ಕರಾವಳಿ ಉತ್ಸವ: ಕದ್ರಿಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ
ಮಂಗಳೂರು,ಜ.23: ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ನಡೆಯುವ ಕರಾವಳಿ ಉತ್ಸವದ ಅಂಗವಾಗಿ ಕದ್ರಿಪಾರ್ಕ್‌ನಲ್ಲಿ ಆಯೊಜಿಸಲಾದ ಫಲಪುಷ್ಪ ಪ್ರದರ್ಶನವನ್ನು ಇಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕರಾವಳಿ ಉತ್ಸವದ ಪ್ರಯುಕ್ತ ತೋಟಗಾರಿಕಾ ಇಲಾಖೆ ಆಕರ್ಷಣಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕರಾವಳಿ ಉತ್ಸವಕ್ಕೆ ಪೂರಕವಾಗಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ಎಲ್ಲರನ್ನು ಆಕರ್ಷಿಸುತ್ತಿದೆ ಎಂದು ಹೇಳಿದರು.
ಫಲಪುಷ್ಪ ಪ್ರದರ್ಶನದ ಮಳಿಗೆ ಉದ್ಘಾಟನೆಯನ್ನು ಸಾಹಿತಿ ಏರ್ಯ ಲಕ್ಷ್ಮೀನಾರಯಣ್ ಆಳ್ವ, ಹೂವಿನಿಂದ ಅಲಂಕೃತವಾದ ಯಕ್ಷಗಾನದ ಪ್ರದರ್ಶನದ ಮಾದರಿಯನ್ನು ಶಾಸಕ ಜೆ. ಆರ್. ಲೋಬೋ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ವಿಧಾನಪರಿಷತ್ ಸದಸ್ಯರಾದ ಪ್ರತಾಪ್ ಚಂದ್ರ ಶೆಟ್ಟಿ, ಐವನ್ ಡಿಸೋಜಮನಪಾ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಮೂಡ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿ.ಎ.ಮೊಹಮ್ಮದ್ ಹನೀಫ್, ರಿಜಿಸ್ಟ್ರಾರ್ ಉಮ್ಮರಬ್ಬ, ಮನಪಾ ಸಚೇತಕ ಶಶಿಧರ್ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.
22ಸಾವಿರ ಹೂವುಗಳಿಂದ ನಿರ್ಮಾಣಗೊಂಡ ಯಕ್ಷಗಾನ ಮಾದರಿ
ಕದ್ರಿಪಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಮಳಿಗೆಗಳ ನಡುವೆ ಯಕ್ಷಗಾನ ಪ್ರದರ್ಶನದ ಮಾದರಿಯೊಂದು ಗಮನಸೆಳೆಯುತ್ತಿದೆ. ಮೈಸೂರು ಉಮಾಶಂಕರ್ ಮತ್ತು ಬಳಗದವರು ನಿರ್ಮಿಸಿರುವ ಈ ಮಾದರಿ ಎಲ್ಲರ ಗಮನಸೆಳೆಯುತ್ತಿದೆ. ಯಕ್ಷಗಾನ ಪ್ರದರ್ಶನದ ಮಾದರಿಯಲ್ಲಿ 11 ಅಡಿ ಎತ್ತರದ ಅರ್ಜುನ ಪಾತ್ರದಾರಿ ಮತ್ತು 10.5 ಅಡಿ ಎತ್ತರದ ಕೃಷ್ಣ ಪಾತ್ರಧಾರಿಯ ಮಾದರಿ ,ಭಾಗವತ ಪಾತ್ರಧಾರಿ, ಚೆಂಡೆ ಬಾರಿಸುವ ಪಾತ್ರಧಾರಿ ಮತ್ತು ಮೃದಂಗ ಬಾರಿಸುವ ಪಾತ್ರಧಾರಿಯಿದೆ. ಇದರಲ್ಲಿ ಕೃಷ್ಣ ಮತ್ತು ಅರ್ಜುನ ಪಾತ್ರಧಾರಿಯನ್ನು 22 ಸಾವಿರ ಹೂವಿನಿಂದ ನಿರ್ಮಿಸಲಾಗಿದೆ. 12 ಸಾವಿರ ಗುಲಾಬಿ ಹೂವು, 2 ಸಾವಿರ ಸೇವಂತಿಗೆ, 40 ಗೊಂಚಲು ಆರ್ಕಿಡ್, 50 ದಸೀನಾ ಎಲೆಯನ್ನು ಬಳಸಲಾಗಿದೆ. ತೆಂಕುತಿಟ್ಟು ಯಕ್ಷಗಾನದ ಈ ಪ್ರದರ್ಶನ ಎಲ್ಲರ ಗಮನಸೆಳೆಯುತ್ತಿದೆ.
ಅದೇ ರೀತಿಯಲ್ಲಿ 20 ಸಾವಿರ ಗುಲಾಬಿಯನ್ನು ಉಪಯೋಗಿಸಲಾದ ಗಿಟಾರ್, ತಬಲ,ವೀಣೆ , 2 ಸಾವಿರ ಗುಲಾಬಿ ಮತ್ತು 30 ಗೊಂಚಲು ಆಸ್ಪರೇಗನ್ ಬಳಸಿದ ಡಾಲ್ಪಿನ್, 3 ಸಾವಿರ ಗುಲಾಬಿ ಮತ್ತು 50 ಗೊಂಚಲು ಆಸ್ಪರೇಗನ್ ಬಳಸಿದ ಪೆಂಗ್ವಿನ್ ಮಾದರಿ, 5 ಸಾವಿರ ಗುಲಾಬಿಯನ್ನು ಬಳಸಲಾದ ಐಸ್‌ಕ್ರೀಮ್ ಮಾದರಿ ಆಕರ್ಷಣೆಗೆ ಪಾತ್ರವಾಗಿದೆ.