ವಿವಿಗಗಳಲ್ಲಿ ಸೆಬರ್ ಸುರಕ್ಷತಾ ಕೋರ್ಸ್‌ಗಳು ಆರಂಭ: ಸಚಿವ ಜಯಚಂದ್ರ

Update: 2016-01-16 18:18 GMT

ಬೆಂಗಳೂರು, ಜ.16: ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಸೈಬರ್ ಸುರಕ್ಷತೆಗೆ ಸಂಬಂಧಿಸಿದ ವಿವಿಧ ಕೋರ್ಸ್‌ಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಶನಿವಾರ ನಗರದ ಅರಮನೆ ರಸ್ತೆಯಲ್ಲಿರುವ ಉನ್ನತ ಶಿಕ್ಷಣ ಪರಿಷತ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಸೈಬರ್ ಸುರಕ್ಷತಾ ಕೋರ್ಸುಗಳನ್ನು ಆರಂಭಿಸುವುದರಿಂದ ಸುಮಾರು ಒಂದು ಲಕ್ಷ ಮಂದಿ ಯುವಕರಿಗೆ ಉದ್ಯೋಗಾವಕಾಶಗಳು ಲಭ್ಯವಾಗಲಿವೆ ಎಂದರು.
ಯುವ ಸಪ್ತಾಹ: ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಜ.12 ರಿಂದ ಆಚರಿಸಲಾಗುತ್ತಿರುವ ರಾಷ್ಟ್ರೀಯ ಯುವ ಸಪ್ತಾಹದ ಸಮಾರೋಪ ಸಮಾರಂಭವು ಜ.19ರಂದು ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ವಿವಿಗಳಿಗೆ ಅನುದಾನ: ಹಂಪಿ ಕನ್ನಡ ವಿಶ್ವವಿದ್ಯಾನಿಲಯ, ಕಲಬುರಗಿ, ದಾವಣಗೆರೆ ಹಾಗೂ ಬಿಜಾಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ತಲಾ 20 ಕೋಟಿ ರೂ., ನರಗುಂದದಲ್ಲಿ ಹೊಸ ಎಂಜಿನಿ ಯರಿಂಗ್ ಕಾಲೇಜು ಆರಂಭಿಸಲು 26 ಕೋಟಿ ರೂ. ಅನುದಾನ ನೀಡಲು ನಿರ್ಧರಿಸಲಾಗಿದೆ ಎಂದು ಜಯಚಂದ್ರ ತಿಳಿಸಿದರು.
ಇದಲ್ಲದೆ, ಜೇವರ್ಗಿಯಲ್ಲಿ ಹೊಸ ಪದವಿ ಕಾಲೇಜು ನಿರ್ಮಾಣಕ್ಕೆ 4 ಕೋಟಿ ರೂ., 32 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ತಲಾ 2 ಕೋಟಿ ರೂ., ನ್ಯಾಕ್ ಮಾನ್ಯತೆ ಪಡೆದಿರುವ 92 ಕಾಲೇಜುಗಳಿಗೆ ಅನುದಾನ ನೀಡಲು ನಿರ್ಧರಿಸಲಾಗಿದೆ. ಈ ಪೈಕಿ ಹೈದರಾಬಾದ್- ಕರ್ನಾಟಕ ಭಾಗದ 36 ಕಾಲೇಜುಗಳು ಸೇರಿವೆ ಎಂದು ಅವರು ಮಾಹಿತಿ ನೀಡಿದರು. ಅತಿಥಿ ಉಪನ್ಯಾಸಕರ ಬಗ್ಗೆ ಸಕಾರಾತ್ಮಕ ಚಿಂತನೆ: ರಾಜ್ಯದಲ್ಲಿ 14 ಸಾವಿರ ಮಂದಿ ಅತಿಥಿ ಉಪನ್ಯಾಸ ಕರಿದ್ದಾರೆ. ಅವರುಗಳನ್ನು ನೇಮಕ ಮಾಡಿಕೊಳ್ಳುವಾಗ ಹಲವಾರು ಕಡೆ ರೋಸ್ಟರ್ ಪದ್ಧತಿಯನ್ನು ಪಾಲನೆ ಮಾಡಿಲ್ಲ. ಮಾನವೀಯತೆ ದೃಷ್ಟಿಯಿಂದ ಅವರ ಬಗ್ಗೆ ಸರಕಾರ ಸಕಾರಾತ್ಮಕವಾದ ಚಿಂತನೆ ಇಟ್ಟುಕೊಂಡಿದೆ ಎಂದು ಜಯಚಂದ್ರ ಹೇಳಿದರು. ಈಗಾಗಲೇ ಸುಮಾರು ಎರಡು ಸಾವಿರ ಮಂದಿ ಸಹಾಯಕ ಪ್ರೊಫೆಸರ್‌ಗಳನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅತಿಥಿ ಉಪನ್ಯಾಸಕರಲ್ಲಿ ಹಲವಾರು ಮಂದಿ ಪಿಎಚ್‌ಡಿ ಮಾಡಿರುವವರು ಇದ್ದಾರೆ. ಈ ನೇಮಕಾತಿ ವೇಳೆ ಬಹಳಷ್ಟು ಜನರಿಗೆ ಅವಕಾಶ ಸಿಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಹಣಕಾಸು ಹಾಗೂ ಕಾನೂನಿಗೆ ಸಂಬಂಧಿಸಿದ ವಿಚಾರ ಇದಾಗಿರುವುದರಿಂದ ಸರಕಾರ ಗಂಭೀರ ವಾಗಿದೆ. ‘ಎಜುಕೇಷನ್ ವರ್ಲ್ಡ್ ಫೋರಂ’ ಸಭೆಯಲ್ಲಿ ಪಾಲ್ಗೊಳ್ಳಲು ರವಿವಾರ ಲಂಡನ್‌ಗೆ ತೆರಳುತ್ತಿದ್ದು, ಅಲ್ಲಿಂದ ಹಿಂದಿರುಗಿದ ಬಳಿಕ ಫೆಬ್ರವರಿ ಮೊದಲ ವಾರದಲ್ಲಿ ಅತಿಥಿ ಉಪನ್ಯಾಸಕರೊಂದಿಗೆ ಸಭೆ ನಡೆಸಲಾಗುವುದು ಎಂದು ಜಯಚಂದ್ರ ತಿಳಿಸಿದರು.
ಮುಜರಾಯಿ ದೇವಾಲಯಗಳ ಆಸ್ತಿ ರಕ್ಷಣೆ: ರಾಜ್ಯದಲ್ಲಿನ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳ ಆಸ್ತಿಯನ್ನು ಸಂರಕ್ಷಣೆ ಮಾಡಲು ಸರಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ದೇವಾಲಯದ ಆಸ್ತಿಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರೆ ಅವರ ವಿರುದ್ಧ ಭೂ ಒತ್ತುವರಿ ನಿಯಂತ್ರಣ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News