರ್ತರ ಒಕ್ಕೂಟಕ್ಕೆ ತನ್ನದೇ ಆದ ಇತಿಹಾಸವಿದೆ.
26 ರಾಜ್ಯಗಳ ಮಾಧ್ಯಮ ಸಂಘಟನೆಗಳು ಒಕ್ಕೂಟದೊಂದಿಗೆ ನೋಂದಣಿ ಯಾಗಿದ್ದು ಇದೇ ಮೊದಲ ಬಾರಿಗೆ ಕನ್ನಡಿಗರೊಬ್ಬರು ರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವುದು ತಮಗೆ ಸಂತಸ ತಂದಿದೆ. ತಮ್ಮ ಅಧಿಕಾರಾವಧಿಯಲ್ಲಿ ಪತ್ರಕರ್ತರ ಶ್ರೇಯೋಭಿ ವೃದ್ಧಿಗೆ ಶ್ರಮಿಸುವೆ. ಅಲ್ಲದೆ, ಸಂಘದ ಬೇಡಿಕೆ ಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಣಿ ಮಾತನಾಡಿ, ರಾಷ್ಟ್ರ ಮಟ್ಟದಲ್ಲಿರುವ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮಾದರಿಯಲ್ಲಿ ಪ್ರತಿ ರಾಜ್ಯದಲ್ಲೂ ಅಂತಹ ಮಂಡಳಿ ರಚನೆಯಾಗ ಬೇಕು. ಪತ್ರಿಕೆಗಳ ನೋಂದಣಿಗೆ ಸಂಬಂಧಪ ಟ್ಟಂತೆ ದಕ್ಷಿಣ ಭಾರತ ಮಟ್ಟದಲ್ಲಿ ಚೆನ್ನೈನಲ್ಲಿ ಆರ್‌ಎನ್‌ಐ ಕಚೇರಿ ಸ್ಥಾಪನೆಯಾಗಬೇಕು. ಪತ್ರಿಕೆಗಳ ರವಾನೆಗೆ ಅಂಚೆ ರಿಯಾಯಿತಿ 1870ರಲ್ಲಿ ಮಾಡಿದ ಕಾನೂನು ಆಗಿದೆ. ಪತ್ರಿಕೆಗಳ ಸುಗಮ ರವಾನೆಗೆ ಅನುಕೂಲ ಆಗುವಂತೆ ಕಾನೂನು ತಿದ್ದುಪಡಿಗೆ ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ ಎಂದರು.
ಉಪಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಮದನಗೌಡ ತಾಲೂಕು ಮಟ್ಟದಿಂದ ರಾಷ್ಟ್ರ ಮಟ್ಟದ ಸಂಘಟನೆಯ ವರೆಗೆ ಬೆಳೆದು ಬಂದಿದ್ದು, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಲ್ಮಿಡಿ ಶಾಸನ ಬೆಳಕಿಗೆ ತಂದು ಅದರ ಶಾಸನ ಫಲಕ ಬೇಲೂರು ತಾಲೂಕಿನಲ್ಲಿ ಇದೆ ಎಂಬುದನ್ನು ನಾಡಿಗೆ ಪರಿಚಯಿಸಿದವರು ಎಂದು ಶ್ಲಾಘಿಸಿದರು.
ಈ ವೇಳೆ ಸಂಘದ ಕಾರ್ಯದರ್ಶಿ ಜೆ.ಸಿ.ಲೋಕೇಶ್, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಸ್.ಸೋಮಶೇಖರ್, ಶಾಂತಕುಮಾರಿ, ನಗರ ಘಟಕದ ಅಧ್ಯಕ್ಷ ಬೈರಸಂದ್ರ ಗಂಗರಾಜು ಹಾಜರಿದ್ದರು.