ಪ್ರತಿ ಹೋಬಳಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ: ಸಚಿವ ಆಂಜನೇಯ

Update: 2016-01-18 17:44 GMT

ಮಂಗಳೂರು, ಜ.18: ಪ್ರತಿ ಹೋಬಳಿಯಲ್ಲಿ ಒಂದೊಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ತೆರೆಯಲು ಸರಕಾರ ನಿರ್ಧರಿಸಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ತಾಲೂಕು ಮಟ್ಟದ ಅಧಿಕಾರಿಗಳ ಹಾಗೂ ವಿದ್ಯಾರ್ಥಿನಿಲಯ ಮೇಲ್ವಿಚಾರಕರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 ಜಿಲ್ಲೆಯಲ್ಲಿ ಕನಿಷ್ಠ 10 ಎಕ್ರೆ ಜಮೀನು ಇರುವ ಹೋಬಳಿಗಳಲ್ಲಿ ವಸತಿ ಶಾಲೆ ಪ್ರಾರಂಭಿಸಲು ಪ್ರಸ್ತಾಪವನ್ನು ಸರಕಾರಕ್ಕೆ ಕಳುಹಿಸಿಕೊಟ್ಟಲ್ಲಿ ತಲಾ 15 ಕೋಟಿ ರೂ. ವೆಚ್ಚದಲ್ಲಿ ವಸತಿ ಶಾಲೆಯ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು. ಅಲ್ಲದೆ, ಈ ವಸತಿ ಶಾಲೆಗಳಲ್ಲಿ ಅಕ್ಷರ ವಂಚಿತರಾದ ಗ್ರಾಮಾಂತರ ಪ್ರದೇಶದ ಬಡ ಕುಟುಂಬದ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಉತ್ತಮ ಗುಣಮಟ್ಟದ ವ್ಯಾಸಂಗವನ್ನು ನೀಡಲಾಗುವುದು ಎಂದು ಸಚಿವರು ತಿಳಿಸಿದರು. ಜಿಲ್ಲೆಯಲ್ಲಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿ ಮಂಜೂರಾಗಿರುವ ಮೂಲಭೂತ ಸೌಕರ್ಯಗಳ ಮಾಹಿತಿಯನ್ನು ಪಟ್ಟಿ ಮಾಡಿ ಸರಕಾರಕ್ಕೆ ಕಳುಹಿಸಿಕೊಡುವಂತೆ ಸಚಿವರು ಸೂಚಿಸಿದರು. ಮುಂದಿನ ವರ್ಷದೊಳಗೆ ಯಾವುದೇ ವಿದ್ಯಾರ್ಥಿನಿಲಯಗಳಲ್ಲಿ ಮೂಲಭೂತ ಸೌಕರ್ಯದ ಕೊರತೆಗಳು ಇಲ್ಲದಂತೆ ನೋಡಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಲಾಖೆಯಲ್ಲಿ ಮಂಜೂರಾಗಿರುವ ಸಿಬ್ಬಂದಿಯಲ್ಲಿ ಖಾಲಿ ಇರುವ ಗ್ರೂಪ್-ಡಿ ದರ್ಜೆ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಜಿಲ್ಲಾ ಮಟ್ಟದ ನೇಮಕಾತಿ ಸಮಿತಿಗೆ ಅತೀ ಶೀಘ್ರದಲ್ಲೇ ಆದೇಶ ನೀಡಲಾಗುವುದು. ಈಗಾಗಲೇ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರ ಸಂಪನ್ಮೂಲ ಸಿಬ್ಬಂದಿ ಜವಾಬ್ದಾರಿಯುತವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿಲ್ಲ. ಇದರಿಂದ ನಿಲಯಗಳಲ್ಲಿ ಸಮರ್ಪಕ ನಿರ್ವಹಣೆಯನ್ನು ಮಾಡಲು ಅನಾನುಕೂಲವಾಗಿದೆ. ಆದ್ದರಿಂದ ಈ ಹುದ್ದೆಗಳಿಗೆ ಜಿಲ್ಲಾ ಮಟ್ಟದ ನೇಮಕಾತಿ ಸಮಿತಿಯ ಮೂಲಕ ಹೊಸ ಅಭ್ಯರ್ಥಿಗಳನ್ನು ನೇಮಿಸಿಕೊಂಡಲ್ಲಿ ಅವರಿಂದ ಉತ್ತಮ ಕೆಲಸ ಕಾರ್ಯಗಳನ್ನು ನಿರೀಕ್ಷಿಸಬಹುದು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಮಂಜೂರಾಗಿರುವ ಒಟ್ಟು 470 ಹುದ್ದೆಗಳಲ್ಲಿ ಕೇವಲ 129 ಹುದ್ದೆಗಳು ಭರ್ತಿಯಾಗಿದ್ದು, 341 ಹುದ್ದೆಗಳು ಖಾಲಿ ಇವೆ. ಮಂಜೂರಾಗಿರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸರಕಾರದಿಂದ ಮಂಜೂರಾತಿಯನ್ನು ಪಡೆದುಕೊಂಡಿದ್ದು, ಇವುಗಳನ್ನು ಅತೀ ಶೀಘ್ರವಾಗಿ ಭರ್ತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
  ಇಲಾಖೆಯ ಮೇಲಧಿಕಾರಿಗಳು ನಿಲಯಗಳಿಗೆ ಭೇಟಿ ಕೊಟ್ಟಾಗ ವಿದ್ಯಾರ್ಥಿಗಳೊಂದಿಗೆ ಪ್ರೀತಿ ವಿಶ್ವಾಸದಿಂದ ಸಂವಾದವನ್ನು ನಡೆಸಬೇಕು. ವಿದ್ಯಾರ್ಥಿಗಳ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಿ ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸುವಂತೆ ಮಾರ್ಗದರ್ಶನ ನೀಡುಬೇಕು. ನಿಲಯದ ಪರಿಸರ ಶುಚಿಯಾಗಿದೆಯೇ ಎಂದು ಪರಿಶೀಲಿಸುವುದು ಹಾಗೂ ನಿಲಯಗಳಿಗೆ ಸರಬರಾಜಾಗಿರುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸಬೇಕು ಎಂದು ಸಚಿವ ಆಂಜನೇಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News