ಕರಾವಳಿ ಉತ್ಸವಕ್ಕೆ ವರ್ಣರಂಜಿತ ಚಾಲನೆ
ಮಂಗಳೂರು : ಜ. 23: ದ.ಕ. ಜಿಲ್ಲಾ ಕರಾವಳಿ ಉತ್ಸವದ ಅಂಗವಾಗಿ ಇಂದು ಸಂಜೆ ಕದ್ರಿ ಉದ್ಯಾನವನದಿಂದ ಕರಾವಳಿ ಉತ್ಸವ ಮೈದಾನದವರೆಗೆ ವೈಭವಪೂರ್ಣ ಮೆರವಣಿಗೆ ನಡೆಯುವುದರೊಂದಿಗೆ ಕರಾವಳಿ ಉತ್ಸವಕ್ಕೆ ವರ್ಣರಂಜಿತ ಚಾಲನೆ ದೊರೆಯಿತು. ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಮಾರ್ಚ್ 7ರವರೆಗೆ ನಡೆಯುವ ಕರಾವಳಿ ಉತ್ಸವದ ವಸ್ತುಪ್ರದರ್ಶನವನ್ನು ಕರಾವಳಿ ಉತ್ಸವ ಮೈದಾನದಲ್ಲಿ ವಿದ್ಯುಕ್ತವಾಗಿ ಉದ್ಘಾಟಿಸಿದರು. ಮೆರವಣಿಗೆಯಲ್ಲಿ ಕರಾವಳಿಯ ವಿಶಿಷ್ಟ ಕಲಾ ಪ್ರಕಾರಗಳ ಟ್ಯಾಬ್ಲೊಗಳು, ಕೊಂಬು ಕಹಳೆ, ಚೆಂಡೆ, ಯಕ್ಷಗಾನ ಕಲಾಕೃತಿಯ ಮುಖವಾಡ-ಮಾದರಿಗಳು, ಕೋಲಾಟ, ಜಾನಪದ ಕುಣಿತ, ದಫ್, ಡೋಲು ಕುಣಿತ ಸಹಿತ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಕಲಾಕೃತಿಗಳು, ತಂಡಗಳು ಮೆರವಣಿಗೆಯುದ್ದಕ್ಕೂ ಉತ್ಸವಕ್ಕೆ ಮೆರುಗು ನೀಡಿದವು.
ಬಳಿಕ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕರಾವಳಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾ.ಎಂ.ಶಾಂತರಾಮ ಶೆಟ್ಟಿ ಅವರು, ಕರಾವಳಿ ಉತ್ಸವದ ಉದ್ಘಾಟನೆಗೆ ತನ್ನನ್ನು ಆಹ್ವಾನಿಸಿರುವುದಕ್ಕೆ ಸಂತೋಷ ತಂದಿದೆ ಎಂದರು. ಮಂಗಳೂರು ನಗರ ಸ್ಮಾರ್ಟ್ ಸಿಟಿಯಾಗುವ ಸಂಭವವಿದ್ದು, ಮುಂದಿನ ಕರಾವಳಿ ಉತ್ಸವದ ಆಚರಣೆಯ ಸಂದರ್ಭದಲ್ಲಿ ಸ್ಮಾರ್ಟ್‌ಸಿಟಿಯ ಸಂಭ್ರಮದೊಂದಿಗೆ, ಮಂಗಳೂರು ನಗರ ಇನ್ನಷ್ಟು ಅಭಿವೃದ್ಧಿ ಹೊಂದುವ ಮೂಲಕ ಕರಾವಳಿ ಉತ್ಸವವನ್ನು ಆಚರಿಸುವಂತಾಗಲಿ ಎಂದು ಹಾರೈಸಿದರು.ಸಚಿವ ರಮಾನಾಥ ರೈ ಮಾತನಾಡಿ, 45 ದಿನಗಳ ಕಾಲ ನಡೆಯುವ ಈ ಕರಾವಳಿ ಉತ್ಸವವು ಕರಾವಳಿಯ ಜನತೆಗೆ ಹಬ್ಬದ ವಾತಾವರಣವನ್ನು ಮೂಡಿಸಲಿ. ಜನರು ಸಂಭ್ರಮದೊಂದಿಗೆ ಭಾಗವಹಿಸುವಂತಾಗಲಿ ಎಂದು ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಅಧ್ಯಕ್ಷ ಜೆ.ಆರ್.ಲೋಬೊ ವಹಿಸಿದ್ದರು. ವೇದಿಕೆಯಲ್ಲಿ ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್, ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ದಿವ್ಯಪ್ರಭಾ ಗೌಡ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ರಾಯ್ ಕ್ಯಾಸ್ಟಲಿನೊ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ.ಎಂ.ಶಾಂತರಾಮ ಶೆಟ್ಟಿ ಅವರಿಗೆ ಪೇಟ ತೊಡಿಸಿ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ ಸ್ವಾಗತಿಸಿದರು.