ಎಳೆಯ ಮನಸುಗಳು ಮತಾಂಧತೆಯಲ್ಲಿ ಕಳೆದುಹೋಗದಿರಲಿ
ಬಂಟಮಲೆ ಹೆಸರೇ ಹೇಳುವ ಹಾಗೆ ಒಂದು ದಟ್ಟಾರ ಣ್ಯ. ಉನ್ನತ ಬೆಟ್ಟ ಗುಡ್ಡಗಳು, ನಿಬಿಡ ಅರಣ್ಯಗಳು, ಝರಿ ತೊರೆಗಳು ಸಮೃದ್ಧವಾಗಿದ್ದು, ಎಂತಹ ಮನಸುಗಳನ್ನೂ ಧ್ಯಾನಸ್ಥಗೊಳಿಸಬಲ್ಲ ನಿಸರ್ಗ ತಾಣ. ಈ ಅರಣ್ಯದ ಮಡಿಲಿನಲ್ಲಿದ್ದ ಇರುವ ಬೆರಳೆಣಿಕೆಯ ಮನೆಗಳಲ್ಲಿ ನಮ್ಮದೂ ಒಂದು. ದಟ್ಟಡವಿಯಲ್ಲಿ ದನ, ನಾಯಿ, ಬೆಕ್ಕು ಇತ್ಯಾದಿ ಸಾಕುಪ್ರಾಣಿ ಳನ್ನು ಹೊರತುಪಡಿಸಿದರೆ ಕಾಡುಪ್ರಾಣಿಗಳು, ಹಕ್ಕಿಗಳು, ಚಿತ್ರ ವಿಚಿತ್ರ ಕೀಟ ಸಮುದಾಯ, ಕಾಲಿನಡಿಯಲ್ಲಿ ಸರ್ರನೆ ಸರಿದುಹೋಗುವ ಹಾವುಗಳು, ಎಲ್ಲಕ್ಕಿಂತಲೂ ವಿಶೇಷವಾಗಿ ರಕ್ತ ಪಿಪಾಸು ಜಿಗಣೆಗಳೇ ನಮ್ಮ ಸರ್ವಋತು ಸಂಗಾತಿಗಳು. ಇವೆಲ್ಲ ಸಾಲದೆಂಬಂತೆ, ಕೆಲವೇ ಕೆಲವು ತಿಂಗಳುಗಳನ್ನು ಹೊರತುಪಡಿಸಿ ವರ್ಷಪೂರ್ತಿ ಸುರಿಯುವ ಭಯಂಕರ ಮಳೆ, ಕಂಗು ತೆಂಗುಗಳನ್ನು ನೆಲಕಚ್ಚಿಸುವ ಬಿರುಗಾಳಿ ಇತ್ಯಾದಿ ವಿಪರೀತ ಪ್ರಕೃತಿ ವಿದ್ಯಮಾನಗಳು ಇಲ್ಲಿ ಮಾಮೂಲು. ಒಂದರ್ಥದಲ್ಲಿ ಹಳ್ಳಿಗಾಡಿನ ಬದುಕು ಎಷ್ಟು ಸಂತಸಕರವೋ ಅಷ್ಟೇ ಸವಾಲಿನದ್ದುಕೂಡಾ. ಇಂತಹ ಸಂತಸ ಮತ್ತು ಸವಾಲುಪೂರ್ಣ ಬದುಕಿನ ಅನುಭವಗಳೊಂದಿಗೆ ನನ್ನ ಬಾಲ್ಯ ಕಳೆದಿತ್ತು.
'ತಂದೆ ರಾಮಾಯಣ ಮಹಾಭಾರತ ಮಹಾಕಾವ್ಯಗಳನ್ನು ಅರೆದು ಕುಡಿದವರು. ಮಾತ್ರವಲ್ಲ, ಒಳ್ಳೆಯ ಯಕ್ಷಗಾನ ಪಟು ಕೂಡಾ. ಅಮ್ಮ ಆ ಕಾಲಕ್ಕೇ ವೈವಿಧ್ಯಮಯ ಓದಿಗೆ ತೆರೆದುಕೊಂಡವರು ಮತ್ತು ಬದುಕಿನ ಯಾವುದೇ ಸಂದರ್ಭದಲ್ಲಿಯೂ ಓದನ್ನು ಬಿಟ್ಟುಕೊಡದವರು. ವಿ.ಸ.ಖಾಂಡೇಕರರ ಯಯಾತಿ''ಯಿಂದ ಹಿಡಿದು ಮ್ಯಾಕ್ಸಿಂ ಗಾರ್ಕಿಯ ತಾಯಿ'ಯ ವರೆಗೂ ಬಗೆ ಬಗೆಯ ಕೃತಿಗಳನ್ನು ಓದಿದವರು. ಅಲ್ಲದೆ, ಈ ಕಾಲದ ಪರಿಭಾಷೆಯಲ್ಲಿ ಹೇಳುವುದಾದರೆ ಓರ್ವ ಅಪ್ಪಟ ಸ್ತ್ರೀವಾದಿ. ಹೀಗೆ ಎಲ್ಲ ಅರ್ಥದಲ್ಲಿಯೂ ಸಮೃದ್ಧವೂ ಸುಸಂಸ್ಕೃ (ತವೂ ಆದ ಒಂದು ಕುಟುಂಬದಲ್ಲಿ ಹುಟ್ಟಿಬೆಳೆದ ನಾನು ಅಪ್ಪಟ ಮಾನವೀಯ ವಿಚಾರಗಳಿಗೆ ಧಾರಾಳ ತೆರೆದುಕೊಳ್ಳುತ್ತಲೇ ಹೋದೆ. ಇತರ ಮತೀಯರ ಸಂಪರ್ಕ ನಮಗೆ ಅಷ್ಟೊಂದು ಇರಲಿಲ್ಲವಾದರೂ ಅಪ್ಪ ಅಮ್ಮನ ಬಾಯಿಯಿಂದ ಅವರುಗಳ ಬಗ್ಗೆ ಅಲ್ಪಸ್ವಲ್ಪ ಕೇಳುತ್ತಿದ್ದೆ. ನಮ್ಮೂರಿನ ಪುರ್ಬುಗಳ ಕ್ರೈಸ್ತ ಸಮುದಾಯದವರು) ಸ್ನೇಹ ಸ್ವಭಾವಗಳ ಬಗ್ಗೆ, ಅವರ ಪರಿಶ್ರಮಪೂರ್ಣ ಬದುಕಿನ ಬಗ್ಗೆ ಒಳ್ಳೆಯ ಮಾತುಗಳನ್ನು ಕೇಳುತ್ತಿದ್ದೆ.
ಅಡಿಕೆ ವ್ಯಾಪಾರಕ್ಕೆಂದು ಆಗೊಮ್ಮೆ ಈಗೊಮ್ಮೆ ಅಂಗಳದಲ್ಲಿ ಪ್ರತ್ಯಕ್ಷವಾಗುತ್ತಿದ್ದ ಕುಟ್ಟ ಬ್ಯಾರಿಗೆ ಕಾಫಿ, ಗಂಜಿ, ಇತ್ಯಾದಿ ನೀಡುವಾಗಲೆಲ್ಲ ಆತನ ಬಳಿ ನಾನೂ ಕುಳಿತಿರುತ್ತಿದ್ದೆ. ಅನ್ಯ ಮತಗಳ ಬಗ್ಗೆ ನಮಗೆ ಅರಿವಿರುವ ಮಾತು ಒತ್ತಟ್ಟಿಗಿರಲಿ, ನಮ್ಮ ಮತಧರ್ಮಗಳ ಬಗ್ಗೆಯೂ ನಮಗೆ ಗೊತ್ತಿರದ ಪರಿಸರ ಅದು. ಒಂದೆಡೆಯಲ್ಲಿ ಪ್ರಕೃತಿ ಕಲಿಸಿದ ಮುಗ್ಧತೆ, ಇನ್ನೊಂದೆಡೆ ಓದಿನ ಮೂಲಕ ದಕ್ಕಿದ ವೈಚಾರಿಕತೆ, ಈ ಎಲ್ಲದರ ಪರಿಣಾಮವಾಗಿ ನಿಜವಾದ ಅರ್ಥದಲ್ಲಿ ನಮ್ಮದು ಮನುಜಮತವಾಗಿತ್ತು, ವಿಶ್ವಪಥವಾಗಿತ್ತು. ದುರದೃಷ್ಟವಶಾತ್, ದಿನಗಳು ಹೀಗೆಯೇ ಉಳಿಯಲಿಲ್ಲ. ಪಕ್ಕದ ಪ್ರಾಥ'ಮಿಕ ಶಾಲೆಯ ಓದು ಮುಗಿದ ಬಳಿಕ ಅನಿವಾರ್ಯವಾಗಿ ನಾನು ದೂರದ ಪಂಜ ಹೈಸ್ಕೂಲಿಗೆ ಹೋಗಬೇಕಾಯಿತು. ಆ ಹೈಸ್ಕೂಲು ನಮ್ಮ ಮನೆಯಿಂದ ಸುಮಾರು ಎಂಟು ಕಿಲೋಮೀಟರುಗಳಷ್ಟು ದೂರದಲ್ಲಿ ಇದ್ದುದರಿಂದ ಪರಿಚಿತರೊಬ್ಬರ ಮನೆಯಲ್ಲಿ ಉಳಿದುಕೊಂಡು ಶಾಲೆಗೆ ಹೋಗುವುದು ಅನಿವಾರ್ಯವಾಗಿತ್ತು. ಅದಾಗ ನಾವು ಸಾಕಷ್ಟು ದೊಡ್ಡವರಾಗಿದ್ದೆವಲ್ಲವೇ?' ಹಾಗಾಗಿ ನಮ್ಮ ಅರಿವಿನ ವಿಸ್ತಾರವಾಯಿತು ನೋಡಿ! ಮೊದಲಾಗಿ ಲಿಂಗಭೇದದ ಜ್ಞಾನೋದಯವಾಯಿತು. ವಯೋಸಹಜವಾಗಿ, ಹುಡುಗರು ನಮ್ಮ ಪರಮ ಶತ್ರುಗಳು ಎನಿಸಿಕೊಂಡರು. ಆದ್ದರಿಂದ ಶಾಲೆಗೆ ಹೋಗುವಾಗ ಪ್ರತ್ಯೇಕವಾಗಿ ಹುಡುಗಿಯರದು ಒಂದು ಗುಂಪು ಮತ್ತು ಹುಡುಗರದು ಒಂದು ಗುಂಪು ಎಂದು ಮಾಡಿಕೊಂಡು ಸಾಕಷ್ಟು' ಅಂತರ ಇರಿಸಿಕೊಂಡು ನಾವು ಹೋಗುತ್ತಿದ್ದೆವು. ಯಾವುದೇ ಸಂಕಷ್ಟದ ಸಂದರ್ಭ ಬರಲಿ ಹುಡುಗರು ಮತ್ತು ಹುಡುಗಿಯರು ಮಾತನಾಡುತ್ತಿರಲಿಲ್ಲ, ಪರಸ್ಪರ ಸಹಾಯವಂತೂ ದೂರದ ಮಾತು.
ಹೀಗಿರುವಾಗ ನಾವು ಒಂದು ಭಯಂಕರ ಮತ್ತು ವಿಚಿತ್ರ ಸಮಸ್ಯೆ ಎದುರಿಸತೊಡಗಿದೆವು. ಅದೇನೆಂದರೆ ನಾವು ಹೋಗುವ ದಾರಿಯಲ್ಲಿ ಒಂದು ಚರ್ಚ್ ಇತ್ತು. ಆ ಚರ್ಚಿನ ಆವರಣ ದಾಟಿಯೇ ನಾವು ಶಾಲೆಗೆ ಹೋಗಬೇಕಾಗಿತ್ತು. ಅಲ್ಲಿ ಕಾಣಸಿಗುತ್ತಿದ್ದ, ಬಿಳಿಯ ನಿಲುವಂಗಿ ತೊಟ್ಟ ಪಾದ್ರಿಯನ್ನು ಕಂಡರೆ ನಮಗೆ ಒಂಥರಾ ಭಯ. ಹೇಗಾದರೂ ಮಾಡಿ ಅವರನ್ನು ಭೇಟಿಯಾಗುವ ಅವಕಾಶ ತಪ್ಪಿಸಿಕೊಳ್ಳುವ ಸಲುವಾಗಿ ಚರ್ಚಿನ ಅವರಣ ಸಮೀಪಿಸುತ್ತಿದ್ದಂತೆ, ಪಾದದಿಂದಲೂ ಕೆಳಗೆ ಎರಡು ಇಂಚು ಉದ್ದವಿರುವ ಲಂಗವನ್ನು ಮನೆಯಿಂದ ಜೋಪಾನವಾಗಿ ತಂದ ಬಾಳೆ ಹಗ್ಗದಿಂದ ಎತ್ತಿ ಸೊಂಟಕ್ಕೆ ಬಿಗಿದು, ಒಂದೇ ಉಸಿರಿನಲ್ಲಿ ಓಟ ಶುರುಮಾಡುತ್ತಿದ್ದೆವು. ಹಾಗೆ ಓಡಿದವರು ಮತ್ತೆ ನಿಲ್ಲುತ್ತಿದ್ದುದು ಚರ್ಚ್ ಅವರಣ ದಾಟಿದ ಮೇಲೆಯೇ. ಇದಕ್ಕೆಲ್ಲ ಕಾರಣ ಇಷ್ಟೆ- "ಪಾದ್ರಿಗಳ ಕೈಗೆ ಸಿಕ್ಕಿಬಿದ್ದರೆ ಮತಾಂತರ ಮಾಡುತ್ತಾರೆ ಎಂದು ಅದು ಹೇಗೋ ನಮ್ಮ ತಲೆಗೆ ತುಂಬಿಸಲಾಗಿತ್ತು. ಈ ಸುದ್ದಿಮೂಲ ಯಾವುದು ಎನ್ನುವುದು ಮಾತ್ರ ಯಾರಿಗೂ ಗೊತ್ತಿರಲಿಲ್ಲ. ಆದರೆ ವಿಷಯವನ್ನು ಒಬ್ಬಳು ಇನ್ನೊಬ್ಬಳಿಗೆ ದಾಟಿಸುತ್ತಾ ಎಲ್ಲರೂ ಭಯ ಹಂಚುವ ಕೆಲಸದಲ್ಲಿಯಂತೂ ನಿಷ್ಠೆಯಿಂದ ತೊಡಗಿದ್ದೆವು.
ನಿಜ ಹೇಬೇಕೆಂದರೆ, ಅತ್ಯಂತ ಸಾತ್ವಿಕ ಸ್ವಭಾವದ ಆ ಪಾದ್ರಿ ಮಾನವೀಯತೆಯ ಮೂರ್ತಿಯಾಗಿದ್ದರು. ನಮ್ಮನ್ನು ಅತ್ಯಂತ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಬಹಳ ದೂರದಿಂದ ನಡೆದು ಆಯಾಸಪಟ್ಟಿರುತ್ತಿದ್ದ ನಮಗೆ ನೀರು ಬೇಕಾದರೆ ಕುಡಿದುಕೊಂಡು ಹೋಗಿ ಮಕ್ಕಳೇ.. ಎಂದು ವಾತ್ಸಲ್ಯಪೂರ್ಣವಾಗಿ ದಿನವೂ ಹೇಳುತ್ತಿದ್ದರು. ಯಾವ ರೀತಿಯಿಂದ ನೋಡಿದರೂ ಅವರಲ್ಲಿ ಕೆಡುಕು ಕಾಣುವುದು ಸಾಧ್ಯವಿರಲಿಲ್ಲ. ತಮಾಷೆಯೆಂದರೆ, ತಿಂಡಿ ತಿಂದುಹೋಗಿ ಮಕ್ಕಳೇ" (ಎಂದು ಕ್ರಿಸ್‌ಮಸ್ ಹಬ್ಬದ ವೇಳೆ ಪಾದ್ರಿಯವರು ಕರೆದಾಗ ತಿಂಡಿಯ ಆಸೆಯಿಂದಾಗಿ) "ಮತಾಂತರ ನಮಗೆ ಮರೆತೇಹೋಗಿರುತ್ತಿತ್ತು. ಚರ್ಚಿನ ಪಕ್ಕದ ಗದ್ದೆಯಲ್ಲಿ ಬೆಳೆದ ಗೆಣಸಿನ ಗಡ್ಡೆಗಳನ್ನು ಅಗೆಯುವಾಗ ಶಾಲಾ ಮಕ್ಕಳಿಗೆಂದೇ ಕೆಲವನ್ನು ತೆಗೆದಿರಿಸಿ ತೊಳೆದು ಕೊಡುವಾಗಲೂ ನಮ್ಮನ್ನು ಮತಾಂತರ ಕಾಡುತ್ತಿರಲಿಲ್ಲ. ತಿನ್ನುವುದೆಲ್ಲ ಮುಗಿಯುತ್ತಲೇ ಮತ್ತೆ ಮತಾಂತರದ ಭೂತ ನಮ್ಮನ್ನು ಕಾಡುವುದು ಮತ್ತು ನಾವು ಓಟ ಹಾಕುವುದು ನಡೆದೇ ಇತ್ತು. ಎಲ್ಲಕ್ಕಿಂತಲೂ ಹೆಚ್ಚಿನ ತಮಾಷೆಯೆಂದರೆ ನಮಗೆ ಮತ ಎಂದರೇನೆಂದು ಗೊತ್ತಿರಲಿಲ್ಲ, ಅಂತರವೆಂದರೇನೆಂದು ಗೊತ್ತಿರಲಿಲ್ಲ, ಮತಾಂತರವೆಂದರೇನೆಂದು ಅದಕ್ಕೆ ಮೊದಲೇ ಗೊತ್ತಿರಲಿಲ್ಲ.
ಮತಾಂತರ- ಹಾಗೆಂದ್ರೇನೇ?" "ಎಂದು ಗೆಳತಿಯರನ್ನು ಕೇಳಿದರೆ ನನಗೂ ಗೊತ್ತಿಲ್ವೆ.." ಎಂಬ ಉತ್ತರವೇ ಬರುತ್ತಿತ್ತು. ಮತಧರ್ಮಗಳ ವಾಸನೆಯೇ ಇಲ್ಲದ ಮನೆಯೊಂದರಲ್ಲಿ ಬೆಳೆದ ನನ್ನಂಥವರಲ್ಲಿಯೂ ಈ ಮತಾಂತರದ ಕಲ್ಪನೆಯನ್ನು ಮೂಡಿಸಿದವರು ಯಾರು? ಆ ಸಜ್ಜನ ಪಾದ್ರಿಯ ಬಗ್ಗೆ ಆಧಾರರಹಿತ ಭಯವನ್ನು ನನ್ನಲ್ಲಿ ಮೂಡಿಸಿ ಅವರು ತೋರುತ್ತಿದ್ದ ಪ್ರೀತಿಯನ್ನೂ ಗುಮಾನಿಯಿಂದ ನೋಡುವಂತೆ ಮಾಡಿದ ಅಂಶವಾದರೂ ಯಾವುದು? ಇತ್ಯಾದಿ ಪ್ರಶ್ನೆಗಳು ನನ್ನನ್ನು ದೀರ್ಘ ಕಾಲದವರೆಗೂ ಕಾಡುತ್ತಲೇ ಇತ್ತು.
ವ್ಯಕ್ತಿಗಳಿಂದಲೇ ಸಮಾಜ. ಹಾಗಾಗಿ ಸಮಾಜ ಬದಲಾವಣೆ ಆಗಬೇಕಾದರೆ ಸುಧಾರಣೆ ಎನ್ನುವುದು ವ್ಯಕ್ತಿಯಿಂದಲೇ ಅಥಾ ತ್‌ರ್ ಮನೆಯಿಂದಲೇ ಆರಂಭವಾಗಬೇಕು ಎನ್ನುವುದು ನನ್ನ ಧೋರಣೆ. ನನ್ನ ಮಗನ ಮನಸಿನಲ್ಲಿಯಾದರೂ ಈ ತೆರನ ಭೇದಭಾವಗಳು ಕಾಣಿಸಿಕೊಳ್ಳಲೇಬಾರದು ಎಂಬ ಆಲೋಚನೆಗಳನ್ನು ಇರಿಸಿಕೊಂಡು ಎಚ್ಚರದಿಂದ ಆತನನ್ನು ಬೆಳೆಸುತ್ತಾ ಬಂದೆ. ನೆರೆ ಮನೆಯ ಮ್ಯಾಕ್ಸಿಂ ಸೋಜರ ಮಗಳೊಂದಿಗೆ, ಇಬ್ರಾಹಿಂ ಸಾಹೇಬರ ಮಗನೊಂದಿಗೆ ಭೇದಭಾವವಿಲ್ಲದೆ ಆತ ಬೆರೆಯುತ್ತಿದ್ದ, ತಿಂಡಿಗಳನ್ನು ಹಂಚಿಕೊಳ್ಳುತ್ತಿದ್ದ, ಅವರ ಹಬ್ಬಗಳನ್ನು ಸಂಭ್ರಮಿಸುತ್ತಿದ್ದ. ಅದನ್ನು ನೋಡುವಾಗ ನನಗೂ ಒಂದು ರೀತಿಯಲ್ಲಿ ಸಮಾಧಾನವಾಗುತ್ತಿತ್ತು. ಆದರೆ ಆತ ಶಾಲೆಗೆ ಹೋಗಲಾರಂಭಿಸುತ್ತಲೇ ಮತ್ತೆ ಇತಿಹಾಸ ಮರುಕಳಿಸಲಾರಂಭಿಸಿತು. ಸಾಮ್ಯದ ಬಗೆಗಿನ ಪ್ರಶ್ನೆಗಳು ಮರೆಗೆ ಸರಿಯುತ್ತಾ ಕ್ರಮೇಣ ಭೇದಗಳ ಬಗೆಗಿನ ಪ್ರಶ್ನೆಗಳು ಅರಂಭವಾದವು. ಮೊದಮೊದಲು ಜಾತಿ ಮತ ಎಂದರೇನು ಎಂದು ಕೇಳಲಾರಂಭಿಸಿದ. ಬಳಿಕ ಅವರು ಯಾಕೆ ಮುಸ್ಲಿಂ, ನಾವು ಏಕೆ ಹಿಂದು ಎಂದು ಕೇಳಲಾರಂಭಿಸಿದ. ಇನ್ನೂ ಬೆಳೆಯುತ್ತ ಹೋದಂತೆ ಅವರ ಪ್ರಾಥನಾ ಮಂದಿರಕ್ಕೆ ಮಸೀದಿ, ಚರ್ಚ್ ಎನ್ನುತ್ತೇವೆ, ನಮ್ಮ ಪ್ರಾಥರ್ನಾ ಮಂದಿರಕ್ಕೆ ಏಕೆ ದೇವಸ್ಥಾನ ಎನ್ನುತ್ತೇವೆ ಎಂದೆಲ್ಲ ಕೇಳಲಾರಂಭಿಸಿದ. ಈಗಂತೂ ಆತ ಪೂರ್ಣವಾಗಿ ಬೆಳೆದಿದ್ದಾನೆ. ಯಾಕೆಂದರೆ ಆತ ಈ ತೆರನ ಯಾವ ಪ್ರಶ್ನೆಗಳನ್ನೂ ಕೇಳುವುದಿಲ್ಲ. ಆತನಿಗೆ ಎಲ್ಲ ಉತ್ತರವೂ ಸಿಕ್ಕಿದೆ. ನಾವೂ, ಕ್ರೈಸ್ತರೂ, ಮುಸ್ಲಿಮರೂ ಒಂದೆ ಅಲ್ಲ ಎನ್ನುವುದು ಅವನಿಗೆ ಸ್ಪಷ್ಟವಾಗಿದೆ! ಪಾಕಿಸ್ಥಾನವೆಂದರೆ ನಮ್ಮ ಮಹಾ ಶತ್ರುರಾಷ್ಟ್ರ, ಪಾಕಿಸ್ತಾನದಲ್ಲಿ ಇರುವವರೆಲ್ಲ ಕೆಟ್ಟವರು ಎಂಬ ತೀರ್ಮಾನವನ್ನೂ ಅದಾಗಲೇ ತೆಗೆದುಕೊಂಡುಬಿಟ್ಟಿದ್ದಾನೆ! "ಮೊನ್ನೆ ಭಾರತ ಶ್ರೀಲಂಕಾ ಕ್ರಿಕ್ೆ ಪಂದ್ಯವಾಗುವಾಗ ಭಾರತ ಬ್ಯಾಟಿಂಗ್ ನಡೆಸುತ್ತಿತ್ತು. ಅಲ್ಲಿದ್ದ ಪಾಕಿಸ್ತಾನಿ ಅಂಪಾಯರ್‌ನನ್ನು ನೋಡುತ್ತಲೇ ನನ್ನ ಮಗ ತಕ್ಷಣ ಹೇಳಿಯೇ ಬಿಟ್ಟ" ಹಾಂ..ಅವನು ಔಟ್ ಕೊಟ್ಟ ಹಾಗೆಯೇ! "
ಹುಟ್ಟುವ ಎಲ್ಲ ಮಕ್ಕಳೂ ವಿಶ್ವಮಾನವರಾಗಿರುತ್ತಾರೆ. ಆದರೆ ನಾವು ಅವರನ್ನು ಅಲ್ಪಮಾನವರನ್ನಾಗಿಸುತ್ತೇವೆ' ಎಂದು ಕುವೆಂಪು ಅವರು ಸರಿಯಾಗಿಯೇ ಹೇಳಿದ್ದಾರೆ. ಮಕ್ಕಳು ನಿಜಕ್ಕೂ ದೇವರು. ಅವರದ್ದು ಹೂವಿನಂಥ 'ಮನಸು. ಸರ್ವ ಸಮಭಾವ ಮತ್ತು ಸಾಮರಸ್ಯದ ಗುಣ ಅವರಲ್ಲಿ ಅಭಿಜಾತವಾಗಿಯೇ ಬಂದಿರುತ್ತದೆ. ಆದರೆ ಆ ಮಕ್ಕಳಿಗೆ ಹಿರಿಯರಾದ ನಾವು ಎಂತಹ ಪರಿಸರ ಒದಗಿಸಿಕೊಡುತ್ತೇವೆ ಎಂದರೆ ಅಲ್ಲಿ ಅವರು ತಮ್ಮ ಮನಸಿನ ಮುಗ್ಧತೆಯನ್ನು ಮತ್ತು ಪರಿಶುದ್ಧತೆಯನ್ನು ಉಳಿಸಿಕೊಳ್ಳುವುದು ಸಾಧ್ಯವೇ ಇಲ್ಲ. ಆ ಮಕ್ಕಳ ಕೋಮಲ ಮನಸುಗಳಲ್ಲಿ ಜಾತಿ, ಮತ, ಭಾಷೆ, ಭೇದಗಳ ವಿಷ ಬೀಜ ಬಿತ್ತಿ, ದ್ವೇಷಾಸೂಯೆಗಳನ್ನು ಪೋಷಿಸಿ, ಅವರನ್ನು ನಾವು ಎಲ್ಲರೀತಿಯಲ್ಲಿಯೂ ಜೀವವಿರೋಧಿಗಳನ್ನಾಗಿಯೂ ಸಮಾಜವಿರೋಧಿಗಳನ್ನಾಗಿಯೂ ಮಾಡುತ್ತೇವೆ. ಇಂದಿನ ಮಕ್ಕಳೇ ಮುಂದಿನ ಜನಾಂಗ. ಒಂದು ಆರೋಗ್ಯಪೂರ್ಣವಾದ ಸಮಸಮಾಜ ಭವಿಷ್ಯದಲ್ಲಿ ರೂಪುಗೊಳ್ಳಬೇಕಾದರೆ ಇಂದಿನ ಈ ಮಕ್ಕಳು ವಿಶ್ವಮಾನವರಾಗಿ ಬೆಳೆಯಲು ನಾವು ಪೂರಕ ಪರಿಸರ ಒದಗಿಸಿಕೊಡಬೇಕು. ಮುಖ್ಯವಾಗಿ, ಎಳೆಯ ಮನಸುಗಳು ಮತಾಂಧತೆಯಲ್ಲಿ ಕಳೆದುಹೋಗದಂತೆ ಪ್ರತಿಯೊಬ್ಬರೂ ಎಚ್ಚರವಹಿಸಬೇಕು. ದ್ವೇಷಿಸುವ ಬದಲು ಪ್ರೀತಿಸುವುದನ್ನು ಅವರಿಗೆ ಕಲಿಸಿಕೊಡಬೇಕು. ಮಾನವೀಯ ಸಂಬಂಧಗಳ ವಿಚಾರದಲ್ಲಿ ಅವರ ಮಗುತನವನ್ನು ನಿರಂತರವಾಗಿ ಸಂರಕ್ಷಿಸಿಕೊಂಡು ಹೋಗಬೇಕು. ಈ ಮಗುತನ' ಎಂಬುದು ಇಂದಿನ ಪ್ರಕ್ಷುಬ್ಧ ಜಗತ್ತಿಗೆ ಅತ್ಯಂತ ಜರೂರಾಗಿ ಬೇಕಿರುವ ಸಂಗತಿ.
ಈ ಮಗುತನವನ್ನು ಸಂರಕ್ಷಿಸುವ, ಬೆಳೆಸುವ ಮತ್ತು ಪೋಷಿಸುವ ಮೂಲಕ ವಿಶ್ವಮಾನವ ಪ್ರಜ್ಞೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಹಬಾಳ್ವೆ ಸಾಗರದಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯುವ ಆಗತ್ಯವಿದೆ; ಆ ಮೂಲಕ ಮಾನವೀಯ ಸಮಾಜವೊಂದನ್ನು ನಿರ್ಮಿಸುವ ದಿಶೆಯಲ್ಲಿ ಸರ್ವಪ್ರಯತ್ನವನ್ನೂ ಮಾಡಬೇಕಾಗಿದೆ.