×
Ad

ಮಹಾರಾಷ್ಟ್ರ ಮುಖ್ಯಮಂತ್ರಿ ವಿರುದ್ಧ ಸಚಿವ ಎಚ್.ಕೆ.ಪಾಟೀಲ್ ವಾಗ್ದಾಳಿ

Update: 2016-01-18 23:00 IST

ಬೆಂಗಳೂರು, ಜ.18: ಬೆಳಗಾವಿ, ಕಾರವಾರ ಹಾಗೂ ನಿಪ್ಪಾಣಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಂಡು ‘ಸಂಯುಕ್ತ ಮಹಾರಾಷ್ಟ್ರ’ ನಿರ್ಮಾಣ ಮಾಡುತ್ತೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೀಡಿರುವ ಹೇಳಿಕೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ್ ತೀವ್ರವಾಗಿ ಖಂಡಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪುಣೆಯ ಪಿಂಪ್ರಿಯಲ್ಲಿ ನಡೆದ ಮರಾಠಿ ಸಮ್ಮೇಳನದಲ್ಲಿ ಬೆಳಗಾವಿ, ಕಾರವಾರ ಹಾಗೂ ನಿಪ್ಪಾಣಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವುದಾಗಿ ದೇವೇಂದ್ರ ಫಡ್ನವೀಸ್ ನೀಡಿರುವ ಹೇಳಿಕೆ ಅತ್ಯಂತ ಖಂಡನೀಯ ಎಂದರು.
ಸಂವಿಧಾನಾತ್ಮಕವಾದ ಜವಾಬ್ದಾರಿ ಸ್ಥಾನದಲ್ಲಿರುವ ಮುಖ್ಯಮಂತ್ರಿಯೊಬ್ಬರು ಈ ರೀತಿ ಪ್ರಚೋದನಾತ್ಮಕ ಹೇಳಿಕೆ ನೀಡುವುದು ಸರಿಯಲ್ಲ. ಬೆಳಗಾವಿ ಗಡಿ ವಿವಾದವನ್ನು ಸುಪ್ರೀಂಕೋರ್ಟ್‌ಗೆ ತೆಗೆದುಕೊಂಡು ಹೋಗಿದ್ದು ಮಹಾರಾಷ್ಟ್ರ ಸರಕಾರ. ಈ ಪ್ರಕರಣ ವಿಚಾರಣೆಗೆ ಬರುವ ಹಂತದಲ್ಲಿರುವಾಗ ನ್ಯಾಯಾಲಯಕ್ಕೆ ಅಗೌರವ ತರುವ ರೀತಿಯಲ್ಲಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಅವರು ಹೇಳಿದರು.
1929ರಲ್ಲಿ ಕೇಸರಿ ಪತ್ರಿಕೆಯ ಸಂಪಾದಕ ಎನ್.ಸಿ.ಕೇಳ್ಕರ್ ಅಧ್ಯಕ್ಷತೆಯಲ್ಲಿ ನಡೆದ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂದು ಗೊತ್ತುವಳಿ ಯನ್ನು ಅನುಮೋದಿಸಲಾಗಿದೆ. ಈ ವಿಚಾರವನ್ನು ಮಹಾರಾಷ್ಟ್ರ ಮುಖ್ಯಮಂತ್ರಿಯ ಗಮನಕ್ಕೆ ತರಲು ಬಯಸುತ್ತೇನೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಬೆಳಗಾವಿ, ಕಾರವಾರ, ನಿಪ್ಪಾಣಿ ಕರ್ನಾಟಕದ ಅವಿಭಾಜ್ಯ ಅಂಗ. ಯಾವುದೇ ಕಾರಣಕ್ಕೂ ಈ ಪ್ರದೇಶಗಳನ್ನು ಕರ್ನಾಟಕ ದಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಆದುದರಿಂದ, ಮಹಾರಾಷ್ಟ್ರ ಮುಖ್ಯಮಂತ್ರಿ ಈ ರೀತಿ ಪ್ರಚೋದ ನಾತ್ಮಕ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯದ ಜನತೆ ಶಾಂತಿಪ್ರಿಯ ಹಾಗೂ ಭ್ರಾತೃತ್ವದ ವಾತಾವರಣ ನಿರ್ಮಿಸಲು ಪ್ರಯತ್ನ ಪಡುತ್ತಿ ದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಈ ಕಾರ್ಯಕ್ಕೆ ನಮ್ಮ ಜೊತೆ ಕೈ ಜೋಡಿಸಲಿ. ರಾಜಕೀಯ ಲಾಭಕ್ಕೆ ಜನರನ್ನು ಪ್ರಚೋದನೆಗೊಳಪಡಿಸುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ರಾಷ್ಟ್ರ ಹಾಗೂ ಜನಹಿತದ ವಿರುದ್ಧವಾಗಿ ನೀಡುವಂತಹ ಈ ರೀತಿಯ ಹೇಳಿಕೆಗಳನ್ನು ಪ್ರಧಾನಮಂತ್ರಿ ಗಂಭೀರವಾಗಿ ಪರಿಗಣಿಸಬೇಕು. ಗಡಿ ವಿವಾದ ಕುರಿತು ಮಹಾಜನ್ ವರದಿಯೇ ಅಂತಿಮ ಎಂದು ಮಹಾರಾಷ್ಟ್ರ ಸರಕಾರವು ಒಪ್ಪಿಕೊಂಡಿತ್ತು. ಆದರೆ, ಇದೀಗ 43 ವರ್ಷಗಳ ನಂತರ ಮತ್ತೆ ಈ ವಿಚಾರವನ್ನು ಕೆದಕುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News