ತುಮಕೂರಿನಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ
ಬೆಂಗಳೂರು, ಜ. 18: ತುಮಕೂರಿನಲ್ಲಿ ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣ ಸೇರಿದಂತೆ ಹಲವು ಮಹತ್ವದ ಯೋಜನೆಗಳಿಗೆ ಫೆ.3ರಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಇನ್‌ವೆಸ್ಟ್-ಕರ್ನಾಟಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಒಂಡಬಡಿಕೆಗೆ ಉದ್ದೇಶಿಸಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಆರ್. ರೋಷನ್ ಬೇಗ್ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಸಹಭಾಗಿತ್ವದಲ್ಲಿ ತುಮಕೂರು ಮತ್ತು ಮೈಸೂರಿನಲ್ಲಿ ಅತ್ಯಾಧುನಿಕ ವಾಹನ ನಿಲ್ದಾಣ, ಸೂಪರ್ ಸ್ಟೆಷಾಲಿಟಿ ಆಸ್ಪತ್ರೆಗಳು ಸೇರಿ ಹೂಡಿಕೆದಾರರ ಸಮಾವೇಶದ ಪೂರ್ವ ಭಾವಿಯಾಗಿ ಹಲವು ಯೋಜನೆಗಳನ್ನು ಸಿದ್ಧಪಡಿಸಲಾಗಿದೆ ಎಂದರು.
ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಅಗತ್ಯತೆ ಆಧಾರದ ಮೇಲೆ ಯೋಜನೆಗಳ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಬಂಡವಾಳ ಹೂಡಿಕೆದಾರರಿಗೆ ನೀಡಲಾಗು ವುದು ಎಂದ ಅವರು, ಇದರಿಂದ ಹೂಡಿಕೆದಾರರಿಗೆ ತಮ್ಮ ಆದ್ಯತೆ ಗೊತ್ತಾಗಲಿದೆ ಎಂದು ಸ್ಪಷ್ಟಪಡಿಸಿದರು.
ಕೃಷಿ, ಇಂಧನ, ಆರೋಗ್ಯ, ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಕೈಗಾರಿಕಾ ಮೂಲ ಸೌಕರ್ಯ, ಸಾರಿಗೆ, ಸಂಪರ್ಕ, ನಗರಾಭಿವೃದ್ಧಿ, ಪ್ರವಾಸೋ ದ್ಯಮ ಸೇರಿದಂತೆ ಪ್ರಮುಖ ಕ್ಷೇತ್ರಗಳ ಆದ್ಯತೆ ಮತ್ತು ರಾಜ್ಯದ ಅಗತ್ಯತೆಯ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ರೋಷನ್ ಬೇಗ್ ವಿವರಿಸಿದರು.
ತುಮಕೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 158 ಕೋಟಿ ರೂ.ಗಳ ಅಗತ್ಯ ವಿದ್ದು, ತುಮಕೂರಿನ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣಕ್ಕೆ 165 ಕೋಟಿ ರೂ.ಗಳ ಅಗತ್ಯವಿದೆ ಎಂದು ಈಗಾಗಲೇ ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.