×
Ad

ದೇಶದ ವಾತಾವರಣ ಗಾಂಧೀಜಿಯನ್ನು ಕೊಂದ ಸ್ಥಿತಿಯಲ್ಲಿದೆ: ಗೊರುಚ

Update: 2016-01-18 00:30 IST

ಬೆಂಗಳೂರು: ಪ್ರಸ್ತುತ ದೇಶದ ವಾತಾವರಣ ಗಾಂಧೀಜಿಯನ್ನು ಕೊಂದ ಸ್ಥಿತಿಯಲ್ಲಿದ್ದು, ಈ ಬಗ್ಗೆ ಮಾಜಿ ಸಚಿವ ಎಚ್.ಜಿ.ಗೋವಿಂದೇಗೌಡ ಸದಾ ಕೊರಗುತ್ತಿದ್ದಾರೆಂದು ವಿದ್ವಾಂಸ ಗೊ.ರು.ಚನ್ನಬಸಪ್ಪ ತಿಳಿಸಿದ್ದಾರೆ.

ಭಾರತ ಯಾತ್ರಾ ಕೇಂದ್ರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಿದ್ದ ಮಾಜಿ ಸಚಿವ ಎಚ್.ಜಿ.ಗೋವಿಂದೇಗೌಡ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಅತ್ಯಾಚಾರ, ಅನಾಚಾರಗಳು ಮಿತಿ ಮೀರುತ್ತಿವೆ. ಇಂತಹ ಅನಿಷ್ಟಗಳ ವಿರುದ್ಧ ಏನು ಮಾಡಲಾಗದ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಎಚ್.ಜಿ.ಗೋವಿಂದೇಗೌಡರು ಆತಂಕದಿಂದ ಮಾತನಾಡುತ್ತಿದ್ದರೆಂದು ತಿಳಿಸಿದರು.

ಸಂವಿಧಾನ ಬದ್ಧವಾಗಿ ಕಾರ್ಯನಿರ್ವಸುತ್ತೇವೆಂದು ಪ್ರಮಾಣ ಸ್ವೀಕರಿಸುವ ಜನಪ್ರತಿನಿಧಿಗಳು ಸಂವಿಧಾನಕ್ಕೆ ಅಪಚಾರ ಎಸಗುತ್ತಿದ್ದಾರೆ. ದುಷ್ಟರ ವಿರುದ್ಧ ಹೋರಾಡಿ ಜನತೆಗೆ ರಕ್ಷಣೆ ಕೊಡಬೇಕಾದ ಪೊಲೀಸರು ಭ್ರಷ್ಟಚಾರಿಗಳ ಜೊತೆ ಕೈ ಜೋಡಿಸಿದ್ದಾರೆ. ಜನಸಾಮಾನ್ಯರಿಗೆ ನ್ಯಾಯ ಒದಗಿಸಬೇಕಾದ ನ್ಯಾಯಾಲಯಗಳು ಉಳ್ಳವರ ಪರವಾಗಿ ತೀರ್ಪನ್ನು ನೀಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜಕಿಯ ಪಾವಿತ್ರತೆಯನ್ನು ಕಾಪಾಡಿಕೊಂಡು ಬಂದ ಅಪರೂಪದ ರಾಜಕಾರಣಿ ಮಾಜಿ ಸಚಿವ ಸಚಿವ ಎಚ್.ಜಿ.ಗೋವಿಂದೇಗೌಡರ ಬದುಕು, ಆದರ್ಶಗಳು ಜನಪ್ರತಿನಿಧಿಗಳಿಗೆ ಆದರ್ಶವಾಗಿದೆ. ಅವರ ಹಾದಿಯಲ್ಲಿ ಮುನ್ನಡೆದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದು ಗೊ.ರು.ಚನ್ನಬಸಪ್ಪ ಅಭಿಪ್ರಾಯಿಸಿದರು.

ಮಾಜಿ ಸಚಿವ ಸುರೇಶ್ ಕುಮಾರ್ ಮಾತನಾಡಿ, ಸರಕಾರಿ ಶಿಕ್ಷಕರ ನೇಮಕಾತಿಯಲ್ಲಿದ್ದ ಸಮಸ್ಯೆಗಳನ್ನು ನಿವಾರಿಸಿ ಒಮ್ಮೆಲೇ ಸಾವಿರಾರು ಶಿಕ್ಷಕರನ್ನು ನೇಮಿಸಿಕೊಂಡ ಕೀರ್ತಿ ಎಚ್.ಜಿ.ಗೋವಿಂದೇಗೌಡರದಾಗಿದೆ. ಇವರ ಅವಧಿಯಲ್ಲಿ ನೇಮಕವಾದ ಶಿಕ್ಷಕರು ತಮ್ಮ ಮನೆಗಳಲ್ಲಿ ಗೋವಿಂದೇಗೌಡರ ಫೋಟೊವನ್ನು ಇಂದಿಗೂ ಹಾಕಿಕೊಂಡಿರುವುದನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ರಾಧಾಕೃಷ್ಣ, ರಂಗಕರ್ಮಿ ಕೆ.ವಿ.ನಾಗರಾಜಮೂರ್ತಿ, ಭಾರತ ಯಾತ್ರಾ ಕೇಂದ್ರದ ಸಂಚಾಲಕ ಧನಂಜಯ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News