ಮೂಲಭೂತವಾದಿಗಳ ಕಪಿಮುಷ್ಟಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ: ಅಮೀನ್ ಮಟ್ಟು
ಲೇಖಕ ಯೋಗೇಶ್ ಮಾಸ್ಟರ್ ಕೃತಿಗಳ ಲೋಕಾರ್ಪಣೆ
ಬೆಂಗಳೂರು: ಮೂಲಭೂತವಾದಿ ಸಂಘಟನೆಗಳು ಹಾಗೂ ಉದ್ಯಮಿಗಳ ಕಪಿಮುಷ್ಟಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರವು ನರಳುತ್ತಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಿಸಿದ್ದಾರೆ.
ಶನಿವಾರ ರಾಜಮಾರ್ಗ ಸಾಹಿತ್ಯ ಸಂಸ್ಕೃತಿ ನಗರದ ಕಸಾಪದಲ್ಲಿ ಆಯೋಜಿಸಿದ್ದ ಲೇಖಕ ಯೋಗೇಶ್ ಮಾಸ್ಟರ್ ಅವರ ‘ಕಾಲಿ ಸ್ಲೇಟು’, ‘ಮಕ್ಕಳಿರಲವ್ವ’, ‘ಆಡಿ ಬಾ ನನ್ನ ಕಂದಾ’, ‘ಪುರಾಣದ ರೂಪಕಗಳು’ ಸೇರಿದಂತೆ ಎಲ್ಲ ಕೃತಿಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ದೇಶದಲ್ಲಿ ಸೃಜನಶೀಲ ಹಾಗೂ ಪ್ರಗತಿಪರ ಲೇಖಕರ ಅಭಿವ್ಯಕ್ತಿ ಸ್ವಾತಂತ್ರದ ಹರಣ ನಡೆಯುತ್ತಿದೆ. ಕಳೆದ 25 ವರ್ಷಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಲೇಖಕರನ್ನು ಬಂಧಿಸಲಾಗಿದೆ. ಇದು ಮೇಲ್ನೋಟಕ್ಕೆ ಸರಕಾರದ ಕೃತ್ಯ ಎನಿಸಿದರೂ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತೆರೆಮರೆಯಲ್ಲಿ ನಡೆಸುತ್ತಿರುವ ಕೃತ್ಯವಾಗಿದೆ ಎಂದು ಅವರು ತಿಳಿಸಿದರು.
ದೇಶದಲ್ಲಿ ಇಲ್ಲಿಯವರೆಗೂ ನಿಷೇಧಕ್ಕೊಳ ಗಾಗಿರುವ ಬಹುತೇಕ ಪುಸ್ತಕಗಳು ಧರ್ಮಕ್ಕೆ ಸಂಬಂಧಿಸಿದ್ದಾಗಿವೆ. ಧರ್ಮಗಳಲ್ಲಿರುವ ಜನವಿರೋಧಿ ಅಂಶಗಳನ್ನು ತಮ್ಮ ಕೃತಿಗಳ ಮೂಲಕ ಬಹಿರಂಗ ಪಡಿಸಿದ ಲೇಖಕರ ಮೇಲೆ ಹಲ್ಲೆಗಳು ನಡೆದಿವೆ. ಇಂತಹ ಸಂದರ್ಭಗಳಲ್ಲಿ ನ್ಯಾಯಾಂಗದ ತೀರ್ಪುಗಳು ಸಹ ಲೇಖಕರ ಪರವಾಗಿರುವುದಿಲ್ಲ ಎಂದು ದಿನೇಶ್ ಅಮೀನ್‌ಮಟ್ಟು ವಿಷಾದ ವ್ಯಕ್ತಪಡಿಸಿದರು.
ಸಂವಿಧಾನದ ಕಲಂ 19/1 ಅಭಿ ವ್ಯಕ್ತಿ ಸ್ವಾತಂತ್ರದ ರಕ್ಷಣೆಯನ್ನು ಎತ್ತಿ ಹಿಡಿಯುವಂತಿದೆ. ಈ ಕಲಂ ಆಧಾರ ದಲ್ಲಿ ಅಭಿವ್ಯಕ್ತಿ ಸ್ವಾತಂತ್ರವನ್ನು ಕಾರ್ಯ ರೂಪಕ್ಕೆ ತರಲು ಆಗುವುದಿಲ್ಲ. ಕಲಂ 19/2 ಅಭಿವ್ಯಕ್ತಿ ಸ್ವಾತಂತ್ರವನ್ನು ಹೇಗೆ ನಿಯಂತ್ರಿಸಬೇಕೆಂಬುದರ ಕುರಿತು ಬರೆಯ ಲಾಗಿದ್ದು, ಪ್ರಜಾಸತ್ತಾತ್ಮಕ ನೆಲೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರವನ್ನು ವ್ಯಕ್ತಪಡಿಸುವುದಕ್ಕೆ ಸಂವಿಧಾನದಲ್ಲೂ ತೊಡಕಿದೆ. ಹೀಗಾಗಿ ಅಭಿವೃಕ್ತಿ ಸ್ವಾತಂತ್ರದ ಕುರಿತು ಪುನರ್ ಪರಿಶೀಲನೆ ನಡೆಸಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು.
ಬುದ್ಧ, ಬಸವಣ್ಣ, ಅಂಬೇಡ್ಕರ್ ಹಾಗೂ ಪೆರಿಯಾರ್ ಸೇರಿದಂತೆ ಅನೇಕ ಮಾನವ ತಾವಾದಿಗಳು ಮನು ವಾದಿಗಳ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಇದರ ಪರಿಣಾಮವಾಗಿಯೇ ದೇಶದ ಸಾಮಾಜಿಕ ಪರಿಸ್ಥಿತಿ ಸಾಕಷ್ಟು ಬದಲಾವಣೆ ಕಂಡಿದೆ. ಇಂದಿನ ಯುವಪೀಳಿಗೆ ಮಾನವತಾವಾದಿಗಳ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ದೇಶದಲ್ಲಿ ಕೋಮು ಸಾಮರಸ್ಯವನ್ನು ಬಿತ್ತಬೇಕೆಂದು ಅವರು ತಿಳಿಸಿದರು.
ಲೇಖಕ, ಉಪನ್ಯಾಸಕ ಡಾ.ಡಿ. ಡಾಮಿನಿಕ್ ಮಾತನಾಡಿ, ಕೋಮುವಾದಿ ಗಳು ಹುಸಿ ಭಯೋತ್ಪಾದನೆಯನ್ನು ಮುನ್ನೆಲೆಗೆ ತರುವ ಮೂಲಕ ದೇಶದ ಬಹುಸಂಸ್ಕೃತಿಯನ್ನು ನಾಶ ಮಾಡಲು ಹೊರಟಿದ್ದಾರೆ. ಸಂಘಪರಿವಾರದ ಈ ಕುತಂತ್ರದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಮೂಲಕ ಕೋಮು ಸೌಹಾರ್ದಕ್ಕೆ ಯಾವುದೇ ಅಪಾಯ ಬರ ದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ಹಿರಿಯ ಪತ್ರಕರ್ತ ಜಯಕುಮಾರ್ ಮಾತನಾಡಿ, ಲೇಖಕ ಯೋಗೇಶ್ ಮಾಸ್ಟರ್‌ರವರ ಬಹುತೇಕ ಕೃತಿಗಳು ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಕುರಿತಾಗಿದೆ. ಮಕ್ಕಳಿಗೆ ಸಂಬಂಧಿಸಿದ ಕೃತಿಗಳನ್ನು ಪೋಷಕರು ಗಂಭೀರವಾಗಿ ಅಧ್ಯಯನ ಮಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲೇಖಕ ಯೋಗೇಶ್ ಮಾಸ್ಟರ್, ನಿವೃತ್ತ ವೈದ್ಯ ಡಾ.ಸಿ.ಎಸ್.ಹನುಮಂತಪ್ಪ, ಕ್ರಿಸ್ಪ್ ಸಂಸ್ಥೆಯ ಮುಖ್ಯಸ್ಥ ಕುಮಾರ್ ಜಹಗೀರ್‌ದಾರ್ ಮತ್ತಿತರರು ಉಪಸ್ಥಿತರಿದ್ದರು.
ಅರಬ್ ರಾಷ್ಟ್ರಗಳಲ್ಲಿರುವ ಪೆಟ್ರೋಲಿಯಂ ಕಂಪೆನಿಗಳನ್ನು ತಮ್ಮ ಕೈವಶ ಮಾಡಿಕೊಳ್ಳುವ ನೆಪದಲ್ಲಿ ಆಮೆರಿಕ ಸೇರಿದಂತೆ ಬೆಂಬ ಲಿತ ರಾಷ್ಟ್ರಗಳು ಜಗತ್ತಿನಾದ್ಯಂತ ಹುಸಿ ಭಯೋತ್ಪಾದನೆಯನ್ನು ಬಿತ್ತುತ್ತಿವೆ. ಭಾರತ ದಲ್ಲೂ ಭಯೋತ್ಪಾದನೆಯ ಹೆಸರಿನಲ್ಲಿ ಅಮಾಯಕ ಮುಸ್ಲಿಮ್ ಸಮುದಾಯದ ಯುವಕರನ್ನು ಬಂಧಿಸಲಾಗುತ್ತಿದೆ.
-ಡಾ.ಡಿ.ಡಾಮಿನಿಕ್, ಲೇಖಕ, ಉಪನ್ಯಾಸಕ
ಆಂಧ್ರಪ್ರದೇಶದ ಕೇಂದ್ರೀಯ ವಿವಿಯಲ್ಲಿ ಸಾವನ್ನಪ್ಪಿರುವ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಸಾವು ಆತ್ಮಹತ್ಯೆಯಲ್ಲ, ಈ ವ್ಯವಸ್ಥೆಯ ವಿರುದ್ಧ ಬಂಡೆದ್ದವನ ಬಲಿ ದಾನವಾಗಿದೆ. ಆ ಮೂಲಕ ಕೋಮು ವಾದಿಗಳ ವಿರುದ್ಧ ಹೋರಾಟಕ್ಕೆ ಅವರು ಮತ್ತೊಂದು ಸ್ವರೂಪ ಕೊಟ್ಟಿದ್ದಾರೆ.
-ಯೋಗೇಶ್ ಮಾಸ್ಟರ್, ಲೇಖಕ