ಅಯೋಧ್ಯೆಯಲ್ಲಿ ಶ್ರೀರಾಮಂದಿರ ನಿರ್ಮಾಣ ಶೇ.60ರಷ್ಟು ಸಿದ್ಧತೆಗಳು ಪೂರ್ಣ: ತೊಗಾಡಿಯಾ
ಚಿಕ್ಕಮಗಳೂರು, ಜ.22: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಸಂಬಂಧ ಶೇ.60ರಷ್ಟು ಸಿದ್ಧತೆಗಳು ಪೂರ್ಣಗೊಂಡಿವೆ. ವಿವಾದಿತ ಭೂಮಿಯನ್ನು ಪಡೆದು ಅಲ್ಲಿ ಮಂದಿರ ನಿರ್ಮಿಸುವುದು ಮಾತ್ರ ಬಾಕಿ ಉಳಿದಿದೆ. ಈ ಭೂಮಿ ಕುರಿತು ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ್‌ನಲ್ಲಿ ತಲಾ ಒಂದೊಂದು ವ್ಯಾಜ್ಯಗಳು ಬಗೆಹರಿಯಬೇಕಾಗಿದ್ದು, ಇದು ಇತ್ಯರ್ಥವಾಗುವುದರ ಆಧಾರದಲ್ಲಿ ಮಂದಿರ ನಿರ್ಮಾಣ ಯಾವಾಗ ಎಂಬುದನ್ನು ಹೇಳಬಹುದು ಎಂದು ವಿಎಚ್‌ಪಿ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಹೇಳಿದರು.
ಶಂಕರಾಚಾರ್ಯರ ದರ್ಶನ ಪಡೆಯುವ ಸಲುವಾಗಿ ಶೃಂಗೇರಿಗೆ ಭೇಟಿ ನೀಡಿದ ಬಳಿಕ ಅವರು ಮಾತನಾಡಿದರು.
ಕಾಶ್ಮೀರ ಸಹಿತ ವಿಶ್ವದ ವಿವಿಧೆಡೆ ಹಿಂದುಗಳ ಜನಸಂಖ್ಯೆ ಕ್ಷೀಣಿಸುತ್ತಿದೆ. ಹಿಂದುಗಳ ಸಂಖ್ಯೆ ಹೆಚ್ಚಿಸಲು ವಿಎಚ್‌ಪಿ ಅನೇಕ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಕೇವಲ ಶೇ.35ರಷ್ಟು ಮತಗಳನ್ನು ಪಡೆದು ಬಹುಮತ ಗಳಿಸಿದೆ. ಹಿಂದುಗಳ ಸಂಖ್ಯೆ ಕುಸಿಯುತ್ತ್ತ ಹೋದರೆ ಮುಂದೊಂದು ದಿನ ಕ್ರೈಸ್ತರು ಹಾಗೂ ಮುಸ್ಲಿಮರು ಶೇ.35ರಿಂದ 40ರಷ್ಟು ಮತ ನೀಡುವ ಮೂಲಕ ಅವರಿಗೆ ಇಷ್ಟವಾದವರನ್ನು ಅಕಾರದಲ್ಲಿ ಕೂರಿಸಬಹುದು. ಈ ಅಪಾಯವನ್ನು ಮನಗಾಣುವುದು ಅಗತ್ಯ ಎಂದರು.
ಮತಾಂತರ ಸಾಧ್ಯವೇ ಇಲ್ಲ ಎಂದು ಪ್ರತಿ ಹಿಂದುವೂ ಹೇಳಬೇಕು. ಮತಾಂತರಗೊಂಡವರು ಹಿಂದು ಧರ್ಮಕ್ಕೆ ಮರು ಮತಾಂತರ ಬಯಸಿದರೆ ಅವರನ್ನು ಕರೆತರಲಾಗುವುದು.ಲವ್ ಜಿಹಾದ್‌ಗೆ ಅವಕಾಶ ನೀಡಬಾರದು. ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕು. ಈ ಹಿನ್ನೆಲೆಯಲ್ಲಿ ಹಿಂದೂಗಳು ರಾಜಕೀಯವಾಗಿ ಮುಂದುವರಿಯಬೇಕು ಎಂದು ನುಡಿದರು.