ಧರ್ಮ, ಜಾತಿಯನ್ನು ಹೊರಗಿಟ್ಟು ಕೋಮುವಾದವನ್ನು ಎದುರಿಸಲಾಗದು: ಮಟ್ಟು
ಬೆಂಗಳೂರು: ಭಾರತದಲ್ಲಿ ಧರ್ಮ ಹಾಗೂ ಜಾತಿಯನ್ನು ದೂರವಿಟ್ಟು ಕೋಮುವಾದವನ್ನು ಎದುರಿಸಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಅರಿಯುವ ಮೂಲಕ ಮೂಲಭೂತವಾದದ ವಿರುದ್ಧ ಹೊಸ ತರಹದ ಹೋರಾಟವನ್ನು ಕಟ್ಟಬೇಕಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ತಿಳಿಸಿದ್ದಾರೆ.
ಶನಿವಾರ ಪುಸ್ತಕ ಪ್ರೀತಿ ಪ್ರಕಾಶನ ನಗರದ ಎಸ್‌ಸಿಎಂ ಹೌಸ್‌ನಲ್ಲಿ ಆಯೋಜಿಸಿದ್ದ ಪುಸ್ತಕ ಪ್ರೀತಿ ತಿಂಗಳ ಮಾತುಕತೆ ಕಾರ್ಯಕ್ರಮದಲ್ಲಿ ‘ಸೆಕ್ಯುಲರ್‌ವಾದ-ಸವಾಲುಗಳು’ ಕುರಿತು ಮಾತನಾಡಿದ ಅವರು, ಭಾರತ ನೂರಾರು ಜಾತಿಗಳಿಂದ ಕೂಡಿದ ರಾಷ್ಟ್ರವಾಗಿದ್ದು, ಜಾತಿ ಕುರಿತು ಪ್ರಶ್ನೆ ಮಾಡದೆ ಯಾವ ಚಳವಳಿಯನ್ನು ಕಟ್ಟಲು ಬರುವುದಿಲ್ಲವೆಂದು ತಿಳಿಸಿದರು.
ದೇಶದಲ್ಲಿ ಜಾತಿ ನಡುವಿನ ತಾರತಮ್ಯವನ್ನು ಯಥಾಸ್ಥಿತಿಯಾಗಿಡುವುದೇ ಕೋಮುವಾದಿಗಳ ಹುನ್ನಾರವಾಗಿದೆ. ಜಾತಿ ಶೋಷಣೆ ಹಿಂದೂ ಧರ್ಮದ ಸಾರವಾಗಿದೆ. ಹೀಗಾಗಿ ಪ್ರಗತಿಪರರು ಜಾತಿ ಶೋಷಣೆಯ ವಿರುದ್ಧ ದೊಡ್ಡ ಮಟ್ಟದ ಚಳವಳಿಯನ್ನು ಕಟ್ಟುವ ಮೂಲಕ ಕೋಮುವಾದಿಗಳ ನಿಜವಾದ ಮುಖವಾಡವನ್ನು ಬಯಲು ಮಾಡಬಹುದೆಂದು ಅವರು ತಿಳಿಸಿದರು.
ದೇಶದಲ್ಲಿ ಹಿಂದೂ ಕೋಮುವಾದಿಗಳು ಜನರ ಭಾವನೆಗಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಲಕ್ಷಾಂತರ ಜನರ ಮೆದುಳುಗಳಿಗೆ ಕೋಮು ಧ್ವೇಷವನ್ನು ಬಿತ್ತಿ ಹಿಂಸೆಗೆ ಕಾರಣರಾಗಿದ್ದಾರೆ. ಇವರ ಈ ಪ್ರಚೋದನೆಯಿಂದಾಗಿ ಮುಸ್ಲಿಮ್ ಕೋಮುವಾದ ಬೆಳೆಯುತ್ತಿದೆ ಎಂದು ದಿನೇಶ್ ಅಮೀನ್ ಮಟ್ಟು ತಿಳಿಸಿದರು.
ಲೋಹಿಯಾರವರ ಸಮಾಜವಾದವು ಕೋಮುವಾದಿ ಸಿದ್ಧಾಂತಕ್ಕೆ ಸರಿಯಾದ ಉತ್ತರ ನೀಡಬಲ್ಲದು. ಕೋಮುವಾದಿಗಳ ಹಿಡಿತದಲ್ಲಿರುವ ಪುರಾಣಗಳನ್ನೇ ಲೋಹಿಯಾರವರು ಬಳಸಿಕೊಂಡು ಜನರಲ್ಲಿ ಮಾನವೀಯತೆಯ ಸಿದ್ಧಾಂತವನ್ನು ಬಿತ್ತಲು ಪ್ರಯತ್ನಿಸಿದ್ದರು. ಅವರ ಮಾದರಿಯಲ್ಲಿಯೇ ಹೋರಾಟವನ್ನು ಮುಂದುವರಿಸುವುದು ಅಗತ್ಯವಿದೆ ಎಂದು ಅವರು ತಿಳಿಸಿದರು.
ಮಾನವ ಹಕ್ಕು ಹೋರಾಟಗಾರ ನಗರಗೆರೆ ರಮೇಶ್, ಲೇಖಕರಾದ ಬಿ.ಶ್ರೀಪಾದ, ಪ್ರಾಧ್ಯಾಪಕ ಡಾ.ರಂಗನಾಥ ಕಂಟನಕುಂಟೆ, ಎಸ್.ಶಿವಾನಂದ ಸಾಸ್ವೆಹಳ್ಳಿ ಮತ್ತಿತರರಿದ್ದರು.
ಕೋಮುವಾದಿಗಳು ಮುಸ್ಲಿಮ್ ಸಮುದಾಯದ ವಿರುದ್ಧ ಹುಸಿ ಭಯೋತ್ಪಾದನೆಯನ್ನು ಮುನ್ನೆಲೆಗೆ ತರುವ ಮೂಲಕ ದ್ವೇಷದ ವಾತಾವರಣವನ್ನು ಬಿತ್ತ್ತುತ್ತಿದ್ದಾರೆ. ಹೀಗಾಗಿಯೇ ಗಣರಾಜ್ಯೋತ್ಸವದ ಸಂದರ್ಭಗಳಲ್ಲಿ ಕೆಲವು ಅಮಾಯಕ ಮುಸ್ಲಿಮ್ ಯುವಕರನ್ನು ಭಯೋತ್ಪಾದನೆಯ ಹೆಸರಿನಲ್ಲಿ ಬಂಧಿಸಲಾಗುತ್ತಿದೆ.
-ದಿನೇಶ್ ಅಮೀನ್ ಮಟ್ಟು,ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ