ಮಂಗಳೂರು: ಕರಾವಳಿ ಉತ್ಸವಕ್ಕೆ ಸಿದ್ಧತೆ
Update: 2016-01-23 14:44 IST
ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ಜ. 30 ಮತ್ತು 31ರಂದು ನಡೆಯಲಿರುವ ಬೀಚ್ ಉತ್ಸವದಲ್ಲಿ ರಾಷ್ಟ್ರ ಮಟ್ಟದ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದು ಕರಾವಳಿ ಉತ್ಸವದ ಪ್ರಸಕ್ತ ಸಾಲಿನ ವಿಶೇಷ ಆಕರ್ಷಣೆಯಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.
ಪಣಂಬೂರು ಕಡಲ ಕಿನಾರೆಯಲ್ಲಿ ಗಾಳದಲ್ಲಿ ಮೀನುಗಳನ್ನು ಹಿಡಿದು ಮತ್ತೆ ಸಮುದ್ರಕ್ಕೆ ಬಿಡುವ ಮೂಲಕ ವಿನೂತನ ರೀತಿಯಲ್ಲಿ ಈ ಸ್ಪರ್ಧೆ ನಡೆಯಲಿದೆ ಎಂದರು.
ಕರಾವಳಿ ಉತ್ಸವದ ಜತೆಯಲ್ಲೇ ಈ ಬಾರಿ ನಾಲ್ಕು ದಿನಗಳ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ, ಆಹಾರ ಮೇಳ ನಡೆಯಲಿದೆ. ಜ. 23ರಂದು ಸಂಜೆ 3.30ಕ್ಕೆ ಫಲಪುಷ್ಪ ಪ್ರದರ್ಶನ ಉದ್ಘಾಟನೆಗೊಳ್ಳಲಿದೆ. ಸಂಜೆ 6.30ಕ್ಕೆ ಲಾಲ್‌ಬಾಗ್‌ನ ಕರಾವಳಿ ಉತ್ಸವ ವೇದಿಕೆಯಲ್ಲಿ ಕರಾವಳಿ ಉತ್ಸವಕ್ಕೆ ಚಾಲನೆ ದೊರೆಯಲಿದೆ ಎಂದು ಸಚಿವ ರೈ ತಿಳಿಸಿದರು.