ದಲಿತ ವಿದ್ಯಾರ್ಥಿ ರೋಹಿತ್ ಆತ್ಮಹತ್ಯೆ ಪ್ರಕರಣ: ತಪ್ಪಿತಸ್ಥರ ಬಂಧನಕ್ಕೆ ಒತ್ತಾಯ
ಬೆಂಗಳೂರು: ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಸಚಿವರಾದ ಬಂಡಾರು ದತ್ತಾತ್ರೇಯ ಮತ್ತು ಸ್ಮತಿ ಇರಾನಿ ಸೇರಿದಂತೆ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಪರಿಶಿಷ್ಟ ಜಾತಿ/ವರ್ಗದ ಅಧ್ಯಾಪಕರ ಸಂಘ ಆಗ್ರಹಿಸಿದೆ.
ಶಿಕ್ಷಣ ಕ್ಷೇತ್ರದಲ್ಲಿ ದಲಿತರು ಹೆಚ್ಚು ಕ್ರಿಯಾಶೀಲರಾಗು ತ್ತಿರುವುದನ್ನು ಸಹಿಸಲಾಗದ ಮೇಲ್ಜಾತಿ-ಮೇಲ್ವರ್ಗದ ಶಕ್ತಿಗಳು ಅವರನ್ನು ದಮನ ಮಾಡುತ್ತಿರುವುದು ನಡೆಯುತ್ತಿದೆ. ದಲಿತ ಹಕ್ಕುಗಳನ್ನಷ್ಟೇ ಅಲ್ಲದೆ, ಆಲೋಚನೆಗಳನ್ನು ಚಿವುಟಿ ಹಾಕುತ್ತಿರುವುದಕ್ಕೆ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ಮೇಮುಲಾನ ಆತ್ಮಹತ್ಯೆ ಸಾಕ್ಷಿಯಾಗಿದೆ ಎಂದು ಸಂಘದ ಮುಖಂಡ ಡಾ.ಸುಬ್ರಹ್ಮಣ್ಯ ಸ್ವಾಮಿ ಹೇಳಿದ್ದಾರೆ.
ಉನ್ನತ ಶಿಕ್ಷಣದಲ್ಲಿ ಸಾಮಾಜಿಕ ನ್ಯಾಯವೆಂಬುದು ಮರೀಚಿಕೆಯಾಗಿದೆ. ಅಂಬೇಡ್ಕರ್ ತತ್ವ-ವಿಚಾರದ ಬೀಜಗಳು ಯುವ ಮನಸ್ಸುಗಳನ್ನು ಪ್ರೇರೇಪಿಸುತ್ತಿರುವ ವಿಷಯ ಆರೆಸೆಸ್ಸ್, ಎಬಿವಿಪಿ ಹಾಗೂ ಸಂಘ ಪರಿವಾರದ ಸಂಘಟನೆಗಳಿಗೆ ಸಹಿಸಲಾಗುತ್ತಿಲ್ಲ.
ಹೀಗಾಗಿ ಮಾತು-ಮಾತಿಗೂ ‘ಹಿಂದೂ ತಾವೆಲ್ಲ ಒಂದು’ ಎಂದು ಬಡಬಡಿಸುವವರು ಎಚ್ಚೆತ್ತ ದಲಿತರನ್ನು ಮಗ್ಗಲಮುಳ್ಳೆಂದು ಭಾವಿಸಿ ನಾನಾ ವಿಧಗಳಲ್ಲಿ ಹಿಂಸಿಸಿ ಮೃತ್ಯುವಿಗೆ ಶರಣಾಗುವಂತೆ ಮಾಡುತ್ತಿದ್ದಾರೆ. ಇಂತಹ ಕೊಲೆಪಾತಕಿಗಳನ್ನು ತಕ್ಷಣವೇ ಬಂಧಿಸಿ ಶಿಕ್ಷಿಸಬೇಕು ಎಂದು ಅವರು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.