ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಯಲ್ಲ, ಕೊಲೆ: ಸಿಎಫ್‌ಐ ಆಕ್ರೋಶ
ಬೆಂಗಳೂರು, ಜ. 20: ಹೈದರಾಬಾದ್ ವಿವಿಯ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾರ ಸಾವು ಆತ್ಮಹತ್ಯೆಯಲ್ಲ. ಬದಲಿಗೆ ವಿಶ್ವವಿದ್ಯಾನಿಲಯದ ಆಡಳಿತದಲ್ಲಿ ನಡೆಯುತ್ತಿರುವ ಜಾತಿ ಆಧಾರಿತ ವ್ಯವಸ್ಥಿತ ಹತ್ಯೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯ ಇಕ್ಬಾಲ್ ಬೆಳ್ಳಾರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಇಲ್ಲಿನ ಪುರಭವನದ ಮುಂಭಾಗ ದಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತ ನಾಡಿದ ಅವರು, ಎರಡು ದಶಕಗಳಿಂದ ವಿವಿ ದಲಿತ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ವಿರುದ್ಧ ಪ್ರತಿಭಟನೆ ಮತ್ತು ಮಧ್ಯಸ್ಥಿಕೆಗಳಲ್ಲಿ ಹೆಚ್ಚಳ ವಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.
ಅಂಬೇಡ್ಕರ್ ವಿದ್ಯಾರ್ಥಿ ಒಕ್ಕೂಟದ ಸಕ್ರಿಯ ಸದಸ್ಯರಾಗಿದ್ದ ರೋಹಿತ್ ಮತ್ತು ಆತನ ಸಹಪಾಠಿಗಳು ವಿವಿಯ ಬ್ರಾಹ್ಮಣ್ಯ ಯಜಮಾನರಿಗೆ ಮತ್ತು ದಲಿತ ವಿದ್ಯಾರ್ಥಿಗಳ ಮೇಲಿನ ಅನ್ಯಾಯದ ವಿರುದ್ಧ ಧ್ವನಿಯೆತ್ತಿದಾರೆ. ಆರೆಸ್ಸೆಸ್ ಮತ್ತು ಎಬಿವಿಪಿಯ ನಿರ್ದೇಶನುಸಾರ ವಿವಿಯು ರೋಹಿತ್ ಒಳಗೊಂಡಂತೆ ಐವರು ದಲಿತ ವಿದ್ಯಾರ್ಥಿಗಳ ಮೇಲೆ ನಿರಂಕುಶವಾಗಿ ಕ್ರಮ ಕೈಗೊಂಡಿತ್ತು ಎಂದು ಟೀಕಿಸಿದರು.
ನಕುಲ್ ಸಿನ್ಹಾರ ಸಾಕ್ಷ್ಯಚಿತ್ರ ‘ಮುಝಫ್ಫರ್ ನಗರ್ ಬಾಕಿ ಹೈ’ ಒಳಗೊಂಡಂತೆ ಆರೆಸ್ಸೆಸ್ ವಿರುದ್ಧದ ಚಟುವಟಿಕೆಗಳ ವಿರುದ್ಧ ದೂರು ಮತ್ತು ನಂತರದ ಕ್ರಮವೆಂಬಂತೆ ತಾವು ಕೈಗೊಂಡ ಕ್ರಮಗಳಿಗೆ ಸಮರ್ಥನೆಯನ್ನು ನೀಡಲಾಗಿತ್ತು. ಆ ಸಾಕ್ಷ್ಯಚಿತ್ರವು ಮುಝಫ್ಫರ್ ನಗರದ ಗಲಭೆಯಲ್ಲಿ ಆರೆಸ್ಸೆಸ್ ಪಾತ್ರವನ್ನು ಬಹಿರಂಗಗೊಳಿಸಿತ್ತು. ರೋಹಿತ್ ಮತ್ತು ಸ್ನೇಹಿತರು ಫ್ಯಾಶಿಸ್ಟ್‌ರ ಬೆದರಿಕೆ ಉಲ್ಲಂಘಿಸಿ ವಿವಿಯಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಉತ್ತರವೆಂಬಂತೆ ಸಾಕ್ಷಿಯನ್ನು ಕಡೆಗಣಿಸಿ ಘಟನೆಯ ಬಗ್ಗೆ ತನಿಖೆಗೆ ಆದೇಶಿಸುತ್ತಾರೆಂದು ಆರೋಪಿಸಿದರು.
ಇದ್ಯಾವುದನ್ನೂ ಪರಿಗಣಿಸದೆ ಆರೆಸ್ಸೆಸ್‌ನ ಆದೇಶವನ್ನು ಪಾಲಿಸುವ ಹೊಸ ಕುಲಪತಿಯು ರೋಹಿತ್ ಮತ್ತು ಸ್ನೇಹಿತರನ್ನು ಅಮಾನತು ಮಾಡಿದ್ದಾರೆ. ಹಾಸ್ಟೆಲ್‌ನಿಂದ ಹೊರದಬ್ಬಲ್ಪಟ್ಟ ರೋಹಿತ್ ಮತ್ತು ಸ್ನೇಹಿತರು ಹಾಸಿಗೆಗಳನ್ನು ಬೀದಿಯಲ್ಲಿ ಹೊತ್ತೊಯ್ಯುವ ಚಿತ್ರಗಳು ಬಂದ ನಂತರದ ವಿಷಯ ದೊಡ್ಡ ವರದಿಯಾಗುತ್ತದೆ ಎಂದರು.
ಮರುದಿನ ಸಂಜೆ ರೋಹಿತನ ಮೃತದೇಹವು ಹಾಸ್ಟೆಲ್ ಕೊಠಡಿಯಲ್ಲಿ ಪತ್ತೆಯಾಗುತ್ತದೆ. ಸವರ್ಣ ಫ್ಯಾಶಿಸ್ಟರು ರೋಹಿತನನ್ನು ಮಾತ್ರ ಕೊಲ್ಲಲಿಲ್ಲ ಜೊತೆಗೆ ದಲಿತ ವಿದ್ಯಾರ್ಥಿಗಳ ಎದ್ದೇಳುವ ಸಾಧ್ಯತೆಯನ್ನೂ ಕೊಂದಿದ್ದಾರೆ. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾವು ಈ ನರಹತ್ಯೆಗೆ ಕಾರಣವಾದ ವಿವಿ ಅಧಿಕಾರಿಗಳು, ಕ್ರಮ ಕೈಗೊಳ್ಳಲು ಪತ್ರ ಬರೆದ ಕೇಂದ್ರದ ಮಂತ್ರಿ ವಿರುದ್ಧ ಕ್ರಮಕೈಗೊಳ್ಳಲು ಒತ್ತಾಯಿಸುತ್ತದೆ ಎಂದರು.
ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಮುದಾಯಗಳ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿಯೆತ್ತಿದ ವಿದ್ಯಾರ್ಥಿಯನ್ನು ಬೆಲೆಕಟ್ಟಿದಂತೆ ಕಾಣುತ್ತಿದೆ. ಯಾಕೆಂದರೆ ವಿದ್ಯಾರ್ಥಿಯು ಯಾಕೂಬ್ ಮೆಮನ್ ಗಲ್ಲು ಶಿಕ್ಷೆಯ ವಿರುದ್ಧ ಮತ್ತು ಮುಝಫ್ಫರ್ ನಗರ್ ಬಾಕಿ ಹೈ ಸಾಕ್ಷಚಿತ್ರ ಪ್ರದರ್ಶನ ಮುಂತಾದ ಹೋರಾಟಗಳಲ್ಲಿ ಭಾಗವಹಿಸಿದ್ದರು. ದಲಿತ ವಿದ್ಯಾರ್ಥಿಯ ಜೀವಹಾನಿ ಮಾಡಿದ ಕಾರಣಕ್ಕಾಗಿ ಬಿಜೆಪಿ ಮಂತ್ರಿಯನ್ನು ಜೈಲಿಗಟ್ಟಬೇಕು. ವಿದ್ಯಾರ್ಥಿಯ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಬೇಕು. ಅಮಾನತುಗೊಂಡ ದಲಿತ ವಿದ್ಯಾರ್ಥಿಗಳನ್ನು ಹಿಂದಕ್ಕೆ ಕರೆಸುವುದು ಹಾಗೂ ಸ್ವಾತಂತ್ರ್ಯ ಮತ್ತು ನ್ಯಾಯೋಚಿತ ತನಿಖೆಯನ್ನು ಕೈಗೊಳ್ಳಬೇಕೆಂದು ಅವರು ಇದೇ ವೇಳೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಮೆಹಬೂಬ್ ಬಾಷಾ, ಮುಸವ್ವಿರ್, ಸುಫಿಯಾನ್ ಮಡಿಕೇರಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.