ಸಾಫ್ಟ್‌ವೇರ್ ಉದ್ಯೋಗಿ ಕೊಲೆ ಪ್ರಕರಣ: ಬಂಧನ
ಬೆಂಗಳೂರು, ಜ.21: ನಿಗೂಢ ರೀತಿಯಲ್ಲಿ ನಡೆದಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಸುಮಾ ರಾಣಿ ಕೊಲೆ ಪ್ರಕರಣವನ್ನು ಭೇದಿಸಿರುವ ಕಾಡುಗೋಡಿ ಠಾಣಾ ಪೊಲೀಸರು, ಹರಿಯಾಣ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಹರಿಯಾಣ ಮೂಲದ ಸುಖ್‌ಬೀರ್ ಸಿಂಗ್ (28) ಎಂದು ಗುರುತಿಸಲಾಗಿದೆ.
ಆರೋಪಿಯು ಜ.19ರಂದು ಮಧ್ಯಾ ಹ್ನದ ಸುಮಾರಿಗೆ ಇಲ್ಲಿನ ಕಾಡುಗೋಡಿ ವಿಜಯಲಕ್ಷ್ಮೀ ಬಡಾವಣೆಯ ಮಹಾವೀರ ಕಿಂಗ್ಸ್ ಪ್ಲೇಸ್ ಅಪಾರ್ಟ್‌ಮೆಂಟ್ ನಾಲ್ಕನೆ ಮಹಡಿಯಲ್ಲಿನ ಫ್ಲಾಟ್ ನಂ.507ರಲ್ಲಿ ವಾಸವಾಗಿದ್ದ ಕುಸುಮಾರಾಣಿ (31) ಎಂಬವರನ್ನು ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಪ್ರಕರಣದ ಆರೋಪಿ 2011ರಲ್ಲಿ ನಗರದಲ್ಲಿ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, 2013ರಲ್ಲಿ ನಿರುದ್ಯೋಗಿಯಾಗಿದ್ದ. 20 ದಿನಗಳ ಹಿಂದೆಯೆಷ್ಟೇ ಫೇಸ್‌ಬುಕ್ ಮೂಲಕ ಪರಿಚಿತ ಳಾದ ಕುಸುಮಾ ರಾಣಿ ಅವರೊಂದಿಗೆ ಮದುವೆ ಮಾತುಕತೆ ನಡೆದಿತ್ತು ಎಂದು ಹೇಳಲಾಗಿದೆ.
ಜ.19ರಂದು ಕುಸುಮಾ ರಾಣಿ ಅವರ ಭೇಟಿಗೆ ಹೊಸದಿಲ್ಲಿ ಯಿಂದ ಬೆಂಗಳೂರಿಗೆ ವಿಮಾನದ ಮೂಲಕ ಆಗಮಿಸಿ ದ್ದು, ಅಪಾರ್ಟ್‌ಮೆಂಟ್‌ಗೆ ತೆರಳಿದ್ದ. ಇಬ್ಬರೂ ಒಟ್ಟಿಗೆ ಊಟ ಮಾಡಿದ್ದಾರೆ. ಬಳಿಕ ಆರೋಪಿ ಕುಸುಮಾ ರಾಣಿಗೆ 50 ಸಾವಿರ ರೂ. ನೀಡುವಂತೆ ಒತ್ತಾ ಯಿಸಿದ್ದು, ಆಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ವೈಯರ್‌ನಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಅನಂತರ ಆರೋಪಿ ಸುಖ್‌ಬೀರ್ ಸಿಂಗ್, ಕುಸುಮಾ ಅವರ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್, ಮೊಬೈಲ್ ಫೋನ್ ದೋಚಿದ್ದು, ಬ್ಯಾಂಕ್ ಸಿಬ್ಬಂದಿಯಿಂದ ಪಿನ್ ಸಂಖ್ಯೆ ಪಡೆದು 11 ಸಾವಿರ ರೂ. ಡ್ರಾ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕಾಡುಗೋಡಿ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್, ಡಿಸಿಪಿ ಡಾ. ಬೋರಲಿಂಗಯ್ಯ, ಎಸಿಪಿ ದುಗ್ಗಪ್ಪ, ಕಾಡುಗೋಡಿ ಇನ್ಸ್‌ಪೆಕ್ಟರ್ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.