ನೀತಿ ಸಂಹಿತೆ: ರಾಜಕೀಯ ನಾಯಕರ ಭಾವಚಿತ್ರ ಬಳಸದಂತೆ ಸೂಚನೆ
ಬೆಂಗಳೂರು, ಜ.21: ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಸರಕಾರಿ ಜಾಹೀರಾತುಗಳಷ್ಟೇ ಅಲ್ಲ, ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣೆ ಮಾಡುವ ದಿನಸಿ ಪದಾರ್ಥಗಳು, ಮಾರಾಟ ಸರಕುಗಳ ಪ್ಯಾಕೆಟ್‌ಗಳ ಮೇಲೆ ರಾಜಕೀಯ ನಾಯಕರ ಭಾವಚಿತ್ರ ಬಳಸದಂತೆ ರಾಜ್ಯ ಚುನಾವಣಾ ಆಯೋಗವು ಸರಕಾರಕ್ಕೆ ಸೂಚನೆ ನೀಡಿದೆ.
ಒಂದು ವೇಳೆ ಪ್ಯಾಕೆಟ್‌ಗಳ ಮೇಲೆ ಭಾವಚಿತ್ರಗಳನ್ನು ಮುದ್ರಿಸಿದ್ದರೆ ಅವುಗಳನ್ನು ಮರೆಮಾಚಿ ಸಾರ್ವಜನಿಕರಿಗೆ ಮಾರಾಟ ಮಾಡಬೇಕು. ಫೆ.13 ಹಾಗೂ 20ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು ಫೆ.24ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಆದುದರಿಂದ, ಮತದಾರರ ಮೇಲೆ ಪ್ರಭಾವ ಬೀರುವಂತಹ ಯಾವುದೆ ಕಾರ್ಯಕ್ರಮಗಳನ್ನು ಈ ಅವಧಿಯಲ್ಲಿ ಆಯೋಜಿಸುವಂತಿಲ್ಲ ಎಂದು ಚುನಾವಣಾ ಆಯೋಗವು ಸುತ್ತೋಲೆ ಹೊರಡಿಸಿದೆ.
108 ಆ್ಯಂಬುಲೆನ್ಸ್ ಸೇರಿದಂತೆ ಎಲ್ಲ ಮಾದರಿಯ ಸರಕಾರಿ ವಾಹನಗಳ ಮೇಲೂ ಯಾವುದೇ ರಾಜಕೀಯ ಮುಖಂಡರ ಭಾವಚಿತ್ರ ಅಥವಾ ಪೋಸ್ಟರ್‌ಗಳನ್ನು ಬಳಸುವಂತಿಲ್ಲ. ಒಂದು ವೇಳೆ ಅಂತಹ ಪ್ರಕರಣಗಳು ಗಮನಕ್ಕೆ ಬಂದಲ್ಲಿ ಸಾರಿಗೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ನೀತಿ-ಸಂಹಿತೆ ಜಾರಿಗೊಳಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗಿದೆ. ಚುನಾವಣೆ ಮುಗಿಯುವ ತನಕ ಮಂತ್ರಿಗಳು ಇಲ್ಲವೇ ಶಾಸಕರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆಗಳನ್ನು ನಡೆಸುವಂತಿಲ್ಲ ಎಂದು ಚುನಾವಣಾ ಆಯೋಗ ತಾಕೀತು ಮಾಡಿದೆ. ಬರ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ನೀರಾವರಿ ಯೋಜನೆಯಡಿ ಕಾಮಗಾರಿಗಳನ್ನು ಪ್ರಾರಂಭಿಸಿ ಅನುಷ್ಠಾನಗೊಳಿಸಲು ಹಾಗೂ ನೆರೆ, ಪ್ರಕೃತಿ ವಿಕೋಪ ಪರಿಹಾರ ವಿತರಣೆಗೆ ನೀತಿ-ಸಂತೆ ಅಡ್ಡಿಯಾಗುವುದಿಲ್ಲ. ಆದರೆ, ಇಂತಹ ಕಾರ್ಯಕ್ರಮಗಳಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಳ್ಳುವಂತಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಭೆಗಳನ್ನು ಆಯೋಜಿಸುವ ಮುನ್ನ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿಯನ್ನು ಪಡೆಯಬೇಕು. ಚುನಾವಣಾ ನೀತಿ ಸಂಹಿತೆ ಅಂತ್ಯಗೊಳ್ಳುವವರೆಗೆ ತಾತ್ಕಾಲಿಕ ಹುದ್ದೆಗಳ ನೇಮಕಾತಿಗೆ ಅವಕಾಶವಿಲ್ಲ. ತುರ್ತು ಸೇವೆಗಳಿಗೆ ನೇಮಕಾತಿ ಅಗತ್ಯವಿದ್ದಲ್ಲಿ, ಸರಕಾರಿ ನೌಕರರ ವರ್ಗಾವಣೆ, ಭಡ್ತಿ, ಖಾಲಿ ಹುದ್ದೆಗಳ ನೇಮಕಾತಿಗೆ ಮುನ್ನ ಚುನಾವಣಾ ಆಯೋಗದ ಅನುಮತಿಯನ್ನು ಪಡೆಯುವುದು ಕಡ್ಡಾಯ. ವಿಧಾನಮಂಡಲದ ಉಭಯ ಸದನಗಳ ಹಾಗೂ ಸಂಸತ್ತಿನ ಸದಸ್ಯರಿಗೆ ಜಿಲ್ಲಾ ಮಟ್ಟದಲ್ಲಿ ಅಥವಾ ತಾಲೂಕು ಮಟ್ಟದಲ್ಲಿ ಸಾಮಾನ್ಯ ಕರ್ತವ್ಯ ನಿರ್ವಹಣೆಗೆ ಒದಗಿಸಲಾಗಿರುವ ಸರಕಾರಿ ವಾಹನಗಳ ಬಳಕೆಗೆ ಅಭ್ಯಂತರವಿಲ್ಲ. ಆದರೆ, ಈ ವಾಹನಗಳನ್ನು ಚುನಾವಣಾ ಪ್ರಚಾರ ಅಥವಾ ಚುನಾವಣೆಗೆ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ ಬಳಕೆ ಮಾಡಿಕೊಂಡರೆ ಜಿಲ್ಲಾಧಿಕಾರಿಗಳು ತಕ್ಷಣವೇ ಅಂತಹ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಬೇಕು ಎಂದು ಚುನಾವಣಾ ಆಯೋಗ ನಿರ್ದೇಶನ ನೀಡಿದೆ.