×
Ad

ಐಸಿಸ್ ಜೊತೆ ನಂಟು ಹೊಂದಿರುವ ಶಂಕೆ: ಶಂಕಿತರು ಜ.27ರ ವರೆಗೆ ಎನ್‌ಐಎ ವಶಕ್ಕೆ

Update: 2016-01-23 23:51 IST

ಬೆಂಗಳೂರು, ಜ.23: ಐಸಿಸ್ ಸಂಘಟನೆಯ ಬಗ್ಗೆ ಸಹಾನುಭೂತಿ ಹೊಂದಿದ್ದರೆಂಬ ಸಂಶಯದ ಮೇಲೆ ನಿನ್ನೆ ರಾಷ್ಟ್ರೀಯ ತನಿಖಾ ದಳದ ಪೊಲೀಸರು ವಶಕ್ಕೆ ಪಡೆದಿದ್ದ ರಾಜ್ಯದ ಆರು ಮಂದಿ ಶಂಕಿತರನ್ನು ಶನಿವಾರ ಬೆಂಗಳೂರು ನಗರದ ಸಿಟಿ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಲಾಯಿತು.


ಮಧ್ಯಾಹ್ನ 12ಗಂಟೆಯ ಸುಮಾರಿಗೆ ಪೊಲೀಸರು ಮುಹಮ್ಮದ್ ಅಫ್ಜಲ್, ಆಸೀಫ್, ಮುಹಮ್ಮದ್ ಸುಹೈಲ್, ನಜ್ಮುಲ್ ಹುದಾ ಹಾಗೂ ಸೈಯದ್ ಹುಸೇನ್ ಸೇರಿದಂತೆ 6 ಮಂದಿ ಶಂಕಿತರನ್ನು ನ್ಯಾಯಾಧೀಶ ಮುರುಳೀಧರ್ ಪೈ ಅವರ ಪೀಠದ ಮುಂದೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಜ.27ರ ವರೆಗೆ ಎನ್‌ಐಎ ಪೊಲೀಸರ ವಶಕ್ಕೆ ನೀಡಲಾಗಿದೆ.


ಬೆಂಗಳೂರು, ತುಮಕೂರು ಹಾಗೂ ಮಂಗಳೂರಿನಲ್ಲಿ ನಿನ್ನೆ ವಶಕ್ಕೆ ಪಡೆದಿದ್ದ ಆರು ಮಂದಿ ಶಂಕಿತರನ್ನು ಎನ್‌ಐಎ, ಎಟಿಎಸ್ ಹಾಗೂ ಸ್ಥಳೀಯ ಪೊಲೀಸರು ಇಲ್ಲಿನ ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಸುದೀರ್ಘ ವಿಚಾರಣೆ ನಡೆಸಿದ್ದರು. ಈ ಮಧ್ಯೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.


ಈ ಮಧ್ಯೆಯೇ ಶಂಕಿತರ ಹೆಚ್ಚಿನ ವಿಚಾರಣೆಗಾಗಿ ಹೊಸದಿಲ್ಲಿಗೆ ಕರೆದೊಯ್ಯುಲು ಎನ್‌ಐಎ ಪೊಲೀಸರು ಬಾಡಿ ವಾರೆಂಟ್‌ಅನ್ನೂ ಪಡೆದಿದ್ದು ಶಂಕಿತರನ್ನು ದಿಲ್ಲಿಗೆ ಕರೆದೊಯ್ಯುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಶಂಕಿತರ ಪರವಾಗಿ ಜಾಮೀನು ಕೋರಿ ನ್ಯಾಯಾಲಯದ ಮುಂದೆ ಯಾರೂ ಹಾಜರಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News