×
Ad

ಕಪಾಳಮೋಕ್ಷ ಪ್ರಕರಣ; ವರದಿ ತಳ್ಳಿಹಾಕಿದ ಸಿಎಂ, ಬಳ್ಳಾರಿ ಪಾಲಿಕೆ ಆಯುಕ್ತ

Update: 2016-01-16 23:58 IST

ಬಳ್ಳಾರಿ,ಜ.16: ಮುಖ್ಯಮಂತ್ರಿ ಸಿದ್ದರಾಮಯ್ಯ, ಬಳ್ಳಾರಿಯಲ್ಲಿ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆನ್ನಲಾದ ದೃಶ್ಯದ ವೀಡಿಯೊ, ಟಿವಿ ವಾಹಿನಿಗಳಲ್ಲಿ ಪ್ರಸಾರವಾಗಿದ್ದು, ವಿವಾದಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಅವರು ಶನಿವಾರ ಬಳ್ಳಾರಿಯ ಕೌಲ್‌ಬಜಾರ್ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ವಾಲ್ಮೀಕಿ ಭವನದ ಉದ್ಘಾಟನೆಗೆ ಆಗಮಿಸಿದ ಸಂದರ್ಭದಲ್ಲಿ, ತನಗೆ ಅಡ್ಡಬಂದ ಬಳ್ಳಾರಿ ನಗರಪಾಲಿಕೆ ಆಯುಕ್ತ ಪಿ.ಜಿ.ರಮೇಶ್ ಅವರಿಗೆ ಕಪಾಳಮೋಕ್ಷ ಮಾಡಿದರೆಂದು ಕೆಲವು ಟಿವಿ ವಾಹಿನಿಗಳು ವರದಿ ಮಾಡಿದ್ದವು. ತನ್ನ ಭದ್ರತಾಸಿಬ್ಬಂದಿ ಹಾಗೂ ಬೆಂಬಲಿಗರಿಂದ ಸುತ್ತುವರಿಯಲ್ಪಟ್ಟ ಮುಖ್ಯಮಂತ್ರಿಗೆ ಹಸ್ತಲಾಘವ ಮಾಡಲು ಜನರು ಮುಗಿಬಿದ್ದಿದ್ದರು. ಆಗ ತನಗೆ ಅಡ್ಡ ಬಂದ ವ್ಯಕ್ತಿಯೊಬ್ಬರಿಗೆ ದಾರಿ ಬಿಡಿ ಎಂದು ಸಿದ್ದರಾಮಯ್ಯ ಆತನ ಮೇಲೆ ಕೈಎತ್ತುವ ದೃಶ್ಯವನ್ನು ಮಾಧ್ಯಮಗಳು ಪ್ರಸಾರ ಮಾಡಿದ್ದವು. ಮುಖ್ಯಮಂತ್ರಿ ಕಪಾಳಮೋಕ್ಷ ಮಾಡಿದ್ದರೆನ್ನಲಾದ ವ್ಯಕ್ತಿಯ ಬೆನ್ನಿನ ಭಾಗವನ್ನಷ್ಟೇ ವೀಡಿಯೊದಲ್ಲಿ ತೋರಿಸಲಾಗಿತ್ತು. ಆದಾಗ್ಯೂ ಮುಖ್ಯಮಂತ್ರಿ ತನ್ನ ಮೇಲೆ ಕೈ ಮಾಡಿದ್ದಾರೆನ್ನುವ ಸುದ್ದಿಯನ್ನು ಬಳ್ಳಾರಿ ನಗರಪಾಲಿಕೆ ಆಯುಕ್ತ ರಮೇಶ್ ತಳ್ಳಿಹಾಕಿದ್ದಾರೆ.
ಸಿಎಂ ನನ್ನ ಮೇಲೆ ಕೈ ಮಾಡಿದ್ದಾರೆಂಬುದು ಸುಳ್ಳು ಸುದ್ದಿ. ಮುಖ್ಯಮಂತ್ರಿ ನನ್ನ ಮೇಲೆ ಯಾಕೆ ಕೈ ಮಾಡಬೇಕು. ನಾನು ಅವರನ್ನು ಸ್ವಾಗತಿಸಲು ಮುಂದೆ ಬಂದಾಗ ಜನಜಂಗುಳಿಯ ನಡುವೆ ನನ್ನ ಕಾಲುಜಾರಿತು. ಆಗ ಅವರು ತನ್ನ ಭದ್ರತಾ ಸಿಬ್ಬಂದಿಗೆ ನನ್ನನ್ನು ತಳ್ಳಬೇಡಿ ಅಂದರು ಅಷ್ಟೇ ಎಂದು ರಮೇಶ್ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಯವರು ತನ್ನ ಭದ್ರತಾ ಸಿಬ್ಬಂದಿಯ ಮೇಲೆ ಸಿಡಿಮಿಡಿಗೊಂಡರೇ ಹೊರತು ತನ್ನ ಮೇಲಲ್ಲವೆಂದು ಅವರು ಹೇಳಿದ್ದಾರೆ.
ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಪ್ರಸಾರ ಮಾಡಿದ ಹೇಳಿಕೆಯೊಂದರಲ್ಲಿ, ತಾನು ಯಾವುದೇ ಅಧಿಕಾರಿಯನ್ನು ಥಳಿಸಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.


ಬಳ್ಳಾರಿಯ ವಾಲ್ಮೀಕಿ ಭವನದ ಉದ್ಘಾಟನೆಯ ಸಂದರ್ಭದಲ್ಲಿ ತಾನು ಅಧಿಕಾರಿಯೊಬ್ಬರಿಗೆ ಥಳಿಸಿದ್ದಾರೆಂದು ಕೆಲವು ಮಾಧ್ಯಮ ಚಾನೆಲ್‌ಗಳು ಪ್ರಸಾರ ಮಾಡಿರುವುದು ತನಗೆ ಅಚ್ಚರಿ ಹಾಗೂ ಬೇಸರವನ್ನು ಮೂಡಿಸಿದೆ. ತಾನು ಯಾವುದೇ ಅಧಿಕಾರಿಗೆ ಥಳಿಸಿಲ್ಲವೆಂದು, ರಾಜ್ಯದ ಜನತೆಗೆ ತಿಳಿಸಲಿಚ್ಛಿಸುತ್ತೇನೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News