ದಿಲ್ಲಿಯಲ್ಲಿ ಹೈ ಅಲರ್ಟ್; ಎನ್‌ಐಎ- ಎಟಿಎಸ್ ಕಾರ್ಯಾಚರಣೆ ; ದೇಶದಲ್ಲಿ 11ಶಂಕಿತ ಉಗ್ರರ ಸೆರೆ
ಹೊಸದಿಲ್ಲಿ , ಜ.22: ರಾಷ್ಟ್ರೀಯ ತನಿಖಾ ದಳ(ಎನ್ ಐಎ) ಮಾರ್ಗದರ್ಶನದಲ್ಲಿ ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರರೆಂದು ಹೇಳಲಾದ 11 ಮಂದಿಯನ್ನು ಬಂಧಿಸಿದ್ದಾರೆ.
ಹೈದರಾಬಾದ್‌ನಲ್ಲಿ ನಾಲ್ವರು, ಬೆಂಗಳೂರಿನಲ್ಲಿ 4, ಮುಂಬೈ, ಮಂಗಳೂರು ಮತ್ತು ತುಮಕೂರಿನಲ್ಲಿ ತಲಾ ಓರ್ವನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇವರೆಲ್ಲ ಗಣರಾಜ್ಯೋತ್ಸವದ ವೇಳೆ ದೇಶದ ವಿವಿಧಡೆ ಸ್ಫೋಟಕ್ಕೆ ಸಂಚು ರೂಪಿಸಿದರೆನ್ನಲಾಗಿದೆ.
ಅಲ್‌ಕೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರೆಂಬ ಆರೋಪದಲ್ಲಿ ಕೆಲವು ದಿನಗಳ ಹಿಂದೆ ಎಟಿಎಸ್ ತಂಡ ವಶಕ್ಕೆ ತೆಗೆದುಕೊಂಡಿದ್ದ ಬೆಂಗಳೂರಿನ ಶಿವಾಜಿನಗರದ ನಿವಾಸಿ ಸೈಯದ್ ಅನ್ಸರ‍್ ಶಾ ಖಾಸ್ಮಿ ನೀಡಿದ ಮಾಹಿತಿಯಂತೆ ಎಟಿಎಸ್ ಅಧಿಕಾರಿಗಳು ಬೆಂಗಳೂರು ,ಮಂಗಳೂರು ಮತ್ತು ತುಮಕೂರಿನಲ್ಲಿ ಕಾರ್ಯಾಚರಣೆಗಿಳಿದು ಶಂಕಿತ ಉಗ್ರರನ್ನು ವಶಕ್ಕೆ ತೆಗೆದುಕೊಂಡರೆನ್ನಲಾಗಿದೆ
ಗುರುವಾರ ತಡರಾತ್ರಿ ಬೆಂಗಳೂರಿನ ಸರ್ಜಾಪುರ ರಸ್ತೆಯ ಜಕ್ಕಸಂದ್ರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಇಬ್ಬರು ಶಂಕಿತ ಉಗ್ರರನ್ನು ಶಸ್ತ್ರಾಸ್ತ್ರ ಸಮೇತ ಎಟಿಎಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡರು. ಇವರಿಂದ ಭಾರೀ ಪ್ರಮಾಣದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಮಂಗಳೂರಿನ ಪೆರ್ಮುದೆಯಲ್ಲಿ ನಜ್ಮುಲ್ ಹುಧಾ (25) ಮತ್ತು ತುಮಕೂರಿನಲ್ಲಿ ಸೈಯದ್ ಹುಸೈನ್ (25) ಎಂಬವರನ್ನು ಎಟಿಎಸ್ ವಶಕ್ಕೆ ತೆಗೆದುಕೊಂಡಿದ್ದು,ಇವರು ಉಗ್ರ ಸಂಘಟನೆ ಐಸಿಸ್ ಜೊತೆ ಸಂಪರ್ಕ ಹೊಂದಿದ್ದಾರೆಂದು ಹೇಳಲಾಗಿದೆ,
ಮಂಗಳೂರಿನ ಬಜ್ಪೆಯ ಪೆರ್ಮುದೆಯಲ್ಲಿರುವ ಮನೆಗೆ ಮುಂಜಾನೆ 2 ಗಂಟೆಗೆ ದಾಳಿ ನಡೆಸಿದ ಮಹಾರಾಷ್ಟ್ರದ ಎಟಿಎಸ್ ತಂಡ ನಜ್ಮುಲ್ ಹುಧಾ ನನ್ನು ವಶಕ್ಕೆ ತೆಗೆದುಕೊಂಡಿತು. ಬಳಿಕ 4:30ರ ಸುಮಾರಿಗೆ ತುಮಕೂರಿನಲ್ಲಿ ಗುಂಚಿ ಸರ್ಕಲ್‌ನಲ್ಲಿರುವ ಮನೆಯಿಂದ ಸೈಯದ್ ಹುಸೈನ್‌ನ್ನು ಎಟಿಎಸ್ ಅಧಿಕಾರಿಗಳು ತಂಡ ದಾಳಿ ನಡೆಸಿ ವಶಕ್ಕೆ ತೆಗೆದುಕೊಂಡರು.
ಬಂಧಿತ ಹುದಾ ಕೆಮಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ .ಮಂಗಳೂರಿನಲ್ಲಿ ಡಿಪ್ಲೋಮಾ ಮುಗಿಸಿ ಬೆಂಗಳೂರಿನ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದರೆಂದು ತಿಳಿದು ಬಂದಿದೆ.ಬಂಧಿತರನ್ನು ಎಟಿಎಸ್ ಅಧಿಕಾರಿಗಳ ತಂಡ ರಹಸ್ಯ ಸ್ಥಳದಲ್ಲಿ ವಿಚಾರಣೆಗೊಳಪಡಿಸುತ್ತಿದೆ.
ನನ್ನ ಮಗ ಅಮಾಯಕ: ಬಂಧಿತ ಹುಧಾ ತಾಯಿ ಪ್ರತಿಕ್ರಿಯೆ
".ನನ್ನ ಮಗ ಅಮಾಯಕ. ಆತನನ್ನು ಏಕಾಏಕಿ ಅರೆಸ್ಟ್ ಮಾಡಿರುವುದು ನನಗೆ ಆಘಾತ ನೀಡಿದೆ.. ಮೊಬೈಲ್‌ನಲ್ಲಿ ಯಾರಲ್ಲಿ ಮಾತನಾಡುತ್ತಿದ್ದ ಎಂದು ನನಗೆ ಗೊತ್ತಿಲ್ಲ."ಎಂದು ಮಂಗಳೂರಿನಲ್ಲಿ ಬಂಧಿತ ನಜ್ಮುಲ್ ಹುಧಾನ ತಾಯಿ ಟಿವಿ ಚಾನಲೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.