×
Ad

ಮರಾಠಿ ಟೈಗರ್ಸ್ ಚಿತ್ರ ಬಿಡುಗಡೆಗೆ ನಿಷೇಧ ನಿರಾಕರಿಸಿದ ಹೈಕೋರ್ಟ್

Update: 2016-01-20 22:40 IST

ಬೆಂಗಳೂರು, ಜ.20: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿ ವಿವಾದ ಕುರಿತ ಮರಾಠಿ ಭಾಷೆಯ ‘ಮರಾಠಿ ಟೈಗರ್ಸ್’ ಚಿತ್ರ ಬಿಡುಗಡೆಗೆ ನಿಷೇಧ ಹೇರಲು ಹೈಕೋರ್ಟ್ ನಿರಾಕರಿಸಿದೆ.
ಬೆಳಗಾವಿ ವಿಚಾರವಾಗಿ ಕರ್ನಾಟಕ-ಮಹಾರಾಷ್ಟ್ರಗಳ ನಡುವೆ ಉಂಟಾಗಿರುವ ಗಡಿ ವಿವಾದ ಕುರಿತು ಚಿತ್ರಿಸಿರುವ ‘ಮರಾಠಿ ಟೈಗರ್ಸ್’ ಚಿತ್ರ ಬಿಡುಗಡೆಗೆ ನಿಷೇಧ ಹೇರಲು ಕೋರಿ ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
  ಬುಧವಾರ ಈ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾ.ರವಿ ಮಳೀಮಠ ಅವರಿದ್ದ ವಿಭಾಗೀಯ ಪೀಠ, ಚಿತ್ರ ಬಿಡುಗಡೆ ವಿಚಾರದಲ್ಲಿ ಕೋರ್ಟ್ ಮಧ್ಯಪ್ರವೇಶ ಮಾಡಲಾಗದು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.
         ಮರಾಠಿ ಚಿತ್ರ ಬಿಡುಗಡೆಯಾದರೆ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದಲ್ಲಿ ಗಲಭೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಅರ್ಜಿದಾರರ ಪರ ವಕೀಲರು ಕೋರ್ಟ್‌ಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಕಾನೂನು ಮತ್ತು ಸುವ್ಯವಸ್ಥೆ ವಿಚಾರವನ್ನು ರಾಜ್ಯ ಸರಕಾರ ನಿಭಾಯಿಸುತ್ತದೆ ಎಂದು ಹೇಳಿತು.
ಕರ್ನಾಟಕ ಟೈಗರ್ಸ್ ಚಿತ್ರ ಮಾಡಿ:    ‘ಮರಾಠಿ ಟೈಗರ್ಸ್’ ಚಿತ್ರವನ್ನು ಮಹಾರಾಷ್ಟ್ರದಲ್ಲಿ ನಿರ್ಮಿಸಿದರೆ, ನೀವು(ಅರ್ಜಿದಾರರು) ಕರ್ನಾಟಕ ಟೈಗರ್ಸ್ ಚಿತ್ರವನ್ನು ಮಾಡಿ. ಇಲ್ಲವೇ, ‘ಮರಾಠಿ ಟೈಗರ್ಸ್’ ಚಿತ್ರವನ್ನು ನೀವು ವೀಕ್ಷಿಸಬೇಡಿ. ಜನರಿಗೂ ಆ ಚಿತ್ರ ವೀಕ್ಷಿಸಬೇಡಿ ಎಂದು ತಿಳಿಸಿ. ಆದರೆ, ಈ ವಿಚಾರದಲ್ಲಿ ಕೋರ್ಟ್ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಪೀಠ ಅರ್ಜಿದಾರರಿಗೆ ಸೂಚಿಸಿತು.
           ‘ಮರಾಠಿ ಟೈಗರ್ಸ್’ ಚಿತ್ರ 2016ರ ಫೆಬ್ರವರಿ 5ರಂದು ಬಿಡುಗಡೆಗೆ ಸಿದ್ಧವಾಗಿದೆ. ಇದರಲ್ಲಿ ಕರ್ನಾಟಕ ಮತ್ತು ಕನ್ನಡಿಗರ ಸಂಸ್ಕೃತಿಗೆ ಅಗೌರವ ಸೂಚಿಸುವ ಹಾಗೂ ಬೆಳಗಾವಿ ಗಡಿ ವಿವಾದ ಕುರಿತ ಅಂಶಗಳಿವೆ. ಚಿತ್ರ ಬಿಡುಗಡೆಯಾದರೆ ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವೆ ಸಂಘರ್ಷ ಉಂಟಾಗುವ ಸಾಧ್ಯತೆಯಿದೆ. ಮೇಲಾಗಿ ಬೆಳಗಾವಿ ಗಡಿ ವಿವಾದ ಪ್ರಕರಣವೂ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ಈ ಚಿತ್ರ ಬಿಡುಗಡೆ ಅನುಮತಿ ನೀಡಿದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News