ನೇಣು ಹಗ್ಗ ಕೈಲ್ಲಿಟ್ಟುಕೊಂಡು ಉನ್ನತ ಶಿಕ್ಷಣಕ್ಕೆ ಕಾಲಿಡಬೇಕೆ?

Update: 2016-01-22 10:25 GMT

"ಜಾತಿಪದ್ಧತಿ ಎಲ್ಲಿದೆ?  ಅದ್ಯಾವುದೋ ತಾತನ ಕಾಲದಲ್ಲಿತ್ತು. ಈಗಲೂ ಯಾಕೆ ಜಾತಿ ಜಾತಿ ಅಂತ ಬಡ್ಕೋತೀರ. ನೀವು ಸಮಾಜವನ್ನು ಒಡೆಯುತ್ತಿದ್ದೀರಿ ಅಷ್ಟೆ ! ನಾವೆಲ್ಲಾ ಹಿಂದೂಗಳು  " ಎಂಬ ಮಾತುಗಳು ಒಬ್ಬ ಅಸ್ಪೃಶ್ಯತೆಗೆ ಒಳಗಾಗದ ಮೇಲ್ವರ್ಗದ ವಾಸ್ತವ ನಿರ್ಲಕ್ಷ್ಯ ವಾದಿಗಳಿಂದ ಕೇಳಬಹುದು ಮತ್ತು ಅದರಲ್ಲಿಯೂ ಹಿಂದುತ್ವದ ಅಮಲು ಏರಿಸಿಕೊಂಡವರಿಂದ ಇಂತಹ ಮಾತುಗಳು ಕೇಳಬಹುದು. ಆದರೆ ನಾವು ಒಂದು ವಿಷಯವನ್ನು ತುಂಬಾ ಪ್ರಮುಖವಾಗಿ ಯೋಚಿಸಬೇಕಿದೆ. ಜಾತಿವ್ಯವಸ್ಥೆ ಇನ್ನೂ ಜೀವಂತವಾಗಿರುವುದಕ್ಕೆ ನೂರಾರು ಘಟನೆಗಳ ಸಾಕ್ಷಿಯಾಗಿವೆ. ಆದರೆ ಈಗ ಜಾತಿ ತಾರತಮ್ಯದ ವಿಷ ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ?  ಎಂಬುದು ತುಂಬಾ ಮುಖ್ಯ.

ಒಂದು ಸಣ್ಣ ಉದಾಹರಣೆಯನ್ನು ಕೊಡಲು ಬಯಸುತ್ತೇನೆ. "ಅವಿದ್ಯಾವಂತನಾದ ಕೊಲೆಗಡುಕನ ಕೈಯಲ್ಲಿರುವ ಚಾಕುವಿನಿಂದ ಪ್ರಾಣ ತೆಗೆಯಬಹುದು,  ಒಬ್ಬ ಡಾಕ್ಟರ್ ಅದೇ ಚಾಕುವಿನಿಂದ ಪ್ರಾಣ ಉಳಿಸಬಹುದು. ಆದರೆ ಡಾಕ್ಟರೇ ಕೊಲೆಗಡುಕನಾದರೆ ಆ ಕೊಲೆ ಇನ್ನೆಷ್ಟು ಕ್ರೌರ್ಯದಿಂದ ನಡೆಯಬಹುದು !". ಈಗಿನ ಜಾತಿವ್ಯವಸ್ಥೆಯ ಮನಸ್ಥಿತಿಯೂ ಅಷ್ಟೆ ಅವಿದ್ಯಾವಂತರಿಂದ ವಿದ್ಯಾವಂತರ ಮೆದುಳಿಗೆ ವರ್ಗಾವಣೆಯಾಗಿದೆ. ಸಮಾನತೆ ಬೆಳೆಸಬಹುದಾದ ವಿದ್ಯಾವಂತರೇ ಇಂದು ಜಾತಿಯ ವಿಷಬೀಜ ಬಿತ್ತುತ್ತಿದ್ದಾರೆ. ಅನಕ್ಷರಸ್ಥ ಜಾತಿವಾದಿಗಳಿಂದ ಶೋಷಿತರ ಮೇಲೆ ದೈಹಿಕವಾಗಿ ದಾಳಿಗಳಾಗುತ್ತಿತ್ತು.ಆದರೆ ವಿದ್ಯಾವಂತ ಜಾತಿವಾದಿಗಳಿಂದ ಶೋಷಿತರ ಅಸ್ತಿತ್ವದ ಮೇಲೆ,ಬದುಕಿನ ಮೇಲೆ ಮತ್ತು ಬಹಳ ಮುಖ್ಯವಾಗಿ ಅವರ ಕನಸಿನ ಮೇಲೆ ದಾಳಿಗಳಾಗುತ್ತಿವೆ. ನಾವು ಹಿಂದಿಗಿಂತಲೂ ಅಪಾಯಕಾರಿ ಜಾತಿವಾದಿಗಳ ಮಧ್ಯೆ ಇದ್ದೀವೆಂದರೆ ತಪ್ಪಾಗಲಾರದು.

ಚೆನೈನ IIT ಯಲ್ಲಿ " ಅಂಬೇಡ್ಕರ್ ಪೆರಿಯರ್ ಸ್ಟಡಿ ಸರ್ಕಲ್ " ವಿದ್ಯಾರ್ಥಿ ಸಂಘಟನೆಯನ್ನು ನಿಷೇಧಿಸಿದ ನೆನಪು ಮಾಸುವ ಮುಂಚೆಯೇ ಮತ್ತೊಂದು ಘಟನೆ ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ನಡೆಯಿತು.  ಬಿಜೆಪಿ ಸಂಸದರಾದ ದತ್ತಾತ್ರೇಯ ಬಂಡಾರಿ ಮತ್ತು ABVP ಯ ಅಧ್ಯಕ್ಷನಾಗಿದ್ದಾಗ ಸುಶೀಲ್ ಕುಮಾರನ ಪ್ರಭಾವದಿಂದ ಐದು ಜನ ಪಿಹೆಚ್ಡಿ ವಿದ್ಯಾರ್ಥಿಗಳನ್ನು ಹಾಸ್ಟಲ್ ನಿಂದ ಹೊರಹಾಕಲಾಗಿತ್ತು. ಆದರೆ ಆ ಐದೂ ಜನ ಹಾಸ್ಟೆಲಿನ ಹೊರಗಡೆಯೇ ರಸ್ತೆಯಲ್ಲಿ ಕುಳಿತು ಪ್ರತಿಭಟಿಸುತ್ತಿದ್ದರು. ಅಲ್ಲದೇ ಅವರಿಗೆ ಸಿಗಬೇಕಿದ್ದ ಫೆಲೋಷಿಪ್ ಹಣವನ್ನೂ ಸಹ ತಡೆಹಿಡಿದಿದ್ದರು. ಕೂಲಿ ಮಾಡುವ ಮನೆತನದಿಂದ ಬಂದಿರುವ "ರೋಹಿತ್ ಚಕ್ರವರ್ತಿ ವೇಮುಲ" ಈ ಎಲ್ಲಾ ತಾರತಮ್ಯಕ್ಕೆ ಮನನೊಂದು ಬದಲಾಗದೆ ಇದ್ದ ಈ ಜಾತಿವಾದಿಗಳ ಕುತಂತ್ರಕ್ಕೆ ಸಾವಿಗೆ ಶರಣಾದನು. ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಜಾತಿವಾದಿಗಳಿಗೆ ಬಲಿಯಾದವರಲ್ಲಿ ಈತ 9 ನೆಯ ವಿದ್ಯಾರ್ಥಿ. ಅಂದರೆ ಈ ವಿ.ವಿ ಯು ಮನುವಾದಿಗಳ ಭದ್ರ ಕೋಟೆಯೆಂಬುದು ಅರಿಯಬೇಕು. ಕೇವಲ ಇದೊಂದೇ ವಿ.ವಿ ಯಲ್ಲ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಾದ IIT,IIM ,IISC ಗಳಲ್ಲಿಯೂ ಇಂತಹುದೇ ಘಟನೆಗಳು ಬಹಳಷ್ಟು ನಡೆದಿದೆ. ಒಂದು ಮಾತಿನಲ್ಲಿ ಹೇಳಬೇಕೆಂದರೆ " ವಿಶ್ವವಿದ್ಯಾನಿಲಯಗಳು ಆಧುನಿಕ ಅಸಮಾನತೆಯ ಗುರುಕುಲಗಳಂತೆ ಮಾರ್ಪಾಡಾಗಿವೆ".

ಈ ಆಧುನಿಕ ಗುರುಕುಲಗಳಲ್ಲಿ ಶೈಕ್ಷಣಿಕ ಭಯೋತ್ಪಾದನೆ !
ಶೋಷಿತ ಸಮುದಾಯಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳು ಸಾಧಾರಣವಾಗಿ ಉನ್ನತ ಶಿಕ್ಷ ಸಂಸ್ಥೆಗಳಿಗೆ ಕಾಲಿಡುವುದೇ ವಿರಳ. ಈಗ ವಿದ್ಯಾಭ್ಯಾಸ ಪಡೆಯುತ್ತಿರುವ ವಿದ್ಯಾರ್ಥಿಗಳೆಲ್ಲರೂ ಮೊದಲ ತಲೆಮಾರಿನ ವಿದ್ಯಾವಂತರೇ ಆಗಿದ್ದಾರೆ. ಅಂದರೆ ಆ ವಿದ್ಯಾರ್ಥಿಯ ತಂದೆ ತಾಯಿಗಳು ಕೂಡಾ ಅನಕ್ಷರಸ್ಥರಾಗಿದ್ದು ಈ ವಿದ್ಯಾರ್ಥಿಯೇ ಅವರ ಕುಟುಂಬದ ಮೊದಲ ವಿದ್ಯಾವಂತನಾಗಿರುವವರೇ ಅಧಿಕವಾಗಿದ್ದಾರೆ. ಇಂತಹ ಮೊದಲ ತಲೆಮಾರಿನ ವಿದ್ಯಾರ್ಥಿಗಳನ್ನು ತಾರತಮ್ಯದಿಂದ ನಡೆಸಿಕೊಂಡು ಅವರೇ ಜಿಗುಪ್ಸೆಯಾಗಿ ಒಂದು ಹೊರಗಾದರೂ ಹೋಗಬೇಕು ,ಇಲ್ಲ ಆತ್ಮಹತ್ಯೆಯಾದರೂ ಮಾಡಿಕೊಂಡು ಸಾಯಬೇಕು. ಇದು ಶೈಕ್ಷಣಿಕ ತಾರತಮ್ಯ ಅನ್ನುವುದಕ್ಕಿಂತಲೂ ಶೈಕ್ಷಣಿಕ ಭಯೋತ್ಪಾದನೆಯೆಂದು ಹೇಳುವುದೇ ಸೂಕ್ತ. ಈಗ ಮಗನನ್ನು ಕಳೆದುಕೊಂಡಿರುವ " ರೋಹಿತ್ ವೇಮುಲನ" ತಾಯಿ ತನ್ನ ಉಳಿದ ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಕಳಿಸುವಳೇ!?, ತನ್ನ ಮಗನ ಸಾವಿಗೆ ಕಾರಣವಾದ ಈ ಶಿಕ್ಷಣದ ಮೇಲೆ ಆಕೆಗೆ ಪ್ರೀತಿ ಹುಟ್ಟವುದೇ? ಎಂದಿಗೂ ಸಾಧ್ಯವಿಲ್ಲ. ಉನ್ನತ ಶಿಕ್ಷಣವೆಂದರೆ ನೇಣುಗಂಬಕ್ಕೆ ಹೋಗುವಂತೆ ಕಾಣಿಸುತ್ತದೆ. ಹೀಗೆ ತುಂಬಾ ವ್ಯವಸ್ಥಿತವಾಗಿ ಹಿಂದುಳಿದ,ದಲಿತ ಮತ್ತು ಅಲ್ಪಸಂಖ್ಯಾತರನ್ನು ಉನ್ನತ ಶಿಕ್ಷಣದಿಂದ ದೂರ ಮಾಡುತ್ತಿದ್ದಾರೆ.

ಉನ್ನತವಾದ ಕನಸಿಗೂ ಹೊಡೆತ ಬೀಳುತ್ತಿದೆ .
ಬಾಬಾ ಸಾಹೇಬರ ಮಾತೊಂದು ನೆನಪಿಗೆ ಬರುತ್ತಿದೆ Having small Aim is a big crime. ಸಣ್ಣ ಆಸೆಗಳನ್ನು ಇಟ್ಟುಕೊಳ್ಳುದು ದೊಡ್ಡ ಅಪರಾಧ ಎಂದು ಹೇಳುತ್ತಾರೆ. ಆತ್ಮಹತ್ಯೆಗೊಳಗಾದ ರೋಹಿತನ ಗುರಿಯೇನಾಗಿತ್ತೆಂದರೆ " ತಾನೊಬ್ಬ ಉತ್ತಮ ಬರಹಗಾರನಾಗಬೇಕು. ಅದರಲ್ಲೂ ವಿಜ್ಞಾನದ ವಿಷಯಗಳ ಬಗ್ಗೆ ಬರೆಯುವ ಬರಹಗಾರನಾಗಬೇಕು.ಆದರೆ ನಾನು ಬರೆಯುತ್ತಿರುವುದು  ಮೃತ್ಯು ಪತ್ರವಷ್ಟೇ". ಈ ಮಾತಿನಲ್ಲಿ ರೋಹಿತ್ ತನ್ನ ಗುರಿ ತಲುಪಲಾಗದ ಹತಾಶೆಯನ್ನು ವ್ಯಕ್ತಪಡಿಸಿದ್ದಾನೆ. ಆದರೆ ಆ ಮಾತಿನ ಒಳಗೆ ತನ್ನ ಕನಸು ನುಚ್ಚುನೂರು ಮಾಡಿದ ಬಗ್ಗೆ ಅಸಮಾಧಾನವೂ ಕಾಣುತ್ತದೆ.

ದಹನಕ್ರಿಯೋ ಅಥವಾ ದಮನಕ್ರಿಯೆಯೋ!
ಭಯೋತ್ಪಾದಕ ನಾಯಕನನ್ನು ಸಾಯಿಸಿದರೆ ಅವರ ದೇಹವನ್ನು ಯಾರಿಗೂ ಸಿಗದಂತೆ ಗುಪ್ತಸ್ಥಳದಲ್ಲಿ ದಹನ ಮಾಡಿ ಮುಗಿಸಿಬಿಡುತ್ತಾರೆಂದು ಕೇಳಿದ್ದೆ. ಆದರೆ ಒಬ್ಬ ವಿದ್ಯಾರ್ಥಿಯ ಮೃತ ದೇಹವನ್ನು ಹೆತ್ತವರಿಗೂ ಗೊತ್ತಾಗದಂತೆ ಬೇರೊಂದು ಸ್ಥಳದಲ್ಲಿ ದಹನಮಾಡಿದ್ದಾರೆಂದರೆ ಈ ನೀಚರ ದೃಷ್ಟಿಯಲ್ಲಿ ಆತ ವಿದ್ಯಾರ್ಥಿಯೋ ?ಅಥವಾ ಭಯೋತ್ಪಾದನೋ ?. ರೋಹಿತ್ ವೇಮುಲನ ದಹನಕ್ರಿಯೆಗೆ ಆಗಮಿಸಿದ್ದ ಸಾವಿರಾರು ಜನರನ್ನು ದಿಕ್ಕುತಪ್ಪಿಸಿ ಒಂದು ಅನಾತಶವದಂತೆ ಪೋಲೀಸರೇ ದಹನಕಾರ್ಯ ಮಾಡಿಬಿಟ್ಟದ್ದಾರೆಂದರೆ ಏನು ಕಾರಣ? ಮತ್ತು ಯಾರು ಕಾರಣ? ಸಾತ್ತ ಮೇಲೂ ಮತ್ತೊಮ್ಮೆ ಅವಮಾನಿಸುವ ಈ ಅನಾಗರೀಕರ ಅರಾಜಕತೆಗೆ ಕಾರಣಕರ್ತರಾಗಿರುವ ಬಿಜೆಪಿ ನಾಯಕರುಗಳಿಗೆ ನಿಜವಾಗಿಯೂ ದಲಿತರ ಮೇಲೆ ಪ್ರೀತಿ ಇದೆಯೇ?  ಒಬ್ಬ ಭಯೋತ್ಪಾದಕನ ಅಂತ್ಯಕ್ರಿಯೆಯಂತೆ ನಿಗೂಡವಾಗಿ ಮಾಡಿ ಮುಗಿಸಿರುವ ಈ ಘಟನೆ ಸಮಸ್ತ ವಿದ್ಯಾರ್ಥಿಗಳಿಗೆ ಮಾಡಿದ ಅವಮಾನವಲ್ಲವೇ! ಈ ದೇಶದ ಮೂಲಜನಾಂಗಕ್ಕೆ ಮಾಡಿದ ಅವಮಾನವಲ್ಲವೇ!

ಉನ್ನತವಾದ ಕನಸನ್ನು ಇಟ್ಟು ಉನ್ನತ ವ್ಯಾಸಂಗ ಮಾಡಬೇಕೆಂಬ ಮಹದಾಸೆಯಿಂದ ಇಂದು ಎಷ್ಟೋ ವಿದ್ಯಾರ್ಥಿಗಳು ಹಲವಾರು ವಿ.ವಿ ಗಳಲ್ಲಿ ಓದುತ್ತಿದ್ದಾರೆ. ಅಂತಹ ಲಕ್ಷಾಂತರ ವಿದ್ಯಾರ್ಥಿಗಳು ಇಂದು ನೇಣುಹಗ್ಗದೊಂದಿಗೆ ಆಟವಾಡುತ್ತಿರುವಂತಿದೆ. ಇಲ್ಲಿಯವರೆಗೂ ಇಂತಹ ಘಟನೆಗಳಿಗೆ ಕಾರಣರಾದ ಒಬ್ಬರಿಗಾದರೂ ಶಿಕ್ಷೆಯಾಗಿದ್ದರೆ ಬಹುಶಃ ಸ್ವಲ್ಪವಾದರೂ ಬದಲಾಗಬಹುದಿತ್ತು. ರೋಹಿತ್ ವೇಮುಲನ ಸಾವು ನಮಗೆ ಪಾಠವಲ್ಲ ಗುಣಪಾಠವಾಗಬೇಕಿದೆ.  ಏಕೆಂದರೆ ಬಾಬಾ ಸಾಹೇಬ್ ಅಂಬೇಡ್ಕರರ ಆಸೆಯನ್ನು ಈಡೇರಿಸದೆ ಈ ದೇಶದ ಹಿಂದುಳಿದ,ದಲಿತ ಮತ್ತು ಅಲ್ಪಸಂಖ್ಯಾತರಿಗೆ ಉಳಿಗಾಲವಿಲ್ಲ. "ದಬ್ಬಾಳಿಕೆ ಗುಲಾಮರ ಮೇಲೆ ಆಗುತ್ತದೆಯೇ ಹೊರೆತೂ ಆಳುವವರ ಮೇಲಲ್ಲ" ಎಂಬ ಅಂಬೇಡ್ಕರರ ಮಾತು ಎಷ್ಟು ಸತ್ಯವೆಂದು ತಿಳಿಯಬೇಕಿದೆ. ನಮ್ಮ ಶತ್ರುಗಳು ಆಯುಧಗಳನ್ನು ಹಿಡಿದು ಎದುರಿಗೆ ದಾಳಿ ಮಾಡುವವರಾಗಿದ್ದರೆ ನಾವು ಎದುರಿಸಬಹುದು, ಆದರೆ ನಮ್ಮ ಶತ್ರುಗಳು ನಮ್ಮ ಮಧ್ಯೆಯೇ ಓಡಾಡುತ್ತಾ ಹಿಂಬದಿಯಿಂದ ದಾಳಿ ಮಾಡುವವನಾಗಿದ್ದಾನೆ. ಇಂತಹ ರಣಹೇಡಿ ನಯವಂಚಕರ ವಿರುದ್ಧ ನಾವು ಮಾಡಬೇಕಿರುವುದು ಶಸ್ತ್ರಾಸ್ತ್ರಗಳಿಂದ ಮಾಡುವ ಯುದ್ದವಲ್ಲ ,ಬದಲಿಗೆ ಅವರ ಶಕ್ತಿಯ ಮೂಲವಾದ ಅಧಿಕಾರ ಪಡೆಯುವ ಮೂಲಕ ಸಾಧ್ಯ.

ರೋಹಿತ್ ವೇಮುಲನದು ಆತ್ಮಹತ್ಯೆಯಲ್ಲ ,ಅದೊಂದು ರಾಜಕೀಯ(ಅಧಿಕಾರ) ಪ್ರೇರಿತ ಕೊಲೆ. ಇಂತಹ ಕೊಲೆಗೆ ನಮ್ಮ ಸೇಡು ಅವರ ಮೂಲಸ್ಥಾನ(ಅಧಿಕಾರ) ಭಗ್ನಗೊಳಿಸುವಂತೆ ಮಾಡಬೇಕಿದೆ. 

Writer - ಜನಾ ನಾಗಪ್ಪ.

contributor

Editor - ಜನಾ ನಾಗಪ್ಪ.

contributor