ಗಣರಾಜ್ಯೋತ್ಸವ ಸಮಾರಂಭಕ್ಕೆ ಸಕಲ ಸಿದ್ಧತೆ: ಕುಮಾರ್ ನಾಯಕ್
ಬೆಂಗಳೂರು, ಜ. 24: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಜ.26ರ ಸಮಾರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಗಣ್ಯರು ಸೇರಿದಂತೆ 11ಸಾವಿರ ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಆಕರ್ಷಕ ಕವಾಯತು ಹಾಗೂ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ ಎಂದು ಬಿಬಿಎಂಪಿ ಆಯುಕ್ತ ಜಿ.ಕುಮಾರ ನಾಯಕ್ ತಿಳಿಸಿದ್ದಾರೆ.
ರವಿವಾರ ಇಲ್ಲಿನ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೇದಿಕೆಗೆ ಆಲಂಕಾರಿಕ ಬ್ರಾಸ್ ಪರಿಕರಗಳನ್ನು ಅಳವಡಿಸಲಾಗಿದ್ದು, ಧ್ವಜಾರೋಹಣಕ್ಕೆ ಧ್ವಜಸ್ತಂಭ ನಿರ್ಮಿಸಲಾಗಿದೆ ಎಂದರು.
ಈಗಾಗಲೇ ಶಾಮಿಯಾನ, ವೇದಿಕೆ ನಿರ್ಮಾಣ, ಆಸನಗಳ ವ್ಯವಸ್ಥೆ, ಬ್ಯಾರಿಕೇಡ್ ಅಳವಡಿಸಲಾಗಿದೆ. ಭಾರತೀಯ ರಕ್ಷಣಾ ಸೇನೆಯ ಮೂವರು ಹಿರಿಯ ಅಧಿಕಾರಿಗಳನ್ನು ಜ.26ರ ಬೆಳಗ್ಗೆ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಪರಿಚಯಿಸಲಾಗುತ್ತದೆ.
ರಾಜ್ಯಪಾಲರು ನೆರವೇರಿಸುವ ಧ್ವಜಾರೋಹಣ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಹೆಲೆಕಾಪ್ಟರ್‌ನಿಂದ ಪುಷ್ಪವೃಷ್ಟಿ ಮಾಡಲಾಗುವುದು. ಧ್ವಜಾರೋಹಣದ ಬಳಿಕ ರಾಜ್ಯಪಾಲರು ಪರೇಡ್ ವೀಕ್ಷಿಸಿ ಗೌರವ ರಕ್ಷೆ ಸ್ವೀಕರಿಸಿದ ನಂತರ ನಾಡಿನ ಜನತೆಗೆ ಗಣರಾಜ್ಯೋತ್ಸವದ ಸಂದೇಶ ನೀಡಲಿದ್ದಾರೆ ಎಂದು ಅವರು ಹೇಳಿದರು.
ನಗರದ ಜವಾಹರ್ ನವೋದಯ ಶಾಲಾ ಮಕ್ಕಳು ರಾಷ್ಟ್ರಗೀತೆ ಹಾಡಲಿದ್ದು, ಮೂರು ದಿನಗಳಿಂದ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪೂರ್ವಭಾವಿ ತಾಲೀಮು ನಿರಂತರವಾಗಿ ನಡೆಸಲಾಗುತ್ತಿದೆ. ಪಥ ಸಂಚಲನದಲ್ಲಿ ಪೊಲೀಸ್, ಸ್ಕೌಡ್- ಗೈಡ್ಸ್, ಎನ್‌ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಯ ಮಕ್ಕಳನ್ನೊಳಗೊಂಡ ಸಂಚಲನದಲ್ಲಿ ಒಟ್ಟು 61 ತುಕಡಿಗಳು ಪಾಲ್ಗೊಳ್ಳಲಿವೆ ಎಂದು ಅವರು ಮಾಹಿತಿ ನೀಡಿದರು.
ಪಥ ಸಂಚಲನದಲ್ಲಿ ಒಟ್ಟು 2,100 ಮಂದಿ ಪಾಲ್ಗೊಳ್ಳಲಿದ್ದು, 2,550 ಮಕ್ಕಳು ನಾಲ್ಕು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ಬಳಿಕ ರಾಜ್ಯಪಾಲರು ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಲಿದ್ದು, ಇದೇ ವೇಳೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಹೇಳಿದರು.
ನಾಡಗೀತೆ, ರೈತಗೀತೆ, ವಿವಿಧತೆಯಲ್ಲಿ ಏಕತೆ, ಪುಣ್ಯವಂತರು ನಾವು ಭಾರತೀಯರು, ಜೈ ಜವಾನ್‌ಜೈ ಕಿಸಾನ್, ಕ್ರಾಂತಿಸೂರ್ಯ ಅಂಬೇಡ್ಕರ್, ಸೇನೆಯಿಂದ ದ್ವಿಚಕ್ರ ವಾಹನ ಸಾಹಸ ಪ್ರದರ್ಶನ ನಡೆಯಲಿದೆ ಎಂದು ಕುಮಾರ ನಾಯಕ್ ತಿಳಿಸಿದರು.
ಅತಿ ಗಣ್ಯ ವ್ಯಕ್ತಿಗಳಿಗೆ 2 ಸಾವಿರ, ಹಿರಿಯ ಸ್ವಾತಂತ್ರ ಹೋರಾಟಗಾರರು, ರಕ್ಷಣಾ ಇಲಾಖೆ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು, ಬಿಎಸ್‌ಎಫ್ ಅಧಿಕಾರಿಗಳಿಗೆ ಒಟ್ಟು 5 ಸಾವಿರ ಹಾಗೂ ಸಾರ್ವಜನಿಕರಿಗೆ 4 ಸಾವಿರ ಸೇರಿದಂತೆ ಒಟ್ಟು 11 ಸಾವಿರ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಯಾವುದೇ ಆಕಸ್ಮಿಕ ವಿಪತ್ತು ಸಂಭವಿಸಿದಲ್ಲಿ ತಕ್ಷಣವೇ ಸ್ಪಂದಿಸಲು ಅಗತ್ಯವಿರುವಷ್ಟು ಆ್ಯಂಬುಲೆನ್ಸ್‌ಗಳು, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿ ಹಾಗೂ ಬೆಂಕಿ ಅವಘಡ ನಿಭಾಯಿಸಲು ಅಗ್ನಿ ಶಾಮಕ ವಾಹನಗಳನ್ನು ಸ್ಥಳದಲ್ಲೆ ನಿಯೋಜಿ ಸಲಾಗಿದೆ ಎಂದು ನಾಯಕ್ ಇದೇ ವೇಳೆ ವಿವರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ವಿ.ಶಂಕರ್, ಹಿರಿಯ ಅಧಿಕಾರಿಗಳು ಹಾಜರಿದ್ದರು.