×
Ad

ಪಕ್ಷ ನಿಷ್ಠೆಯಿಲ್ಲದವರಿಗೆ ಆದ್ಯತೆಯಿಲ್ಲ: ದೇವೇಗೌಡ

Update: 2016-01-24 00:12 IST

ಜೆಡಿಎಸ್ ನಾಯಕರ ಸಭೆ

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಪಕ್ಷ ಸೇರ್ಪಡೆಯಾಗಿ, ಆನಂತರ ಪಕ್ಷದ ಸಂಘಟನೆ, ಬೆಳವಣಿಗೆಯನ್ನು ಕಡೆಗಣಿಸುವವರಿಗೆ ಆದ್ಯತೆ ನೀಡುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಪ್ರಮುಖ ನಾಯಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಪಡೆಯುವ ಆಕಾಂಕ್ಷೆಯಿಂದ ಬರುವವರಿಂದ ಪಕ್ಷದ ಬೆಳವಣಿಗೆಯಾಗುವುದಿಲ್ಲ ಎಂದರು.

ಪಕ್ಷದ ಬಗ್ಗೆ ನಿಷ್ಠೆ, ಬದ್ಧತೆಯಿಲ್ಲದವರು ಪಕ್ಷಕ್ಕೆ ಸೇರುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬಂದು ಟಿಕೆಟ್ ಕೇಳುತ್ತಾರೆ. ಸಾರ್ವಜನಿಕವಾಗಿ ಅವರ ಮುಖವನ್ನು ಯಾರೂ ನೋಡಿರುವುದಿಲ್ಲ. ಹಾದಿ, ಬೀದಿಯಲ್ಲಿ ಹೋಗುವವರಿಗೆ ನಮ್ಮ ಪಕ್ಷದ ಮುಖಂಡರು ಚುನಾವಣೆಯಲ್ಲಿ ಸ್ಪರ್ಧಿಸಲು ಬಿ ಫಾರಂ ಕೊಡಿಸುತ್ತಾರೆ ಎಂದು ಅವರು ಕಿಡಿಕಾರಿದರು.

ಚುನಾವಣಾ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಬೇರೆ ಪಕ್ಷದ ನಾಯಕರ ಮನೆಗಳತ್ತ ಅವರುಗಳು ಮುಖ ಮಾಡುತ್ತಾರೆ. ಪಕ್ಷಕ್ಕಾಗಿ ದುಡಿಯುವ ಮನೋಭಾವನೆ ಅಂತಹವರಲ್ಲಿ ಇರುವುದಿಲ್ಲ. ರಾಷ್ಟ್ರೀಯ ಪಕ್ಷಗಳ ಮಾದರಿಯಲ್ಲಿ ನಮ್ಮಲ್ಲೂ ಘಟಾನುಘಟಿ ನಾಯಕರಿದ್ದಾರೆ. ಆದರೆ, ಅವರೆಲ್ಲ ಪಕ್ಷದ ಸಂಘಟನೆ ಹಾಗೂ ಬೆಳವಣಿಗೆಗೆ ಏನು ಮಾಡಿದ್ದಾರೆ ಎಂಬುದರ ಕುರಿತು ಆಲೋಚನೆ ಮಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಚುನಾವಣೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಸವಾಲುಗಳನ್ನು ಎದುರಿಸಿಕೊಂಡು ಮುನ್ನುಗ್ಗಬೇಕು. ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷಕ್ಕಾಗಿ ದುಡಿಯುವ ಮನೋಭಾವನೆಯನ್ನು ಹೊಂದಿರುವವರಿಗೆ ಮಾತ್ರ ಇನ್ನು ಮುಂದೆ ಆದ್ಯತೆ ನೀಡುತ್ತೇನೆ. ಜೆಡಿಎಸ್ ಕಾರ್ಯಕರ್ತರ ಪಕ್ಷ. ಯಾರ ಮನೆಯ ಸೊತ್ತು ಅಲ್ಲ ಎಂದು ದೇವೇಗೌಡ ಹೇಳಿದರು.

ಸ್ಥಳೀಯ ಸಂಸ್ಥೆಗಳ ಮೂಲಕ ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಕೆಲ ಅಭ್ಯರ್ಥಿಗಳು, ಈಗ ಬೇರೆ ಪಕ್ಷದ ನಾಯಕರ ಮನೆ ಬಾಗಿಲಲ್ಲಿ ನಿಂತಿದ್ದಾರೆ. ಇಂತಹವರನ್ನು ಪಕ್ಷಕ್ಕೆ ಕರೆತಂದು ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದರಿಂದ ಏನು ಪ್ರಯೋಜನವಾಗುತ್ತದೆ ಎಂದು ಅವರು ಪ್ರಶ್ನಿಸಿದರು.

ವಿಧಾನಪರಿಷತ್‌ಗೆ ಆಯ್ಕೆಯಾದ ನೂತನ ಸದಸ್ಯರನ್ನು ಅಭಿನಂದಿಸಲಾಯಿತು. ಸಭೆಯಲ್ಲಿ ಜೆಡಿಎಸ್ ಶಾಸಕರಾದ ಎನ್.ಚಲುವರಾಯ ಸ್ವಾಮಿ, ಶಾಸಕ ಬಿ.ಬಿ.ನಿಂಗಯ್ಯ, ಝಮೀರ್ ಅಹ್ಮದ್‌ಖಾನ್, ಎಚ್.ಸಿ.ಬಾಲಕೃಷ್ಣ, ಗೋಪಾಲಯ್ಯ, ಸುರೇಶ್‌ಬಾಬು, ಪುಟ್ಟಣ್ಣ, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News