×
Ad

ಜ.20ರಿಂದ ಕೇರಳದಲ್ಲಿ ‘ನಿಶಾಗಂಧಿ ಉತ್ಸವ’

Update: 2016-01-15 23:50 IST

ಬೆಂಗಳೂರು, ಜ.15: ‘ದೇವರ ಸ್ವಂತ ನಾಡು’ ಎಂಬ ಖ್ಯಾತಿಗೆ ಪಾತ್ರವಾಗಿರುವ ಕೇರಳ ರಾಜ್ಯಕ್ಕೆ ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಲು ಜ.20ರಿಂದ 27ರ ವರೆಗೆ ‘ನಿಶಾಗಂಧಿ ಉತ್ಸವ’ವನ್ನು ಏರ್ಪಡಿಸಲಾಗಿದೆ ಎಂದು ಕೇರಳ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಪಿ.ಐ.ಶೇಕ್ ಪರೀತ್ ತಿಳಿಸಿದ್ದಾರೆ.
ಶುಕ್ರವಾರ ಖಾಸಗಿ ಹೊಟೇಲ್‌ನಲ್ಲಿ ಏರ್ಪಡಿಸ ಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಉತ್ಸವ ಇದಾಗಿದೆ. ಸಿತಾರ್ ವಾದಕ ಅನೌಶ್ಕಾ ಶಂಕರ್, ತಬಲ ವಾದಕ ಝಕೀರ್ ಹುಸೇನ್, ನಟಿ ಹೇಮಾಮಾಲಿನಿ ಸೇರಿದಂತೆ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ತಮ್ಮ ಕಲೆಗಳನ್ನು ಪ್ರದರ್ಶಿಸಲಿದ್ದಾರೆ ಎಂದು ವಿವರಿಸಿದರು.
ಕನ್ನಡಿಗರಿಗೆ ವಿಶೇಷ ರಿಯಾಯಿತಿ: ಚೀನಾ, ಶ್ರೀಲಂಕಾ, ಯುಎಸ್‌ಎ, ಫ್ರಾನ್ಸ್ ಮತ್ತು ಜರ್ಮನಿ ದೇಶದ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದರೂ, ನೆರೆಯ ಕರ್ನಾಟಕ, ಆಂಧ್ರ, ತಮಿಳುನಾಡಿನಿಂದ ಹೆಚ್ಚಿನ ಪ್ರವಾಸಿಗರು ಕೇರಳಕ್ಕೆ ಆಗಮಿಸುತ್ತಿದ್ದು, ಕರ್ನಾಟಕದ ಪ್ರವಾಸಿಗರಿಗೆ ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಅವರು ಪ್ರಕಟಿಸಿದರು.
ಪ್ರವಾಸಿ ತಾಣಗಳಲ್ಲಿ ಮುಂಚೂಣಿ: ಕೇರಳ ಗೂಗಲ್ ಸರ್ಚ್ ಟ್ರೆಂಡ್‌ಗಳಲ್ಲಿ ನಂ.1 ಪ್ರವಾಸಿ ತಾಣವಾಗಿದ್ದು, ವಿಶ್ವವಿಖ್ಯಾತ ತಾಜ್ ಮಹಲ್ ಅನ್ನು ಹಿಂದಿಕ್ಕಿದೆ. ಇದು ಬ್ರಾಂಡ್ ಕೇರಳಕ್ಕೆ ದೊರೆಯುತ್ತಿರುವ ಅಂತಾರಾಷ್ಟ್ರೀಯ ಮಾನ್ಯತೆಗೆ ಸಾಕ್ಷಿ ಎಂದು ಶೇಖ್ ಪರೀತ್ ತಿಳಿಸಿದರು.
‘ಹೋಮ್ ಆಫ್ ಆಯುವೇದ’ ಅಭಿಯಾನದ ಮೂಲಕ ಆಯುರ್ವೇದ ಉತ್ತೇಜಿಸಲಾಗುತ್ತಿದೆ. ಋತು ಆಧರಿತ ಪ್ರವಾಸೋದ್ಯಮ ತಾಣದಿಂದ ಎಲ್ಲ ಋತುಗಳ ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿಪಡಿಸಿ ಉತ್ತೇಜಿಸಲಾಗುತ್ತಿದೆ ಎಂದ ಅವರು, ಕೇರಳಕ್ಕೆ ಭೇಟಿ ನೀಡಿ ದೇವರ ಸ್ವಂತ ನಾಡಿನ ಅದ್ಭುತ ನೆನಪುಗಳನ್ನು ನಿಮ್ಮೆಂದಿಗೆ ಕೊಂಡೊಯ್ಯಿರಿ ಎಂದು ಆಹ್ವಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News