ಶಿಕ್ಷಕರ ಆಯ್ಕೆ ಪಟ್ಟಿ ಇಂದು ಪ್ರಕಟ

Update: 2016-01-21 18:12 GMT

ಬೆಂಗಳೂರು, ಜ.21: ರಾಜ್ಯದಲ್ಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ 9,511ಮಂದಿ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ನಾಳೆ (ಜ.22) ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ.


ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಇದರಿಂದ ರಾಜ್ಯದಲ್ಲಿ ಶಿಕ್ಷಕರ ಕೊರತೆ ಕಡಿಮೆಯಾಗಲಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ರಾಜ್ಯ ಸರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.


ಎಲ್‌ಕೆಜಿ-ಯುಕೆಜಿ ಪ್ರವೇಶಕ್ಕೆ ತಾಕೀತು:ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಅನ್ವಯ ಪೂರ್ವ ಪ್ರಾಥಮಿಕ ಎಲ್‌ಕೆಜಿ ಮತ್ತು ಯುಕೆಜಿಯಿಂದಲೇ ರಾಜ್ಯದಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕೆಂದು ಕಿಮ್ಮನೆ ರತ್ನಾಕರ ಇದೇ ವೇಳೆ ಸೂಚಿಸಿದರು.


ಹೈಕೋರ್ಟ್ ರಾಜ್ಯ ಸರಕಾರದ ಕ್ರಮವನ್ನು ಎತ್ತಿಹಿಡಿದಿದೆ ಎಂದ ಅವರು, ಆರ್‌ಟಿಇ ಪ್ರವೇಶಕ್ಕೆ ಮಕ್ಕಳ ಜನ್ಮ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮತ್ತು ಪೋಷಕರ ಮತದಾರರ ಗುರುತಿನ ಚೀಟಿ ಕಡ್ಡಾಯವಾಗಿ ನೀಡಬೇಕು ಎಂದು ಅವರು ತಿಳಿಸಿದರು.


ಶಾಲಾ ಮಕ್ಕಳಿಗೆ ಶೂ ಮತ್ತು ಕಾಲುಚೀಲ (ಸಾಕ್ಸ್) ನೀಡಲು ಆಯಾ ಶಾಲಾ ಅಭಿವೃದ್ಧಿ ಸಮಿತಿಗಳಿಗೆ ಈಗಾಗಲೇ ಹಣ ಬಿಡುಗಡೆ ಮಾಡಿದ್ದು, ಸ್ಥಳೀಯ ಮಟ್ಟದಲ್ಲೇ ಸಮಿತಿ ಸದಸ್ಯರು ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಸೇರಿ ಗುಣಮಟ್ಟದ ಶೂ ಮತ್ತು ಸಾಕ್ಸ್ ಖರೀದಿ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.

ಈಗಾಗಲೇ ರಾಜ್ಯದಲ್ಲಿ ಶೇ.50ಕ್ಕೂ ಹೆಚ್ಚು ಶಾಲಾಭಿವೃದ್ಧಿ ಸಮಿತಿಗಳಿಗೆ ಹಣ ಬಿಡುಗಡೆ ಮಾಡಲಾಗಿದ್ದು, ಇನ್ನು ಮೂರು ತಿಂಗಳ ಒಳಗಾಗಿ ಎಲ್ಲ ಮಕ್ಕಳಿಗೆ ಶೂ ಮತ್ತು ಕಾಲುಚೀಲಗಳನ್ನು ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಸ್ಥಳೀಯ ಮಟ್ಟದಲ್ಲಿ ದಾನಿಗಳು ಮಕ್ಕಳಿಗೆ ಇನ್ನೂ ಒಂದು ಜೊತೆ ಕೊಡಿಸಲು ಸಹಾಯ ಮಾಡಬಹುದಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News