ರಾಯಚೂರಿನಲ್ಲಿ ಐಐಟಿ: ಅರ್ಜಿ ವಜಾ
ಬೆಂಗಳೂರು, ಜ.19: ರಾಯಚೂರು ಜಿಲ್ಲೆಯಲ್ಲಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸ್ಥಾಪಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಧಾರವಾಡದಲ್ಲಿ ಐಐಟಿ ಸ್ಥಾಪನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಮುಂದಾಗಿರುವ ಕ್ರಮ ಪ್ರಶ್ನಿಸಿ ಸಿಟಿಝನ್ ಫೋರಂ ಹಾಗೂ ಜಯ ಕರ್ನಾಟಕ ಸಂಘಟನೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾ.ರವಿ ಮಳೀಮಠ ಅವರಿದ್ದ ವಿಭಾಗೀಯ ಪೀಠವು ಅರ್ಜಿ ವಜಾಗೊಳಿಸಿತು. ಧಾರವಾಡದಲ್ಲಿ ಐಐಟಿ ಸ್ಥಾಪಿಸುವುದು ಕೇಂದ್ರ ಹಾಗೂ ರಾಜ್ಯ ಸರಕಾರದ ನೀತಿ ನಿರ್ಣಯವಾಗಿದೆ. ಸರಕಾರಗಳ ನೀತಿಯಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸಲಾಗದು ಎಂದು ಅಭಿಪ್ರಾಯಪಟ್ಟ ಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿತು.
ಪ್ರೊ.ಡಿ.ಎಂ.ನಂಜುಂಡಪ್ಪ ಅವರು 2000ನೆ ವರ್ಷದಲ್ಲಿ ಸರಕಾರಕ್ಕೆ ವರದಿ ಸಲ್ಲಿಸಿ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಕಲಬುರಗಿಯಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯ, ರಾಯಚೂರಿನಲ್ಲಿ ಐಐಟಿ ಮತ್ತು ಧಾರವಾಡದಲ್ಲಿ ಐಐಎಂ ಸ್ಥಾಪಿಸಲು ಶಿಫಾರಸು ಮಾಡಿದ್ದರು. ಅದರಂತೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ವೇಳೆ ಸಚಿವ ಸಂಪುಟವು ರಾಯಚೂರಿನಲ್ಲಿ ಐಐಟಿ ಸ್ಥಾಪಿಸಲು ನಿರ್ಣಯ ಕೈಗೊಂಡಿತು. ಜೊತೆಗೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು, ರಾಯಚೂರಿನಲ್ಲಿ ಐಐಟಿ ಸ್ಥಾಪನೆಗೆ 400 ಎಕರೆ ಜಮೀನು ನೀಡಲು ಸಿದ್ಧವಿರುವುದಾಗಿಯೂ ತಿಳಿಸಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಸದ್ಯ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಧಾರವಾಡದಲ್ಲಿ ಐಐಟಿ ಸ್ಥಾಪಿಸಲು ಮುಂದಾಗಿವೆ. ಐಟಿ ಸ್ಥಾಪನೆ ಕಾರ್ಯಗಳ ಮೇಲ್ವಿಚಾರಣೆಗೆ ಧಾರವಾಡ ಜಿಲಾಧಿಕಾರಿಯನ್ನು ನೋಡೆಲ್ ಅಧಿಕಾರಿಯಾಗಿ ನೇಮಿಸಿ ರಾಜ್ಯ ಸರಕಾರ ಆದೇಶಿಸಿದೆ. ಹೀಗಾಗಿ, ನೋಡೆಲ್ ಅಧಿಕಾರಿ ಕಾರ್ಯ ನಿರ್ವಹಣೆಗೆ ತಡೆ ನೀಡಬೇಕು ಮತ್ತು ರಾಯಚೂರಿನಲ್ಲಿಯೇ ಐಐಟಿ ಸ್ಥಾಪಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.