ವಿಧಾನಸಭಾ ಉಪ ಚುನಾವಣೆ; ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟು
ಬೆಂಗಳೂರು, ಜ.20: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಘೋಷಣೆಯಾಗಿರುವ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಪ್ರತಿಪಕ್ಷ ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸಿದೆ.
ಹೆಬ್ಬಾಳ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವುದಾದರೆ ಪಕ್ಷದ ವತಿಯಿಂದಲೇ ಚುನಾವಣಾ ವೆಚ್ಚ ಭರಿಸಬೇಕೆಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಕಟ್ಟಾ ಮನವೊಲಿಸುವ ಹೊಣೆಗಾರಿಕೆಯನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರಿಗೆ ವಹಿಸಲಾಗಿದೆ.
ಈ ಸಂಬಂಧ ಶಾಸಕ ಮುನಿರಾಜು ಮತ್ತು ಬೆಂಗಳೂರು ನಗರ ಬಿಜೆಪಿ ಅಧ್ಯಕ್ಷ ಸುಬ್ಬನರಸಿಂಹ ಸದಾಶಿವನಗರದಲ್ಲಿರುವ ಕಟ್ಟಾ ಸುಬ್ರಹ್ಮಣ್ಯನಾಯ್ಡು ನಿವಾಸಕ್ಕೆ ಬುಧವಾರ ಸಂಜೆ ಭೇಟಿ ನೀಡಿ, ಉಪ ಚುನಾವಣೆಗೆ ಸಂಬಂಧಿಸಿದಂತೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
ಹೆಬ್ಬಾಳ ಕ್ಷೇತ್ರದಿಂದ ತಮಗೆ ಟಿಕೆಟ್ ನೀಡಬೇಕೆಂದು ಕಟ್ಟಾ ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ನನ್ನನ್ನು ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ನೀಡಿದರೆ ಚುನಾವಣಾ ಕಣದಿಂದ ತಟಸ್ಥರಾಗಿ ಉಳಿಯುವುದಾಗಿ ಬಿಜೆಪಿ ರಾಜ್ಯ ನಾಯಕರಿಗೆ ಅವರು ತಿಳಿಸಿದ್ದಾರೆ ಎಂದು ಎನ್ನಲಾಗಿದೆ.
ನನ್ನ ಮೇಲೆ ಇರುವ ಆರೋಪಗಳ ಬಗ್ಗೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುವ ಮೂಲಕ ಎದುರಿಸುತ್ತೇನೆ. ಅನೇಕ ಮುಖಂಡರ ವಿರುದ್ಧ ಆರೋಪಗಳಿವೆ. ಅವರಿಗೆಲ್ಲ ಮಣೆ ಹಾಕುವಾಗ ನನ್ನನ್ನು ಯಾಕೆ ಬಲಿಪಶು ಮಾಡುತ್ತಿದ್ದೀರಾ ಎಂದು ನಾಯಕರಿಗೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಹೆಬ್ಬಾಳ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಪ್ರಬಲ ಲಾಬಿ ನಡೆಸುತ್ತಿದ್ದಾರೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗೆ ಟಿಕೆಟ್ ಕೈ ತಪ್ಪಿದ್ದಲ್ಲಿ ಅವರ ಸೊಸೆ ಅಥವಾ ಇತ್ತೀಚೆಗೆ ನಿಧನರಾದ ಶಾಸಕ ಜಗದೀಶ್‌ಕುಮಾರ್ ಪತ್ನಿ ಲಲಿತಾಗೆ ಟಿಕೆಟ್ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ.
ಬೀದರ್ ಕ್ಷೇತ್ರದಿಂದ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ ಪುತ್ರ ಸೂರ್ಯಕಾಂತ್ ನಾಗಮಾರಪಲ್ಲಿಗೆ ಟಿಕೆಟ್ ಖಾತ್ರಿಯಾಗಿದ್ದರೂ ಅವರು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿರುವುದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಶಿವನಗೌಡ ನಾಯಕ್ ಅಥವಾ ಅವರ ತಾಯಿಗೆ ಚುನಾವಣಾ ಕಣಕ್ಕಿಳಿಸಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ.