ಬ್ರಾಹ್ಮಣರು ಮತ್ತು ದಲಿತರು ಒಂದಾಗುವುದು ಪ್ರಗತಿಪರರಿಗೆ ಇಷ್ಟವಿಲ್ಲ: ಕನ್ನಡಪ್ರಭ ಸಂದರ್ಶನದಲ್ಲಿ ಪೇಜಾವರಶ್ರೀ
ಮಂಗಳೂರು, ಜ.16: ಬ್ರಾಹ್ಮಣರು ಮತ್ತು ದಲಿತರು ಒಂದಾಗುವುದು ಪ್ರಗತಿಪರರಿಗೆ ಇಷ್ಟವಿಲ್ಲ. ಹಿಂದೂ ಧರ್ಮವು ಒಗ್ಗಟ್ಟಾಗುವುದು ಅವರಿಗೆ ಇಷ್ಟವಿಲ್ಲ. ಹಿಂದೂ ಸಮಾಜವು ಯಾವಾಗಲು ಕಚ್ಚಾಡುತ್ತಲೇ ಇರಬೇಕು. ಒಂದಾಗಬಾರದು ಎಂಬುದೇ ಅವರ ಇಷ್ಟ ಎಂದು ಸೋಮವಾರ ಉಡುಪಿ ಶ್ರೀಕೃಷ್ಣ ಮಠದಲ್ಲಿ ದಾಖಲೆಯ ಐದನೆಯ ಬಾರಿ ಪರ್ಯಾಯ ಪೀಠವನ್ನೇರಲಿರುವ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಕನ್ನಡಪ್ರಭ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ನಾವು ಎಲ್ಲಾ ಹಿಂದೂಗಳನ್ನು ಒಟ್ಟುಗೂಡಿಸುತ್ತಿದ್ದೇವೆ. ದಲಿತರಿಗೆ ಹೆಚ್ಚು ಗೌರವ ತೋರುತ್ತಿದ್ದೇವೆ. ಇದರಿಂದ ಹಿಂದುತ್ವ ಬಲಗೊಳ್ಳುತ್ತಿದೆ. ಆದರೆ ಪ್ರಗತಿಪರರಿಗೆ ಇಷ್ಟ ಇಲ್ಲ, ಹಿಂದೂತ್ವ ಅಂದರೆ ಬ್ರಾಹ್ಮಣಿಸಂ ಎನ್ನುವ ಭ್ರಾಂತಿ ಇವರಲ್ಲಿದೆ. ಬ್ರಾಹ್ಮಣ ಪೀಠಗಳು ಬಲಗೊಳ್ಳುತ್ತಿವೆ. ಹಿಂದುತ್ವದ ಶಕ್ತಿ ಹೆಚ್ಚುತ್ತಿದೆ ಎನ್ನುವ ಭಯ ಇದೆ. ಆದುದರಿಂದ ಅವರೆಲ್ಲ ಸದಾ ತನ್ನನ್ನೇ ಟಾರ್ಗೆಟ್ ಮಾಡುತ್ತಿರುತ್ತಾರೆ ಎಂದು ಪೇಜಾವರಶ್ರೀ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದಲ್ಲಿನ ಪಂಕ್ತಿಭೇದ ಕುರಿತಂತೆ ಮಾತನಾಡಿದ ಸ್ವಾಮೀಜಿ, ಶ್ರೀಕೃಷ್ಣ ಮಠದಲ್ಲಿ ಸಹಪಂಕ್ತಿ ಭೋಜನ ಮತ್ತು ಸಾಂಪ್ರದಾಯಿಕ ಭೋಜನ ಎಂದಿದೆ. ಆದರೆ ಅದು ಪಂಕ್ತಿಭೇದವಲ್ಲ. ಮಠಕ್ಕೆ ಯಾರೇ ಊಟಕ್ಕೆ ಬಂದರೂ ಒಟ್ಟಿಗೆ ಕುಳಿತು ಸಹಭೋಜನಕ್ಕೆ ಅವಕಾಶವಿದೆ. ನಿತ್ಯ ಸಾವಿರಾರು ಜನರು ಊಟ ಮಾಡುತ್ತಿದ್ದಾರೆ. ಅದರಲ್ಲಿ ಜಾತಿ, ಭೇದವಿಲ್ಲ. ಇದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಆದರೆ ಸಾಂಪ್ರದಾಯಿಕ ಭೋಜನದ ಬಗ್ಗೆ ಕೆಲವರು ಆಕ್ಷೇಪಿಸುತ್ತಿದ್ದಾರೆ. ಕೆಲವರು ಮಾಂಸಾಹಾರ ಮಾಡುವವರ ಜೊತೆಗೆ ಕುಳಿತು ಊಟ ಮಾಡುವುದಿಲ್ಲ ಎಂಬಿತ್ಯಾದಿ ನಿಯಮಗಳನ್ನು ಪಾಲಿಸುತ್ತಾರೆ. ಅಂತಹವರು ಊಟಕ್ಕೆ ಬಂದಾಗ ಅವರಿಗೂ ಊಟ ಹಾಕಲೇಬೇಕು, ಅವರಿಗೆ ಚೌಕಿಯಲ್ಲಿ ಊಟ ಹಾಕುತ್ತೇವೆ. ಅದನ್ನೇ ಪಂಕ್ತಿಭೇದ ಎಂದು ಆರೋಪಿಸುವುದು ಸರಿಯಲ್ಲ ಅವರು ಅಭಿಪ್ರಾಯಿಸಿದ್ದಾರೆ.
ದಲಿತರ ಬಗ್ಗೆ ಕಾಳಜಿ ಹೊಂದಿರುವ ಪೇಜಾವರಶ್ರೀ ತನ್ನ ಉತ್ತರಾಧಿಕಾರಿಯಾಗಿ ದಲಿತರೊಬ್ಬರನ್ನು ಸ್ವೀಕರಿಸುವಂತೆ ಪ್ರಗತಿಪರರ ಸವಾಲಿನ ಕುರಿತಂತೆ ಪ್ರತಿಕ್ರಿಯಿಸಿರುವ ಸ್ವಾಮೀಜಿ, ‘‘ನಮ್ಮ ಮಠಕ್ಕೆ ಮಾತ್ರ ಯಾಕೆ ಈ ಸವಾಲು? ಯಾವ ಮಠಗಳು ತಮ್ಮ ಜಾತಿಯವರನ್ನು ಬಿಟ್ಟು ಬೇರೆ ಜಾತಿಯವರನ್ನು ಉತ್ತರಾಧಿಕಾರಿಯಾಗಿ ನೇಮಿಸಿವೆ? ರಾಜ್ಯದಲ್ಲಿ ನೂರಾರು ವೀರಶೈವ ಮಠಗಳಿವೆ, ಒಕ್ಕಲಿಗ ಮಠಗಳಿವೆ, ಬೇರೆ ಬ್ರಾಹ್ಮಣ ಮಠಗಳಿವೆ. ಎಲ್ಲಾ ಮಠಗಳು ತಂತಮ್ಮ ಜಾತಿಯವರನ್ನೇ ಉತ್ತರಾಧಿಕಾರಿಯಾಗಿ ನೇಮಿಸುತ್ತಿದ್ದಾರೆ. ಹಾಗಿರುವಾಗ ನಾವು ಬ್ರಾಹ್ಮಣೇತರರೊಬ್ಬರನ್ನು ಉತ್ತರಾಧಿಕಾರಿಯಾಗಿ ನೇಮಿಸಬೇಕು ಎಂದು ಒತ್ತಾಯಿಸುವುದು ಹೇಳುವುದು ಎಷ್ಟು ಸರಿ? ಇದೇ ಒತ್ತಾಯವನ್ನು ರಾಜ್ಯದ ಬೇರೆ ಮಠಗಳಿಗೆ ಯಾಕೆ ಮಾಡುವುದಿಲ್ಲ’’ ಎಂದು ಪ್ರಗತಿಪರರ ರನ್ನು ಮರುಪ್ರಶ್ನಿಸಿದ್ದಾರೆ.