ಜ.23-31: ಕರಾವಳಿ ಉತ್ಸವ; ಜ.30-31: ರಾಷ್ಟ್ರ ಮಟ್ಟದ ಮೀನು ಹಿಡಿಯುವ ಸ್ಪರ್ಧೆ
ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ಜ. 30 ಮತ್ತು 31ರಂದು ನಡೆಯಲಿರುವ ಬೀಚ್ ಉತ್ಸವದಲ್ಲಿ ರಾಷ್ಟ್ರ ಮಟ್ಟದ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದು ಕರಾವಳಿ ಉತ್ಸವದ ಪ್ರಸಕ್ತ ಸಾಲಿನ ವಿಶೇಷ ಆಕರ್ಷಣೆಯಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಪಣಂಬೂರು ಕಡಲ ಕಿನಾರೆಯಲ್ಲಿ ಗಾಳದಲ್ಲಿ ಮೀನುಗಳನ್ನು ಹಿಡಿದು ಮತ್ತೆ ಸಮುದ್ರಕ್ಕೆ ಬಿಡುವ ಮೂಲಕ ವಿನೂತನ ರೀತಿಯಲ್ಲಿ ಈ ಸ್ಪರ್ಧೆ ನಡೆಯಲಿದೆ ಎಂದರು.
ಕರಾವಳಿ ಉತ್ಸವದ ಜತೆಯಲ್ಲೇ ಈ ಬಾರಿ ನಾಲ್ಕು ದಿನಗಳ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ, ಆಹಾರ ಮೇಳ ನಡೆಯಲಿದೆ. ಜ. 23ರಂದು ಸಂಜೆ 3.30ಕ್ಕೆ ಫಲಪುಷ್ಪ ಪ್ರದರ್ಶನ ಉದ್ಘಾಟನೆಗೊಳ್ಳಲಿದೆ. ಸಂಜೆ 6.30ಕ್ಕೆ ಲಾಲ್‌ಬಾಗ್‌ನ ಕರಾವಳಿ ಉತ್ಸವ ವೇದಿಕೆಯಲ್ಲಿ ಕರಾವಳಿ ಉತ್ಸವಕ್ಕೆ ಚಾಲನೆ ದೊರೆಯಲಿದೆ ಎಂದು ಸಚಿವ ರೈ ತಿಳಿಸಿದರು.
ಕದ್ರಿ ಪಾರ್ಕ್‌ನ ಬಲಬದಿ ಹಳೆಯ ಜಿಂಕೆ ವನದಲ್ಲಿ ಆಹಾರ ಮೇಳ ಸಂಜೆ 4 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಜ. 30 ಮತ್ತು 31ರಂದು ಪಣಂಬೂರು ಬೀಚ್ ಉತ್ಸವದಲ್ಲಿ ಆಕರ್ಷಕ ನೃತ್ಯ ಸ್ಪರ್ಧೆ, ಹಾಡುಗಾರಿಕೆ, ಯಕ್ಷಗಾನ ಕಾರ್ಯಕ್ರಮ, ಬೀಚ ವಾಲಿಬಾಲ್ ಪಂದ್ಯಾಟವನ್ನು ಆಯೋಜಿಸಲಾಗಿದೆ.
ಪ್ರಸಕ್ತ ಸಾಲಿನ ಕರಾವಳಿ ಗೌರವ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಸಮಿತಿ ರಚಿಸಲಾಗಿದೆ. ಸಮಿತಿ ಆಯ್ಕೆ ಮಾಡುವ ಸಾಧಕರಿಗೆ ಜ. 26ರಂದು ಕದ್ರಿ ಉದ್ಯಾನವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕರಾವಳಿ ಉತ್ಸವ ಕ್ರೀಡಾ ಸಮಿತಿ ಹಾಗೂ ದ.ಕ. ಜಿಲ್ಲಾ ವೈಟ್‌ಲಿಫ್ಟರ್ಸ್ ಅಸೋಸಿಯೇಶನ್ ಆಶ್ರಯದಲ್ಲಿ ಪುರಭವನದಲ್ಲಿ ಜ. 27 ಮತ್ತು 28ರಂದು ಪುರುಷರ ಮತ್ತು ಮಹಿಳೆಯರ ಜಿಲ್ಲಾ ಮಟ್ಟದ ಭಾರ ಎತ್ತುವ ಸ್ಪರ್ಧೆ ಡನೆಲಿದೆ. ಸುಮಾರು 28 ತಂಡಗಳ 200 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಕರಾವಳಿ ಉತ್ಸವದ ಅಂಗವಾಗಿ ಕರಾವಳಿ ಉತ್ಸವ ಮೈದಾನ ಹಾಗೂ ಕದ್ರಿ ಉದ್ಯಾನವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶೇ. 50ರಷ್ಟು ಸ್ಥಳೀಯ ಕಲಾವಿದರು ಹಾಗೂ ಶೇ. 50ರಷ್ಟು ರಾಜ್ಯ, ರಾಷ್ಟ್ರ ಮಟ್ಟದ ಪ್ರತಿಭಾವಂತ ಕಲಾವಿದರ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿದೆ ಎಂದು ಸಾಂಸ್ಕೃತಿಕ ಉತ್ಸವ ಸಮಿತಿಯ ನರೇಂದ್ರ ನಾಯಕ್ ತಿಳಿಸಿದರು.
ಜ.23ರಂದು ಸಂಜೆ 4 ಗಂಟೆಗೆ ಕದ್ರಿ ಉದ್ಯಾನವನದಿಂದ ಲಾಲ್‌ಬಾಗ್‌ನ ಕರಾವಳಿ ಉತ್ಸವ ವೇದಿಕೆವರೆಗೆ ಆಕರ್ಷಕ ಮೆರವಣಿಗೆ ಸಾಗಲಿದೆ. ಮೆರವಣಿಗೆಯಲ್ಲಿ ರಾಷ್ಟ್ರ, ರಾಜ್ಯ ಹಾಗೂ ಸ್ಥಳೀಯ ಕಲಾವಿದರು ಭಾಗವಹಿಸಲಿದ್ದಾರೆ. ಮೆರವಣಿಗೆ ಆರಂಭಕ್ಕ ಮೊದಲು ಕದ್ರಿ ಉದ್ಯಾನವನದ ಬಳಿ ಹಾಗೂ ಮೆರವಣಿಗೆ ಕರಾವಳಿ ಉತ್ಸವ ಮೈದಾನದ ತಲುಪಿದ ಬಳಿಕ ಅಲ್ಲಿ ಕಲಾವಿದರು ತಮ್ಮ ಕಲಾ ಪ್ರದರ್ಶನವನ್ನು ನೀಡಲಿದ್ದಾರೆ ಎಂದು ಮೆರವಣಿಗೆ ಸಮಿತಿ ಮುಖ್ಯಸ್ಥ ಹಾಗೂ ಕಸಪಾ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದರು.
ಗೋಷ್ಠಿಯಲ್ಲಿ ಮೇಯರ್ ಜೆಸಿಂತಾ ವಿಜಯಾ ಆಲ್ಪ್ರೆಡ್, ಮನಪಾ ಜಂಟಿ ಆಯುಕ್ತ ಗೋಕುಲ್‌ದಾಸ್ ನಾಯಕ್, ಬೂಡಾ ಅಧ್ಯಕ್ಷ ಪಿಯುಸ್ ಎಲ್. ರಾಡ್ರಿಗಸ್, ಬಿ.ಎ. ಖಾದರ್ ಮೊದಲಾದವರು ಉಪಸ್ಥಿತರಿದ್ದರು.