×
Ad

ಶಂಕಿತ ಉಗ್ರ ಸೈಯ್ಯದ್ ಎಐಎಂಐಎಂ ಪಕ್ಷದ ಸದಸ್ಯನಲ್ಲ: ಸ್ಪಷ್ಟನೆ

Update: 2016-01-24 00:13 IST

ಬೆಂಗಳೂರು: ತುಮಕೂರಿನಲ್ಲಿ ಬಂಧನಕ್ಕೊಳಗಾದ ಶಂಕಿತ ಉಗ್ರ ಸೈಯ್ಯದ್ ಮುಜಾಹಿದ್, ಎಐಎಂಐಎಂ ಪಕ್ಷದ ಸದಸ್ಯ ಎಂದು ಆಪಾದಿಸಿರುವ ತುಮಕೂರು ಶಾಸಕ ರಫೀಕ್ ಅಹ್ಮದ್ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವುದಾಗಿ ಪಕ್ಷದ ಜಿಲ್ಲಾಧ್ಯಕ್ಷ ಮುಹಮ್ಮದ್ ಇಬ್ರಾಹೀಂ ತಿಳಿಸಿದ್ದಾರೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಂಕಿತ ಉಗ್ರನೆಂದು ಬಂಧಿಸಿರುವ ಸೈಯ್ಯದ್ ಮುಜಾಹಿದ್, ಆಲ್ ಇಂಡಿಯಾ ಮಜ್ಲಿಸೆ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಪಕ್ಷದ ಕಾರ್ಯದರ್ಶಿಯಾಗಿದ್ದರು ಎಂದು ತುಮಕೂರಿನ ಶಾಸಕ ರಫೀಕ್ ಅಹ್ಮದ್ ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ತಿಳಿಸಿದರು.

ಎಐಎಂಐಎಂ ಪಕ್ಷ ತುಮಕೂರಿನಲ್ಲಿ ಜನಪ್ರಿಯತೆ ಪಡೆದುಕೊಳ್ಳವುದನ್ನು ಸಹಿಸದ ಶಾಸಕರು ಪಕ್ಷಕ್ಕೆ ಮಸಿ ಬಳಿಯುವ ನಿಟ್ಟಿನಲ್ಲಿ ಈ ರೀತಿಯಾದ ಹೇಳಿಕೆ ನೀಡುವುದು ಸರಿಯಲ್ಲ. ಈ ಬಗ್ಗೆ ಸೂಕ್ತ ದಾಖಲೆಗಳಿದ್ದಲ್ಲಿ ಶಾಸಕರು ಬಹಿರಂಗಪಡಿಸಲಿ ಎಂದು ಸವಾಲೆಸೆದ ಅವರು, ಶಾಸಕ ರಫೀಕ್ ಅಹ್ಮದ್ ಕೂಡಲೇ ಕ್ಷಮೆಯಾಚಿಸದಿದ್ದರೆ ಅವರ ವಿರುದ್ಧ ಸುಳ್ಳು ಆರೋಪದಡಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.

ರಾಜೀನಾಮೆಗೆ ಆಗ್ರಹ: ಶಂಕಿತ ಉಗ್ರನೆಂದು ಬಂಧಿಸಿರುವ ಸೈಯ್ಯದ್ ಮುಜಾಹಿದ್ ಆಲ್ ಇಂಡಿಯಾ ಮಜ್ಲಿಸೆ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಕಾರ್ಯದರ್ಶಿಯಾಗಿದ್ದರು ಎಂದು ಸುಳ್ಳು ಆರೋಪ ಮಾಡಿರುವ ಶಾಸಕರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಇದೇ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕರ ಮೇಲೆ ಕ್ರಮಕೈಗೊಳ್ಳುವಂತೆ ಪತ್ರ ಬರೆಯುವುದಾಗಿ ತಿಳಿಸಿದ ಅವರು ನ್ಯಾಯಾಲಯದಲ್ಲಿ ಪ್ರಕರಣ ಕೂಡ ದಾಖಲಿಸುವುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಕಾರ್ಯಕಾರ್ತರಾದ ವಝೀರ್ ಅಹ್ಮದ್, ತನ್ವೀರ್ ಅಹಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News