×
Ad

ಐಸಿಸ್ ಜೊತೆ ಸಂಪರ್ಕ ಶಂಕೆ: ರಾಜ್ಯದ 6 ಮಂದಿ ವಶಕ್ಕೆ

Update: 2016-01-22 23:58 IST

ದೇಶಾದ್ಯಂತ 14 ಮಂದಿ ಯುವಕರ ಸೆರೆ


ಬೆಂಗಳೂರು, ಜ.22:ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ದೇಶಾದ್ಯಂತ ನಡೆಸಿದ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯೊಂದರಲ್ಲಿ ಐಸಿಸ್‌ನ ಮೇಲೆ ಸಹಾನುಭೂತಿ ಹೊಂದಿದವರೆಂದು ಶಂಕಿಸಲಾಗಿರುವ 14 ಮಂದಿಯನ್ನು ಬಂಧಿಸಿದ್ದಾರೆ. ಇವರಲ್ಲಿ ಕರ್ನಾಟಕದಿಂದ ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.


ಬೆಂಗಳೂರು, ಮಂಗಳೂರು, ತುಮಕೂರು ಸೇರಿದಂತೆ ರಾಜ್ಯದಲ್ಲಿ ರಾಷ್ಟ್ರೀಯ ತನಿಖಾ ದಳದ ಪೊಲೀಸರು ಸ್ಥಳೀಯ ಪೊಲೀಸರ ಸಹಕಾರದಿಂದ ಉಗ್ರವಾದಕ್ಕೆ ಬೆಂಬಲ ನೀಡಿದ ಆರೋಪದ ಮೇಲೆ ಒಟ್ಟು ಆರು ಮಂದಿಯನ್ನು ಬಂಧಿಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಖಚಿತಪಡಿಸಿದ್ದಾರೆ. ಬಂಧಿತರಲ್ಲಿ ಕೆಲವರು ವಿದ್ಯಾರ್ಥಿಗಳಾಗಿದ್ದು, ಮತ್ತೆ ಕೆಲವರು ವಿವಿಧ ಕಂಪೆನಿಗಳ ನೌಕರರಾಗಿದ್ದಾರೆ.


ಬಂಧಿತ ಶಂಕಿತ ಆರೋಪಿಗಳನ್ನು ತುಮಕೂರು ಮೂಲದ ಸೈಯದ್ ಮುಜಾಹಿದ್, ಬೆಂಗಳೂರಿನ ಹೆಗಡೆ ನಗರದ ಸಾರಾಯಿಪಾಳ್ಯದ ಮುಹಮ್ಮದ್ ಅಫ್ಜಲ್, ಜೆಜೆ ನಗರದ ಮೊಹಮ್ಮದ್ ಸುಹೈಲ್, ಕೆಜಿ ಹಳ್ಳಿಯ ನಿವಾಸಿ ಆಸೀಫ್ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಬೆಳಗಿನ ಜಾವ ಏಕಕಾಲಕ್ಕೆ ವಿವಿಧೆಡೆಗಳಲ್ಲಿ ದಿಢೀರ್ ದಾಳಿ ನಡೆಸಿದ ಮೂವತ್ತಕ್ಕೂ ಹೆಚ್ಚು ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಶಂಕಿತರನ್ನು ವಶಕ್ಕೆ ಪಡೆದಿದ್ದು, ಅವರು ಬಳಿ ಇದ್ದ ನಗದು, ಮೊಬೈಲ್‌ಗಳು, ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಬಂಧಿತ ಶಂಕಿತ ಆರೋಪಿಗಳ ಪೈಕಿ ಐದು ಮಂದಿಯನ್ನು ಬೆಂಗಳೂರಿನ ಮಡಿವಾಳದಲ್ಲಿನ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಸುದೀರ್ಘ ವಿಚಾರಣೆ ನಡೆಸಿದ ಅಧಿಕಾರಿಗಳು, ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಶಂಕಿತರನ್ನು ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.


ಬೆಂಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಎನ್‌ಐಎ, ಎಟಿಎಸ್ ಹಾಗೂ ರಾಜ್ಯದ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಆರು ಜನ ಶಂಕಿತರನ್ನು ಬಂಧಿಸಿದ್ದಾರೆ. ಆಂತರಿಕ ಭದ್ರತೆ ದೃಷ್ಟಿಯಿಂದ ಹೆಚ್ಚಿನ ವಿವರಗಳನ್ನು ಮಾಧ್ಯಮಗಳಿಗೆ ತಿಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.


ಶಂಕಿತ ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಆರೋಪ- ಪ್ರತ್ಯಾರೋಪ ಅನಗತ್ಯ. ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಎನ್‌ಐಎ ನಡೆಸಿದ ಈ ಕಾರ್ಯಾಚರಣೆಯ ಮಾಹಿತಿಯಿತ್ತು ಎಂದ ಅವರು, ಭಯೋತ್ಪಾದನಾ ಕೃತ್ಯಗಳನ್ನು ಹತ್ತಿಕ್ಕಲು ರಾಜ್ಯ ಸರಕಾರ ಸಮರ್ಥವಾಗಿದೆ ಎಂದರು.
ಸಂಭವನೀಯ ದಾಳಿ ಹಾಗೂ ಉಗ್ರಗಾಮಿ ಕೃತ್ಯಗಳನ್ನು ತಡೆಗಟ್ಟಲು ರಾಜ್ಯದಲ್ಲಿ ‘ಗರುಡ’ ಪಡೆಯನ್ನು ಸಜ್ಜುಗೊಳಿಸಲಾಗಿದೆ ಎಂದ ಗೃಹ ಸಚಿವ ಪರಮೇಶ್ವರ್ ಇದೇ ವೇಳೆ ತಿಳಿಸಿದರು.

ಆರು ತಿಂಗಳ ಹಿಂದಿನಿಂದಲೇ ಅವರ ಮೇಲೆ ಕಣ್ಣಿರಿಸಲಾಗಿತ್ತು. ಐಸಿಸ್‌ನ ಜಾಲವೊಂದು ದೇಶಾದ್ಯಂತ ಸೃಷ್ಟಿಯಾಗುತ್ತಿದೆಯೆಂಬ ಸೂಚನೆಗಳ ನಡುವೆಯೇ ಈ ಬಂಧನಗಳನ್ನು ನಡೆಸಲಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.


ಬುಧವಾರ, ಐಸಿಸ್‌ನೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ನಾಲ್ವರನ್ನು ಉತ್ತರಾಖಂಡ್‌ನಿಂದ ಬಂಧಿಸಲಾಗಿತ್ತು. ಅವರು, ಐಸಿಸ್ ಪ್ರಚಾರದ ಜಾಲತಾಣಗಳಿಗೆ ಭೇಟಿ ನೀಡುತ್ತಿದ್ದ ಬಗ್ಗೆ ನಿಗಾ ವಹಿಸಲಾಗಿತ್ತು.


ನಿನ್ನೆ ಬಂಧಿಸಲಾದವರು ಹರಿದ್ವಾರದಲ್ಲಿ ನಡೆಯುತ್ತಿರುವ ಅರ್ಧ ಕುಂಭ ಮೇಳ, ಅಲ್ಲಿಗೆ ಹೋಗುವ ರೈಲುಗಳು ಹಾಗೂ ದಿಲ್ಲಿಯ ವ್ಯೆಹಾತ್ಮಕ ಪ್ರದೇಶಗಳ ಮೇಲೆ ದಾಳಿಯ ಯೋಜನೆ ಹಾಕಿಕೊಂಡಿದ್ದರೆಂದು ಆರೋಪಿಸಲಾಗಿದೆ.


ಬಂಧಿತರಿಂದ ಒಟ್ಟು 42 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರಿಗೆ ವಿದೇಶಗಳಿಂದ ಹವಾಲಾ ಹಣ ಬರುತ್ತಿತ್ತೇ ಎನ್ನುವುದರ ಕುರಿತಂತೆ ತನಿಖೆ ನಡೆಸಲಾಗುತ್ತಿದೆ. ಅವರಲ್ಲಿ ಸ್ಫೋಟಕಗಳು ಸಿಕ್ಕಿರುವ ಕುರಿತಂತೆ ಪೊಲೀಸರು, ಅಧಿಕಾರಿಗಳು ಇನ್ನೂ ಸ್ಪಷ್ಟಪಡಿಸಿಲ್ಲ.     

ದೇಶದ್ರೋಹದ ಮಹಾಪಾಪ ನಾವು ಮಾಡಲ್ಲ: ಶಂಕಿತ ಆರೋಪಿಗಳ ಸಂಬಂಧಿಕರು
ಬೆಂಗಳೂರು, ಜ.22: ದೇಶದ್ರೋಹದ ಮಹಾಪಾಪವನ್ನು ನಾವು ಮಾಡಲು ಸಾಧ್ಯವಿಲ್ಲ. ನ್ಯಾಯಾಂಗ ವ್ಯವಸ್ಥೆಯ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದ್ದು, ಬಂಧನಕ್ಕೆ ಒಳಗಾಗಿರುವ ಅಮಾಯಕರು ನಿರಪರಾಧಿಗಳಾಗಿ ಹೊರಬರುತ್ತಾರೆ ಎಂದು ಎನ್‌ಐಎ ತಂಡದಿಂದ ಬಂಧಿಸಲ್ಪಟ್ಟಿರುವ ಶಂಕಿತ ಆರೋಪಿಗಳ ಸಂಬಂಧಿಕರು ಹೇಳಿದ್ದಾರೆ.
ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಯ್ಯದ್ ಮುಜಾಹಿದ್ ಅವರ ತಂದೆ ಸಯ್ಯದ್ ಹುಸೇನ್, ಭಾರತದ ಮಣ್ಣಿನಲ್ಲಿ ನಾವು ಹುಟ್ಟಿದ್ದು, ಇಲ್ಲೇ ಸಾಯುತ್ತೇವೆ. ನಾವು ದೇಶಕ್ಕೆ ನಿಷ್ಠರಾಗಿದ್ದು, ದೇಶದ್ರೋಹದಂತಹ ಮಹಾಪಾಪವನ್ನು ನಾವು ಎಂದಿಗೂ ಮಾಡುವುದಿಲ್ಲ ಎಂದರು.
ಬೆಳಗಿನ ಜಾವ 3:30ರ ಸುಮಾರಿಗೆ 20 ರಿಂದ 22 ಮಂದಿ ಮನೆಗೆ ಬಂದು, ನನ್ನ ಮಗನನ್ನು ಬಂಧಿಸಿದರು. ಯಾವ ಕಾರಣಕ್ಕಾಗಿ ಆತನನ್ನು ವಶಕ್ಕೆ ಪಡೆಯಲಾಗುತ್ತಿದೆ ಎಂದು ಕೇಳಿದರೆ ಯಾವ ಮಾಹಿತಿಯನ್ನೂ ನೀಡಲಿಲ್ಲ ಎಂದರು.
ಮನೆಯಲ್ಲಿದ್ದ ಕುರ್‌ಆನ್, ಹದೀಸ್ ಪುಸ್ತಕಗಳು, ಮೂರು ಮೊಬೈಲ್ ಫೋನ್‌ಗಳು, ಮುಜಾಹಿದ್, ಆತನ ಪತ್ನಿ ಹಾಗೂ ನಾಲ್ವರು ಮಕ್ಕಳು ಹಜ್‌ಯಾತ್ರೆಗೆ ತೆರಳುವ ಉದ್ದೇಶದಿಂದ ಮಾಡಿಸಿಟ್ಟಿದ್ದ ಪಾಸ್‌ಪೋರ್ಟ್‌ಗಳು, ಬ್ಯಾಂಕ್ ಪಾಸ್‌ಪುಸ್ತಕ, ಗುರುತಿನ ಚೀಟಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದರು.
ತುಮಕೂರಿನಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ನಮ್ಮ ಮಗ ಮುಜಾಹಿದ್ ಡಿ.31ರಂದು ಮಂಡಿಪೇಟೆಯಲ್ಲಿದ್ದ ದಿನಸಿ ಅಂಗಡಿಯನ್ನು ಖಾಲಿ ಮಾಡಿ, ಮತ್ತೊಂದು ಅಂಗಡಿಗೆ ಹುಡುಕಾಟ ನಡೆಸುತ್ತಿದ್ದ. ಆ ಅಂಗಡಿಗೆ ನೀಡಿದ್ದ ಮುಂಗಡ ಹಣ 3.33 ಲಕ್ಷ ರೂ. ತಂದು ಮನೆಯಲ್ಲಿ ಇಡಲಾಗಿತ್ತು. ಅದನ್ನು ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ ಎಂದು ಅವರು ತಿಳಿಸಿದರು.

ನನಗೆ ಈಗ 85 ವರ್ಷ. ಮುಜಾಹಿದ್ ನಮಗೆ ಒಬ್ಬನೇ ಮಗ. ಆತ ವಿವಾಹಿತನಾಗಿದ್ದು, ಆತ ತಾನಾಯಿತು ತನ್ನ ಕೆಲಸವಾಯಿತು ಎಂದು ಕುಟುಂಬದೊಂದಿಗೆ ಸಂತೋಷದಿಂದ ಇದ್ದ. ಯಾವುದೇ ರಾಜಕೀಯ ಪಕ್ಷವಾಗಲಿ, ಸಂಘಟನೆಗಳೊಂದಿಗೆ ಆತನಿಗೆ ಸಂಬಂಧವಿಟ್ಟು ಕೊಂಡಿರಲಿಲ್ಲ ಎಂದು ಸಯ್ಯದ್ ಹುಸೇನ್ ಕಣ್ಣೀರು ಹಾಕಿದರು.

‘‘ವೌಲಾನ ಅನ್ಝರ್ ಶಾ ಖಾಸ್ಮಿಗೂ ಆತನಿಗೂ ಯಾವುದೇ ಸಂಬಂಧವಿಲ್ಲ. ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ, ಅವನು ನಿರಪರಾಧಿಯಾಗಿ ಹೊರಬರುತ್ತಾನೆ ಎಂಬ ಬಲವಾದ ವಿಶ್ವಾಸ ತನಗಿದೆ ’’ಎಂದು ಸಯ್ಯದ್ ಹುಸೇನ್ ಹೇಳಿದರು.

♦♦♦

ಸುಪ್ರೀಂಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ: ಆರೋಪ


ಬೆಂಗಳೂರು, ಜ.22: ಬಂಧಿತ ಮುಹಮ್ಮದ್ ಅಫ್ಝಲ್ ಪತ್ನಿ ಬುಶ್ರಾ ತಬಸ್ಸುಮ್ ಮಾತನಾಡಿ, ಇಂದು ನಸುಕಿನ 3 ಗಂಟೆ ವೇಳೆಗೆ ತಮ್ಮನ್ನು ದಿಲ್ಲಿ ಪೊಲೀಸರೆಂದು ಹೇಳಿಕೊಂಡ 30ರಿಂದ 35 ಮಂದಿ ಏಕಾಏಕಿ ಮನೆಗೆ ನುಗ್ಗಿ, ತನ್ನ ಪತಿಯ ಕೈಗಳನ್ನು ಕಟ್ಟಿ ಹಾಕಿದರು. ಬಂಧನದ ವಾರಂಟ್ ಇಲ್ಲದೆ ತನ್ನ ಪತಿಯನ್ನು ವಶಕ್ಕೆ ತೆಗೆದುಕೊಂಡಿರುವುದು ಸುಪ್ರೀಂಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದರು.

‘‘ನನ್ನ ಪತಿಯನ್ನು ಯಾವ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗುತ್ತಿದೆ. ಅವರನ್ನು ಬಂಧಿಸಿ ಎಲ್ಲಿಗೆ ಕರೆದೊಯ್ಯಲಾಗುತ್ತಿದೆ ಎಂಬ ಮಾಹಿತಿಯನ್ನು ನಮಗೆ ನೀಡಿಲ್ಲ. ಒಬ್ಬ ಪೊಲೀಸ್ ನನ್ನ ಪತಿಯ ತಲೆಗೆ ಬಂದೂಕು ಇಟ್ಟು, ದೈಹಿಕವಾಗಿಯೂ ಹಲ್ಲೆ ನಡೆಸಿದ. ಅಲ್ಲದೆ, ಶಸ್ತ್ರಾಸ್ತ್ರಗಳನ್ನು ಎಲ್ಲಿ ಬಚ್ಚಿಟ್ಟಿದ್ದೀಯಾ ಎಂದು ಬೆದರಿಕೆ ಹಾಕಿದರು’’ ಎಂದು ಅವರು ಹೇಳಿದರು.


‘‘ನಮ್ಮ ಮನೆಯನ್ನು ಸಂಪೂರ್ಣವಾಗಿ ಜಾಲಾಡಿದರು ಅವರಿಗೆ ಯಾವ ಶಸ್ತ್ರಾಸ್ತ್ರಗಳು ಸಿಕ್ಕಿಲ್ಲ. ನಮ್ಮ ಪತಿ ಮುಹಮ್ಮದ್ ಅಫ್ಝಲ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಕಾನೂನಿಗೆ ಗೌರವ ನೀಡುವಂತಹ ನಾಗರಿಕ. ತಮ್ಮ ಜೀವಿತಾವಧಿಯಲ್ಲಿ ಎಂದಿಗೂ ಯಾವುದೇ ರೀತಿಯ ಸಮಾಜದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ’’ ಎಂದು ಅವರು ತಿಳಿಸಿದರು.


‘‘ನಮಗೆ ಮೂರು ವರ್ಷದ ಮಗಳಿದ್ದಾಳೆ. ಪೊಲೀಸರು ವಿನಾಕಾರಣ ನನ್ನ ಫೋನ್ ಹಾಗೂ ಲ್ಯಾಪ್‌ಟಾಪ್‌ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ, ನನ್ನ ಪತಿಯ ಫೋನ್ ಹಾಗೂ ಲ್ಯಾಪ್‌ಟಾಪ್‌ನ್ನು ತೆಗೆದುಕೊಂಡು ಹೋಗಿದ್ದಾರೆ’’ ಎಂದು ಅವರು ಹೇಳಿದರು.

‘‘ನನ್ನ ಪತಿಯ ಕಾರು ಹಾಗೂ ದ್ವಿಚಕ್ರ ವಾಹನವನ್ನು ಪೊಲೀಸರು ತೆಗೆದುಕೊಂಡು ಹೋಗಿರುವುದು ನೋಡಿದರೆ, ಅವರ ವಿರುದ್ಧ ಸುಳ್ಳು ಸಾಕ್ಷಾಧಾರಗಳನ್ನು ಸೃಷ್ಟಿಸುತ್ತಾರೇನೋ ಎಂಬ ಸಂಶಯ ವ್ಯಕ್ತವಾಗುತ್ತಿದೆ ’’ಎಂದು ಅವರು ಅಳಲು ತೋಡಿಕೊಂಡರು.


‘‘ಪೊಲೀಸರು ನಮ್ಮ ಮನೆಯನ್ನು ಶೋಧ ಮಾಡಿದ ನಂತರ ಒಂದು ಖಾಲಿ ಹಾಳೆಯ ಮೇಲೆ ನನಗೆ ಸಹಿ ಮಾಡಲು ಹೇಳಿದರು. ಆದರೆ, ನಾನು ಅದಕ್ಕೆ ನಿರಾಕರಿಸಿದೆ. ಅಲ್ಲದೆ, ನನ್ನ ಮನೆಯನ್ನು ಶೋಧ ಮಾಡಿರುವ ಕುರಿತು ಲಿಖಿತವಾಗಿ ಪತ್ರ ನೀಡುವಂತೆ ಕೋರಿದೆ’’ ಎಂದು ಬುಶ್ರಾ ತಬಸ್ಸುಮ್ ತಿಳಿಸಿದರು.


‘‘ನನ್ನ ಪತಿಗೆ ವೌಲಾನ ಸಯ್ಯದ್ ಅನ್ಝರ್ ಶಾ ಖಾಸ್ಮಿ ಪರಿಚಯವಿದ್ದ ಕಾರಣಕ್ಕಾಗಿ ಅವರನ್ನು ಬಂಧಿಸಲಾಗಿದೆಯೆ ಎಂಬುದು ತಿಳಿಯುತ್ತಿಲ್ಲ. ನನ್ನ ಪತಿಯ ಬಂಧನ ಕ್ರಮ ಸುಪ್ರೀಂಕೋರ್ಟ್ ಆದೇಶ ಸ್ಪಷ್ಟ ಉಲ್ಲಂಘನೆಯಾಗಿದ್ದು, ಪೊಲೀಸರು ತಮ್ಮ ವಿಚಾರಣೆಯನ್ನು ಮುಗಿಸಿದ ಕೂಡಲೆ ಅವರನ್ನು ಬಿಡುಗಡೆ ಮಾಡಬೇಕು’’ ಎಂದು ಅವರು ಆಗ್ರಹಿಸಿದರು.


ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ತನಗೆ ನಂಬಿಕೆಯಿದ್ದು, ತನ್ನ ಪತಿ ನಿರಪರಾಧಿಯಾಗಿ ಹೊರ ಬರುತ್ತಾರೆ. ಕಾನೂನು ಪ್ರಕಾರ ನ್ಯಾಯಾಲಯದಲ್ಲಿ ಆರೋಪ ಸಾಬೀತಾಗುವವರೆಗೆ ಆರೋಪಿಯನ್ನು ‘ಅಪರಾಧಿ’ ಎಂದು ಪರಿಗಣಿಸಬಾರದು. ಆದರೆ, ಕೆಲ ಮಾಧ್ಯಮಗಳು ಆಧಾರ ರಹಿತವಾಗಿ ನನ್ನ ಪತಿಯನ್ನು ಭಯೋತ್ಪಾದಕನಂತೆ ಬಿಂಬಿಸುತ್ತಿರುವ ಕ್ರಮ ಸರಿಯಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

♦♦♦

ಬಂಧಿಸಲ್ಪಟ್ಟಿರುವ ಅಮಾಯಕರಿಗೆ ಕಾನೂನು ನೆರವು ನೀಡುವಂತೆ ಸಂತ್ರಸ್ತ ಕುಟುಂಬಗಳು ಕೋರಿದರೆ ನಾವು ಅದನ್ನು ಒದಗಿಸಲು ಸಿದ್ಧ. ಅಷ್ಟೇ ಅಲ್ಲ, ಅವರಿಗೆ ಆರ್ಥಿಕ ಸಹಾಯ ಹಾಗೂ ನೈತಿಕ ಸ್ಥೈರ್ಯವನ್ನೂ ನೀಡುತ್ತೇವೆ.
 - ಇರ್ಶಾದ್ ಅಹ್ಮದ್ ದೇಸಾಯಿ, ರಾಜ್ಯ ಸಂಚಾಲಕ, ಎಪಿಸಿಆರ್

♦♦♦

ನನ್ನ ಮಗ ಅಮಾಯಕ: ನಾಝಿಯಾ

ಬೆಂಗಳೂರು, ಜ.22: ತನ್ನ ಮಗ ಅಮಾಯಕ. ಆತನನ್ನು ಯಾವ ಕಾರಣಕ್ಕೆ ಪೊಲೀಸರು ಬಂಧಿಸಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಎನ್‌ಐಎಯಿಂದ ಬಂಧಿಸಲ್ಪಟ್ಟಿರುವ ಜೆ.ಜೆ.ನಗರದ ಶಂಕಿತ ಆರೋಪಿ ಮುಹಮ್ಮದ್ ಸುಹೈಲ್‌ನ ತಾಯಿ ನಾಝಿಯಾ ಪ್ರತಿಪಾದಿಸಿದ್ದಾರೆ.


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ನನ್ನ ಮಗ ಅರಬ್ಬಿ ಮದರಸದಲ್ಲಿ ಬಡವರಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿದ್ದ. ಇಂದು ಬೆಳಗ್ಗೆ 4:30ರ ಸುಮಾರಿಗೆ 20-25 ಮಂದಿ ಮನೆಗೆ ನುಗ್ಗಿ ಸುಹೈಲ್‌ನನ್ನು ಕರೆದುಕೊಂಡು ಹೋದರು. ಬೆಳಗಿನ ಪ್ರಾರ್ಥನೆ ಮಾಡಲು ಮಸೀದಿಗೆ ಹೋಗಲೂ ಬಿಟ್ಟಿಲ್ಲ’’ ಎಂದರು.


ಆತನನ್ನು ಯಾವ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂಬುದು ಗೊತ್ತಿಲ್ಲ. ಆತ ಅಮಾಯಕನಾಗಿದ್ದು, ಯಾವುದೇ ತಪ್ಪು ಮಾಡಿಲ್ಲ. ನಮ್ಮ ಕುಟುಂಬಕ್ಕೆ ಆಧಾರಸ್ತಂಭವಾಗಿರುವ ಸುಹೇಲ್‌ನನ್ನು ದಯವಿಟ್ಟು ಬಿಟ್ಟುಬಿಡಿ ಎಂದು ಅವರು ಮಾಧ್ಯಮಗಳ ಎದುರು ಕಣ್ಣೀರು ಹಾಕಿದರು.

♦♦♦

ಮಾಹಿತಿ ಇಲ್ಲ: ಸಿಎಂ
ಬೆಂಗಳೂರು, ಜ.22: ರಾಜ್ಯದಲ್ಲಿ ಶಂಕಿತ ಭಯೋತ್ಪಾದನೆ ಕೃತ್ಯದ ಆರೋಪದ ಮೇಲೆ ಕೆಲವರ ಬಂಧನದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಕಾರ್ಯಾಚರಣೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.


ಶುಕ್ರವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಗುಪ್ತಚರ ಇಲಾಖೆ ಮಾಹಿತಿಯನ್ನು ಆಧರಿಸಿ ಎನ್‌ಐಎ ಕಾರ್ಯಾಚರಣೆ ನಡೆಸಿದ್ದು, ಈ ಬಗ್ಗೆ ರಾಜ್ಯ ಸರಕಾರವನ್ನು ಕೇಳಿ ಕಾರ್ಯಾಚರಣೆ ನಡೆಸಬೇಕೆಂದೇನೂ ಇಲ್ಲ ಎಂದು ಹೇಳಿದರು.


 ರಾಜ್ಯದಲ್ಲಿ ಎಷ್ಟು ಮಂದಿ ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಎಲ್ಲೆಲ್ಲಿ ಬಂಧಿಸಲಾಗಿದೆ ಎಂಬ ಬಗ್ಗೆ ನನಗೆ ಹೆಚ್ಚಿನ ವಿವರ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

♦♦♦


ಬಂಧನ ನಿಜ: ಮೇಘರಿಕ್

ಬೆಂಗಳೂರು, ಜ.22: ಬೆಂಗಳೂರು ನಗರದಲ್ಲಿ ಶಂಕಿತ ಆರೋಪಿಗಳನ್ನು ಬಂಧಿಸಿರುವುದು ನಿಜ. ಆದರೆ, ಎಷ್ಟು ಮಂದಿಯನ್ನು ಬಂಧಿಸಲಾಗಿದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಸ್ಪಷ್ಟಪಡಿಸಿದ್ದಾರೆ.


 ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ತನಿಖಾ ಸಂಸ್ಥೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಸ್ಥಳೀಯ ಪೊಲೀಸರು ಅಗತ್ಯ ನೆರವು ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News