×
Ad

ಕೆಎಸ್‌ಆರ್‌ಪಿಯಲ್ಲಿ ಆಧುನಿಕ ಜೀತ ಪದ್ಧತಿ!

Update: 2016-01-18 00:27 IST

25 ವರ್ಷಗಳಿಂದ ‘ಭಡ್ತಿ’ ನಿರೀಕ್ಷೆಯಲ್ಲಿರುವ ಕೆಎಸ್‌ಆರ್‌ಪಿಯ 1,166 ‘ಡಿ’ ದರ್ಜೆ ನೌಕರರು


ಬೆಂಗಳೂರು, ಜ. 17: ಶಿಸ್ತು, ಬದ್ಧತೆ, ಪ್ರಾಮಾಣಿಕತೆ ಹಾಗೂ ದಕ್ಷತೆಗೆ ಮತ್ತೊಂದು ಹೆಸರಾಗಿರುವ ಪೊಲೀಸ್ ಇಲಾಖೆಯಲ್ಲಿ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ‘ಆಧುನಿಕ ಜೀತ ಪದ್ಧತಿ’ಯೊಂದು ಹಲವು ವರ್ಷಗಳಿಂದ ಜೀವಂತವಾಗಿರುವುದು ಬೆಳಕಿಗೆ ಬಂದಿದೆ.

ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆ(ಕೆಎಸ್‌ಆರ್‌ಪಿ)ಯಲ್ಲಿ ಇಪ್ಪತ್ತೈದು ವರ್ಷಗಳಿಂದ ಕಸ ಗುಡಿಸುವ, ಅಡುಗೆ ಮಾಡುವ, ಕ್ಷೌರಿಕ, ಬಡಗಿ, ಎಲೆಕ್ಟ್ರಿಷಿಯನ್, ದೋಬಿ, ಮೋಚಿಯಾಗಿ 1ಸಾವಿರಕ್ಕೂ ಹೆಚ್ಚು ಮಂದಿ ಕರ್ತವ್ಯ ನಿರ್ವಹಿಸುತ್ತಿರುವುದು ಸರಿಯಷ್ಟೇ.

‘ಡಿ’ ದರ್ಜೆ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವವ ಪೈಕಿ 210 ಮಂದಿ ಪರಿಶಿಷ್ಟ ಜಾತಿ, 45 ಮಂದಿ ಪರಿಶಿಷ್ಟ ಪಂಗಡ, 375 ಮಂದಿ ಹಿಂದುಳಿದ ವರ್ಗದವರು ಸೇರಿದಂತೆ ಒಟ್ಟು 1,166 ಮಂದಿಗೆ ಇಪ್ಪತ್ತೈದು ವರ್ಷಗಳಿಂದ ‘ಭಡ್ತಿ’ಯನ್ನೇ ನೀಡಿಲ್ಲ ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ.

ಸುಪ್ರೀಂ ಕೋರ್ಟಿನ ತೀರ್ಪಿನನ್ವಯ ಯಾವುದೇ ಸರಕಾರಿ ನೌಕರ ತನ್ನ ಸೇವಾವಧಿಯಲ್ಲಿ ವೇತನ ಹೆಚ್ಚಳ ಸಹಿತ ಕನಿಷ್ಠ 3 ಭಡ್ತಿಯನ್ನು ಪಡೆದುಕೊಳ್ಳಬೇಕು. ಆದರೆ, ಕೆಎಸ್‌ಆರ್‌ಪಿ ‘ಡಿ’ ದರ್ಜೆ ನೌಕರರಿಗೆ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಮುಂದಿಟ್ಟು ಈ ನೌಕರರಿಗೆ ‘ಭಡ್ತಿ’ ನಿರಾಕರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
 
ಅತ್ಯಂತ ಕಡಿಮೆ ವೇತನಕ್ಕೆ ಬಹು ‘ಕಷ್ಟಕರ’ ಆದರೂ, ಶಿಸ್ತು-ಬದ್ಧತೆಯ ಕಾರಣಕ್ಕೆ ಇನ್ನಿಲ್ಲದ ಕಿರುಕುಳವನ್ನು ಸಹಿಸಿಯೂ ಕೆಎಸ್‌ಆರ್‌ಪಿ ‘ಡಿ’ ದರ್ಜೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸರಕಾರಿ ನೌಕರಿಗೆ ಸೇರುವ ವ್ಯಕ್ತಿ 60ವರ್ಷಕ್ಕೆ ನಿವೃತ್ತಿ ಹೊಂದುತ್ತಾನೆ. ಆದರೆ, ಸೇವೆಗೆ ಸೇರಿ ಹದಿನೈದು-ಇಪ್ಪತ್ತು ವರ್ಷಗಳಾದರೂ ಒಂದು ಭಡ್ತಿಯನ್ನು ನೀಡದಿದ್ದರೆ ಆತನ ಬದುಕು ನಿಜಕ್ಕೂ ‘ಜೀತ’ಕ್ಕಿಂತ ಭಿನ್ನವೇನಲ್ಲ ಎಂದು ಹೆಸರೇಳಲಿಚ್ಛಿಸದ ನೌಕರರೊಬ್ಬರ ದೂರಾಗಿದೆ.

 ಈ ಮಧ್ಯೆ ಕೆಎಸ್‌ಆರ್‌ಪಿ ್ಝಚ್ಞಜ2057‘ಡಿ’ ದರ್ಜೆ ನೌಕರರ ಭಡ್ತಿ ವಿಚಾರ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣ(ಕೆಎಟಿ) ಮೆಟ್ಟಿಲೇರಿದ್ದು, ನೌಕರರ ಪರವಾಗಿ ಕೋರ್ಟ್ ತೀರ್ಪನ್ನೂ ನೀಡಿದೆ. ಆದರೆ, ಪೊಲೀಸ್ ಇಲಾಖೆ ‘ಡಿ’ ದರ್ಜೆ ನೌಕರರಿಗೆ ಸೂಕ್ತ ಸ್ಥಾನ ಕಲ್ಪಿಸಿ, ವರ್ಗೀಕರಿಸಿ ನ್ಯಾಯಾಧೀಕರಣಕ್ಕೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಅದೂ ನನೆಗುದಿಗೆಬಿದ್ದಿದ್ದು, ‘ಆಧುನಿಕ ಜೀತ ಪದ್ಧತಿಯಂತೂ ‘ಗಟ್ಟಿ’ಯಾಗಿದೆ.
ಗೃಹ ಇಲಾಖೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅಗತ್ಯ ತಿದ್ದುಪಡಿ ತಂದು 7ನೆ ತರಗತಿ ಉತ್ತೀರ್ಣರಾಗಿ ಕೆಎಸ್‌ಆರ್‌ಪಿ ‘ಡಿ’ ದರ್ಜೆ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಅವರವರ ಶಿಕ್ಷಣಾರ್ಹತೆ ಆಧಾರದ ಮೇಲೆ ‘ಭಡ್ತಿ’ ನೀಡಬೇಕೆಂಬ ಆಗ್ರಹ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News