ಮಂಗಳೂರಿನಲ್ಲಿ ಜ.30ಕ್ಕೆ ‘ಸಹಬಾಳ್ವೆ ಸಾಗರ’
ಬೆಂಗಳೂರು, ಜ. 18: ದೇಶದಲ್ಲಿ ಮತ್ತೆ ಶಾಂತಿ ಸೌಹಾರ್ದವನ್ನು ಸ್ಥಾಪಿಸುವ ಉದ್ದೇಶದಿಂದ ಜ.30ರಂದು ‘ಸಹಬಾಳ್ವೆ ಸಾಗರ’ ರಾಷ್ಟ್ರೀಯ ಸಮಾವೇಶವನ್ನು ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ತಿಳಿಸಿದೆ.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಮಾತನಾಡಿ, ದೇಶದಲ್ಲಿ ದಲಿತ, ಮುಸ್ಲಿಮ್, ಕ್ರೈಸ್ತರ ಮೇಲೆ ಮತಾಂಧ ಶಕ್ತಿಗಳು ನಿರಂತರವಾಗಿ ಹಲ್ಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಈ ಪರಿಣಾಮ ಸಮಾಜದಲ್ಲಿ ಅಶಾಂತಿ ತಲೆ ದೋರಿದೆ. ದೇಶದಲ್ಲಿನ ಅಸಹಿಷ್ಣುತೆಯ ವಿರುದ್ಧ ಹೋರಾಟ ಮಾಡುವ ನಿಟ್ಟಿನಲ್ಲಿ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ವಿವಿಧ ಧರ್ಮ, ಜಾತಿ, ಸಿದ್ಧಾಂತ, ಸಂಸ್ಕೃತಿ, ಭಾಷೆಗಳು ಸಂಗ ಮಿಸುವ ಈ ಸಮಾವೇಶದಲ್ಲಿ, ವಿವಿಧ ನದಿಗಳ ಹೆಸರಿನ ಜಾಥಾ ಗಳ ಮೂಲಕ 30 ಜಿಲ್ಲೆಯ ಪ್ರತಿನಿಧಿಗಳು ಸಮಾಗಮವಾಗಲಿ ದ್ದಾರೆ. ಕೂಡಲ ಸಂಗಮದಿಂದ ಶರಾವತಿ ಜಾಥಾ, ಶಿಶುನಾಳ ದಿಂದ ಸೀತ-ಭದ್ರ ಜಾಥಾ, ಬಾಬಾಬುಡನ್‌ಗಿರಿಯಿಂದ ಶಾಂಭವಿ-ಕಾವೇರಿ ಜಾಥಾ, ಶ್ರೀರಂಗಪಟ್ಟಣದಿಂದ ಸೌಪರ್ಣಿಕ -ಶಾಲ್ಮಲ ಜಾಥಾ, ಅಂಕೋಲದಿಂದ ಕುಮಾರಧಾರಾ ಜಾಥಾ, ಕೈವಾರದಿಂದ ಫಲ್ಗುಣಿ ಜಾಥಾ, ಕಾಳಿ ಜಾಥಾ, ತಿಂಥಣಿ ವೌನೇಶ್ವರದಿಂದ ಕೃಷ್ಣ ಜಾಥಾಗಳು ಹೊರಟು ಮಂಗಳೂರಿನಲ್ಲಿ ಜ.29 ರಂದು ಸೇರಲಿವೆೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಪ್ರಜಾತಾಂತ್ರಿಕ ಜನರ ವೇದಿಕೆಯ ಅಧ್ಯಕ್ಷ ಪ್ರೊ. ನಗರಿ ಬಾಬಯ್ಯ ಮಾತನಾಡಿ, ಸಮಾವೇಶದಲ್ಲಿ ಕರಾವಳಿಯ ಸಹಬಾಳ್ವೆ ಮತ್ತು ಅವೈದಿಕ ಪರಂಪರೆಯ ಪ್ರತಿನಿಧಿಗಳಾದ ನಾರಾಯಣ ಗುರು, ರಾಣಿ ಅಬ್ಬಕ್ಕ, ಸಿರಿ, ಬಪ್ಪ ಬ್ಯಾರಿ, ಕುದ್ಮಲ್‌ರಂಗರಾವ್ ಹೆಸರಿನಲ್ಲಿ ವಿವಿಧ ವಿಚಾರ ಗೋಷ್ಠಿಗಳನ್ನು ಆಯೋ ಜಿಸಲಾಗಿದೆ. ಅಲ್ಲದೆ, ನಾಟಕ, ಯಕ್ಷಗಾನ, ವಚನ, ಸೂಫಿ, ಸೌಹಾರ್ದ ಗೀತೆಗಳು, ದಫ್, ಜನಪದ ಹಾಡುಗಳು ಇತ್ಯಾದಿ ಕರಾವಳಿ ಕಲಾ ಪ್ರಕಾರಗಳು ಪ್ರದರ್ಶನಗೊಳ್ಳಲಿವೆ ಎಂದರು.
ಕಾರ್ಯಕ್ರಮದಲ್ಲಿ ಸ್ವರಾಜ್ ಅಭಿಯಾನದ ಮುಖಂಡ ಯೋಗೇಂದ್ರ ಯಾದವ್, ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ ಪಾಟೀಲ್, ಧಾರ್ಮಿಕ ಮುಖಂಡರಾದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ, ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್, ಫಾದರ್ ಅಲೋಶಿಯಸ್ ಪೌಲ್ ಡಿಸೋಜ ಬಿಷಪ್ ಮತ್ತು ಬೋಧಿ ದತ್ತ ಭಂತ್ತೇಜಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ರಾಜ್ಯ ಸಂಚಾಲಕ ಸರ್ದಾರ್ ಅಹ್ಮದ್ ಖುರೇಶಿ, ಜಿಲ್ಲಾ ಅಧ್ಯಕ್ಷ ಅಂಜದ್ ಪಾಷ, ಹೈದರ್ ಬೇಗ್ ಉಪಸ್ಥಿತರಿದ್ದರು.