ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆಯಡಿ ‘ಲೋಕಾಯುಕ್ತ ಕಾಯ್ದೆ’ ಸೇರಿಸಬೇಡಿ: ನ್ಯಾ.ವೆಂಕಟಾಚಲ
ಬೆಂಗಳೂರು, ಜ.24: ಲೋಕಾಯುಕ್ತ ಕಾಯ್ದೆಯನ್ನು ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆಯಡಿ ಸೇರಿಸಿರುವುದು ಸರಿಯಲ್ಲ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಎನ್.ವೆಂಕಟಾಚಲ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರವಿವಾರ ನಗರದ ಪಿಇಎಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ವಿಶ್ವ ಮಾನವ ಸಂಸ್ಥೆ ಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ವಿಶ್ವ ಮಾನವ ಪ್ರಶಸ್ತಿ’ಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 5 ಜಿಲ್ಲೆಗಳಿಗೆ ಒಬ್ಬರಂತೆ ಉಪ ಲೋಕಾಯುಕ್ತರನ್ನು ನೇಮಿಸಬೇಕು. ಅವರು ಜಿಲ್ಲಾ ಮತ್ತು ತಾಲೂಕಿನ ಸರಕಾರಿ ಕಚೇರಿಗಳಿಗೆ ಭೇಟಿ ನೀಡಿ ಆಡಳಿತವನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಮತ್ತು ಸರಕಾರಕ್ಕೆ ನೆರವಾಗುವ ರೀತಿಯಲ್ಲಿ ಕೆಲಸ ಮಾಡಬೇಕೆಂದು ಹೇಳಿದರು. ನಾನು ಕೆಲವರ ಒತ್ತಾಯದಿಂದ ಲೋಕಾ ಯುಕ್ತ ಹುದ್ದೆಯನ್ನು ಅಲಂಕರಿಸಿದೆ. ಆದರೆ ಯಾವುದೇ ಅಧಿಕಾರಿಗಳಿಗೆ ತೊಂದರೆ ಮಾಡದೆ, ಉತ್ತಮ ಕೆಲಸ ನಿರ್ವಹಿಸು ವಂತೆ ಪ್ರೋತ್ಸಾಹಿಸುತ್ತಾ ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ. ಅಲ್ಲದೆ, ಜನರ ಸೇವೆ ಮಾಡಬೇಕಾದ ಲೋಕಾಯುಕ್ತ ಅಧಿಕಾರಿ ಗಳಿಂದು ಲಂಚ ಪಡೆಯುತ್ತಿರುವುದು ನಾಚಿಕೆ ಗೇಡಿನ ಸಂಗತಿಯಾಗಿದ್ದು, ಇದರಿಂದ ಯಾರೋ ಕೆಲವರು ಮಾಡುವಂತಹ ಕೆಲಸದಿಂದ ಇಡೀ ಲೋಕಾಯುಕ್ತ ಸಂಸ್ಥೆಗೆ ರಾಜ್ಯದಲ್ಲಿ ಕೆಟ್ಟ ಹೆಸರು ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಿ.ಇ.ಎಸ್ ವಿದ್ಯಾಲಯ ಸಂಸ್ಥಾಪಕ ಎಂ.ಆರ್.ದೊರೆಸ್ವಾಮಿ ಮಾತನಾಡಿ, ಲೋಕಾಯುಕ್ತ ಹುದ್ದೆಗೆ ಸಮರ್ಥ ಅಭ್ಯರ್ಥಿ ಗಳಿದ್ದರೂ ನೇಮಕ ಪ್ರಕ್ರಿಯೆಯಲ್ಲಿ ವಿಳಂಬ ಆಗುತ್ತಿರುವುದು ಸರಿಯಲ್ಲ. ಕೂಡಲೇ ಆ ಹುದ್ದೆಯನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ ಎಂದು ತಿಳಿಸಿದರು. ನಿವೃತ್ತ ನ್ಯಾಯಾಧೀಶ ಚಂದ್ರಶೇಖರಯ್ಯ ಮಾತನಾಡಿ, ಆಂಧ್ರ ಮೂಲದ ನ್ಯಾಯಾ ಧೀಶರೊಬ್ಬರಿಂದ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದ ಲೋಕಾಯುಕ್ತವನ್ನು ಹಾಳು ಮಾಡಿದರು. ಇದನ್ನು ಸರಿಪಡಿಸಲು ಕಾಲಾವಕಾಶ ಬೇಕಾಗುತ್ತೆ ಎಂದು ತಿಳಿಸಿದರು.
ನಿದ್ರಾವಸ್ಥೆಯಲ್ಲಿದ್ದ ಲೋಕಾಯುಕ್ತವನ್ನು ನಿದ್ರಾಭಂಗ ಮಾಡಿ ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾಡಿ ಭ್ರಷ್ಟಾಚಾರವನ್ನು ತೊಲಗಿಸಿದ ವೆಂಕಟಾಚಲಯ್ಯರವರಿಗೆ ವಿಶ್ವ ಮಾನವ ಪ್ರಶಸ್ತಿಯನ್ನು ನೀಡುತ್ತಿರುವುದು ಅಭಿನಂದನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಎಚ್.ಎಸ್. ಮಂಜುನಾಥ್, ಒಕ್ಕಲಿಗರ ಸಂಘದ ಅಧ್ಯಕ್ಷ ಅಪ್ಪಾಜಿಗೌಡ, ಬಿಬಿಎಂಪಿ ಸದಸ್ಯ ಡಿ.ಎನ್.ರಮೇಶ್, ನಿವೃತ್ತ ನ್ಯಾ. ಎ.ಜೆ. ಸದಾಶಿವ, ವಕೀಲರ ಸಂಘದ ಅಧ್ಯಕ್ಷ ಎಚ್.ಸಿ ಶಿವರಾಮ್, ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಕೆ.ವಿ.ಆರ್ ಠ್ಯಾಗೂರ್ ಉಪಸ್ಥಿತರಿದ್ದರು.