ಜಿಪಂ-ತಾಪಂ ಚುನಾವಣಾ ದಿನಾಂಕ ಪ್ರಕಟ: ಫೆ.13, 20ಕ್ಕೆ ಮತದಾನ

Update: 2016-01-18 18:26 GMT

ಫೆ.23ಕ್ಕೆ ಫಲಿತಾಂಶ

ಬೆಂಗಳೂರು, ಜ.18: ರಾಜ್ಯದ 26 ಜಿಲ್ಲಾ ಪಂಚಾಯತ್‌ಗಳ ಒಟ್ಟು 922 ಕ್ಷೇತ್ರಗಳಿಗೆ ಮತ್ತು 175 ತಾಲೂಕು ಪಂಚಾಯತ್‌ಗಳ 3,884 ಕ್ಷೇತ್ರಗಳಿಗೆ ಫೆ.13 ಹಾಗೂ ಫೆ.20ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಆಯುಕ್ತ ಶ್ರೀನಿವಾಸಾಚಾರಿ ತಿಳಿಸಿದ್ದಾರೆ.


ಸೋಮವಾರ ನಗರದ ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ವಿಜಯಪುರ, ಬೀದರ್, ಕಲಬುರಗಿ ಮತ್ತು ರಾಯಚೂರು ಜಿಲ್ಲಾ ಪಂಚಾಯತ್‌ಗಳ ಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ಕಲಬುರಗಿ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಇದ್ದು, ಆ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಚುನಾವಣೆ ನಡೆಯುತ್ತದೆ ಎಂದು ತಿಳಿಸಿದರು.


   ಒಟ್ಟು 36,472 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಆ ಪೈಕಿ 8, 980 ಸೂಕ್ಷ್ಮ, 7,162 ಅತಿ ಸೂಕ್ಷ್ಮ ಹಾಗೂ ಉಳಿದವು ಸಾಮಾನ್ಯವೆಂದು ಪರಿಗಣಿಸಲಾಗಿದೆ. ಜಿಲ್ಲಾ ಪಂಚಾಯತ್ ಚುನಾವಣಾ ಕಾರ್ಯಕ್ಕಾಗಿ 178, ತಾಲೂಕು ಪಂಚಾಯತ್‌ಗೆ 326 ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿದೆ.
ಒಟ್ಟು 2,00,596 ಮತಗಟ್ಟೆ ಸಿಬ್ಬಂದಿ ಚುನಾವಣಾ ಕಾರ್ಯದಲ್ಲಿ ತೊಡಗಲಿದ್ದಾರೆಂದು ತಿಳಿಸಿದರು.


ನೀತಿಸಂಹಿತಿ ಜಾರಿ: ಈ ಕ್ಷಣದಿಂದಲೇ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಪ್ರಕ್ರಿಯೆ ಮುಗಿಯುವ ಫೆ.24ರವರೆಗೆ ಅನ್ವಯವಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಾಗಿ ಘೋಷಣೆಗೊಂಡು, ಚುನಾವಣೆ ನಡೆಯದೇ ಇರುವ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲೂ ಸಹ ನೀತಿಸಂಹಿತೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.

ಮೊದಲ ಹಂತದ ಚುನಾವಣೆ: ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು, ಬೆಳಗಾವಿ, ಹಾವೇರಿ, ಬಾಗಲಕೋಟೆ, ಉತ್ತರ ಕನ್ನಡ, ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ಚುನಾವಣೆ ನಡೆಯುತ್ತದೆ. ಜ.25ರಿಂದ ಚುನಾವಣಾ ಅಧಿಸೂಚನೆ ಪ್ರಕಟಿಸಲಾಗುವುದು. ಅಂದಿನಿಂದಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಫೆ.1ರಂದುನಾಮಪತ್ರ ಸಲ್ಲಿಸಲು ಕೊನೆಯ ದಿನ. ಫೆ.2ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಫೆ.4 ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, ಫೆ.13ರಂದು ಮತದಾನ ನಡೆಯಲಿದೆ ಎಂದು ಆಯುಕ್ತರು ತಿಳಿಸಿದರು.


ಎರಡನೆ ಹಂತದ ಚುನಾವಣೆ: ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ, ಉಡುಪಿ, ಬೀದರ್(ತಾ.ಪಂ.), ಬಳ್ಳಾರಿ, ಕಲಬುರಗಿ(ತಾ.ಪಂ), ಯಾದಗಿರಿ, ರಾಯಚೂರು(ತಾ.ಪಂ), ಕೊಪ್ಪಳ ಹಾಗೂ ವಿಜಯಪುರ(ತಾ.ಪಂ)ಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ.


ಫೆ.1ರಂದು ಚುನಾವಣಾ ಅಧಿಸೂಚನೆ ಪ್ರಕಟಿಸಲಾಗುವುದು. ಅಂದಿನಿಂದಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಫೆ.8ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ. ಫೆ.9ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಫೆ.11ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, ಫೆ.20ರಂದು ಮತದಾನ ನಡೆಯಲಿದೆ ಎಂದು ಆಯುಕ್ತರು ತಿಳಿಸಿದರು.

ಫೆ.23ರಂದು ಮತಗಳ ಎಣಿಕೆ: ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ನ ಎರಡು ಹಂತಗಳ ಚುನಾವಣೆಯ ಮತ ಎಣಿಕೆ ಫೆ.23ರಂದು ನಡೆಯಲಿದೆ. ಅದೇ ದಿನ ಫಲಿತಾಂಶ ಪ್ರಕಟಿಸಲಾಗುವುದು. ಚುನಾವಣಾ ವೆಚ್ಚ: ಚುನಾವಣಾ ಆಯೋಗವು ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚ ಒಂದು ಲಕ್ಷ ರೂ. ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚ 50 ಸಾವಿರ ರೂ. ನಿಗದಿಪಡಿಸಿದೆ.


ನೋಟಾ: ಈ ಬಾರಿಯ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಇದೇ ಪ್ರಥಮ ಬಾರಿಗೆ ವಿದ್ಯುನ್ಮಾನ ಮತಯಂತ್ರದಲ್ಲಿ ನೋಟಾವನ್ನು ಅವಕಾಶವನ್ನು ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News