ನಾವು ನಂಬಿದ ಸತ್ಯಗಳು

Update: 2016-01-25 10:36 GMT

ಒಂದಿಪ್ಪತ್ತೈದು ವರ್ಷಗಳ ಹಿಂದೆ ನನ್ನ ತಂದೆಯ ಕುಟುಂಬದಲ್ಲಿ ಅಷ್ಟಮಂಗಲ ಪ್ರಶ್ನೆ ಇಟ್ಟಿದ್ದರು. ಅಲ್ಲಿ ದೈವಾರಾಧನೆಯ ಬಗ್ಗೆ ನಮ್ಮ ಕುಟುಂಬದ ಬಂಧುಗಳಲ್ಲಿ ಒಂದು ಸಣ್ಣ ಮನಸ್ತಾಪ ಉಂಟಾಗಿ ಆ ಬಂಧುಗಳು ಪ್ರಶ್ನೆಯ ಕಳದಿಂದಲೇ ಹೊರಟುಹೋದ ಘಟನೆ ನಡೆಯಿತು. ನನ್ನ ಅಪ್ಪನ ಕುಟುಂಬದಲ್ಲಿ ಆರಾಧಿಸುತ್ತಿದ್ದ ಪ್ರಧಾನ ದೈವಗಳಲ್ಲಿ ಆಲಿ ಭೂತವೂ ಒಂದು. ಅದರ ಆರಾಧನೆಯನ್ನು ನಡೆಸಲು ಕುಟುಂಬದವರಿಗೆ ಬಿಟ್ಟುಕೊಡಬೇಕೆಂದೂ, ಹಾಗೆ ಆರಾಧಿಸದಿದ್ದರೆ ಕುಟುಂಬಕ್ಕೆ ಕೇಡುಂಟಾಗುವುದೆಂದೂ ಪ್ರಶ್ನೆಯ ಕಳದಲ್ಲಿ ಹೇಳಲಾಯಿತು. ಆದರೆ ಆ ದೈವವಿರುವುದು ನಮ್ಮ ತಂದೆಯ ಕುಟುಂಬದ ಹಿರಿಯರಿರುವ ತುಂಬೆಯ ದರ್ಕಾಸಿನ ಮನೆಯಲ್ಲಿ. ಅಲ್ಲಿ ನನ್ನ ದರ್ಗಾಸಜ್ಜನ ಮಗನ ಸಂಸಾರ ವಾಸ ಮಾಡುತ್ತಿದೆ. ಅವರು ಈ ಆರಾಧನೆಯನ್ನು ಕುಟುಂಬದ ವಶಕ್ಕೆ ನೀಡಲು ಒಪ್ಪದೇ ಪ್ರಶ್ನೆಯ ಕಳದಿಂದಲೇ ಹೊರ ನಡೆದಿದ್ದರು.

ನಮ್ಮ ತಂದೆಯ ಕುಟುಂಬಕ್ಕೆ ಆಲಿಭೂತ ಆರಾಧನೆ ಹೇಗೆ ಬಂತೋ ಗೊತ್ತಿಲ್ಲ. ಬೇರೆ ಕುಟುಂಬಗಳಲ್ಲೂ ಈ ಆರಾಧನೆ ಇರುವುದನ್ನು ನಾನು ಕಂಡಿದ್ದೇನೆ. ಈ ದೈವಗಳು ನಮ್ಮನ್ನು ಸದಾ ರಕ್ಷಿಸುತ್ತವೆ ಎಂಬ ನಂಬಿಕೆ ಇದ್ದುದರಿಂದಲೇ ಆ ಸಂಪ್ರದಾಯವನ್ನು ಇಂದೂ ಪಾಲಿಸುತ್ತಾ ಬಂದಿದ್ದಾರೆ. ಎಷ್ಟೋ ವರ್ಷಗಳಿಂದ ನಂಬಿಕೊಂಡು ಬಂದ ಸತ್ಯವನ್ನು ಮನೆಯಿಂದಾಚೆ ಕಳುಹಿಸಿಕೊಡಲು ಒಪ್ಪದ ಆ ದರ್ಗಾಸಜ್ಜನ ಮೊಮ್ಮಕ್ಕಳ ಭಾವನೆಗಳಿಗೆ ನಾವು ಮಣಿಯಲೇಬೇಕು. ಅದನ್ನು ನಾವು ಆರಾಧಿಸುತ್ತೇವೆ, ಅದು ನಮ್ಮ ದೈವವೆಂದು ಬೇಡಿಕೆ ಸಲ್ಲಿಸಿದ ನನ್ನ ತಂದೆಯ ಕುಟುಂಬಿಕರ ನಂಬಿಕೆಯನ್ನು ಗೌರವಿಸಬೇಕು. ಇಲ್ಲಿ ಮುಖ್ಯವಾಗುವುದು ತಳ ಸಮುದಾಯದಲ್ಲಿ ಬೇರೂರಿದ ನಿರ್ವ್ಯಾಜ ಭಕ್ತಿ. ಆ ಭಕ್ತಿಯಲ್ಲಿ ಕಲ್ಮಶವಿಲ್ಲ. ಸತ್ಯವೆಂದರೆ ಸತ್ಯ ಅಷ್ಟೆ. ಆಲಿ ಭೂತ ಯಾರು? ಏನು? ಹೇಗೆ ಎಂಬ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ.

2009 ರಲ್ಲಿ ನಾನು ಮಾಸ್ತಿ ಅಧ್ಯಯನಕ್ಕಾಗಿ ಸುತ್ತಾಡುತ್ತಾ ಮಂಜೇಶ್ವರ ಕಡಪ್ಪರ ಎಂಬಲ್ಲಿಗೆ ಹೋಗಿದ್ದೆ. ಅಲ್ಲಿಯ ಬಬ್ಬರ್ಯ ಸಮಾಜದ ಪ್ರೀತಿಪಾತ್ರ ದೈವ. ನದೀ ತೀರದ ವಾಸಿಗಳಿಗೆ, ಬೆಸ್ತರಿಗೆ ಸುಖ ನೆಮ್ಮದಿಗಳನ್ನು ನೀಡುವ ದೈವವೆಂದು ನಂಬಿಕೆ. ನಾನಲ್ಲಿಗೆ ಭೇಟಿ ನೀಡುವ ನಾಲ್ಕು ವರ್ಷಗಳ ಹಿಂದೆ ಅಲ್ಲಿನ ನಾಗರಿಕರಲ್ಲಿ ಕ್ಷುಲ್ಲಕ ವಿಷಯಗಳ ಮನಸ್ತಾಪವಾಗಿ ಬಬ್ಬರ್ಯನ ಆರಾಧನೆಯೇ ನಿಂತುಬಿಟ್ಟಿತ್ತಂತೆ. ತಮ್ಮ ರಕ್ಷಕ ದೈವವನ್ನು ಹೀಗೆ ಕಡೆಗಣಿಸಿದ್ದರಿಂದ ಊರಲ್ಲಿ ಅನೇಕ ವಿಪತ್ತುಗಳುಂಟಾಯಿತೆಂದೂ, ಅದಕ್ಕೆ ಪರಿಹಾರವಾಗಿ ಬಬ್ಬರ್ಯನನ್ನು ಆರಾಧಿಸಬೇಕೆಂದೂ ಹಿರಿಯರು ಸೂಚಿಸಿದ್ದರಂತೆ. ಆದುದರಿಂದ ಊರವರೆಲ್ಲರೂ ತಮ್ಮ ವೈಮನಸ್ಸು, ಭೇದಭಾವ ಮರೆತು ಒಂದಾದರು. ಆ ವರ್ಷ ವಿಜೃಂಭಣೆಯಿಂದ ಬಬ್ಬರ್ಯನ ಆರಾಧನೆ ನಡೆಯಿತು.

ಈ ದೈವದ ರಕ್ಷಣೆಯಲ್ಲಿರುವವರು ಮುಸಲ್ಮಾನರು, ಹಿಂದುಗಳು, ಕ್ರೈಸ್ತರು ಎಲ್ಲರೂ ಎಂಬುದು ಗಮನಾರ್ಹ! ಬಬ್ಬರ್ಯ ಯಾರು? ಏನು? ಎಂದು ಯಾರೂ ಪ್ರಶ್ನಿಸುವುದಿಲ್ಲ. ಆಲಿಭೂತವನ್ನು ನಾನು ಬಿಡಲಾರೆ ಎಂದ ನನ್ನ ದರ್ಗಾಸಜ್ಜನ ಮನೆಯವರೂ, ಬಬ್ಬರ್ಯನನ್ನು ನಾವು ಮರೆತರೆ ನಮಗೆ ಕೇಡುಂಟಾಗುತ್ತದೆಂದು ನಂಬಿದ ಕಡಪ್ಪರದ ನಾಗರಿಕರೂ ನಿಜವಾದ ಭಕ್ತರು ಅನಿಸುವುದಿಲ್ಲವೇ? ಅವರ ಭಕ್ತಿಯ ಆಳ ಅಗಲಗಳನ್ನು ಕೆದಕುವ ಗೋಜಿಗೆ ಯಾರೂ ಹೋಗುವುದಿಲ್ಲ. ನಮ್ಮ ದಿನನಿತ್ಯದ ಬದುಕು ಮತ್ತು ಸುತ್ತಲ ಬದುಕು ನೆಮ್ಮದಿಯಿಂದಿರಲಿ ಎಂಬುದೇ ಅವರ ಆಶಯವಾಗಿದೆ.

ಈ ನಂಬಿಕೆಯ ಕೋಟೆಗಳನ್ನು ಒಡೆದರೆ ಅಲ್ಲಿನ ಮನಸುಗಳನ್ನು ಒಡೆದಂತೆ. ‘ಯಾರು ನೋಡಿಲ್ಲವೋ, ಆದರೂ ನಂಬುತ್ತಾರೋ ಅವರು ಧನ್ಯರು’ ಎಂಬ ಮಾತಿದೆ. ಈ ಕಾಣದ ದೇವರೆಂಬ ಸತ್ಯವನ್ನು ಕಂಡು ಧನ್ಯರಾದ ತಳವರ್ಗದ ಜನರಲ್ಲಿ ವೈಚಾರಿಕತೆ ಇಲ್ಲವೆಂದಾಗಲೀ, ದಡ್ಡರೆಂದಾಗಲೀ ಪರಿಧಿಯಾಚೆ ತಳ್ಳುವವರು ಹೃದಯಹೀನರು. ಮನುಷ್ಯರನ್ನು ಒಂದಾಗಿ ಬೆಸೆಯುವ ಈ ಸತ್ಯಗಳು ಮನುಷ್ಯರನ್ನು ಮನುಷ್ಯರೆಂದೇ ಪ್ರೀತಿಸಲು ಕಲಿಸುತ್ತದೆ. ಅದನ್ನು ಕಲಿಸದ ದೈವವಾಗಲೀ, ದೇವರಾಗಲೀ ನಮ್ಮ ಹೃದಯದ ಗರ್ಭಗುಡಿಯಲ್ಲಿ ಪ್ರವೇಶ ಪಡೆಯಬೇಕೇ? ತುಳುನಾಡಿನ ಸಂಸ್ಕೃತಿಯಲ್ಲಿ ಬೆಳೆದ ಸಣ್ಣ ಮಗುವೂ ಕೂಡಾ ನಾವು ನಂಬಿದ ಸತ್ಯಗಳ ಬಗ್ಗೆ ಗೌರವಾದರಗಳನ್ನು ಬೆಳೆಸಿಕೊಂಡಿತ್ತು. ಇತ್ತೀಚಿನ ವರ್ಷಗಳಲ್ಲಿ ತುಳುವರು ಮತಾಂತರಗೊಂಡರೇ? ಸತ್ಯಗಳನ್ನು ಮರೆತರೇ? ಇಂತಹ ಅನುಮಾನಗಳು ಮೂಡುತ್ತಿವೆ.

ಪ್ರತೀ ವರ್ಷ ಆಟಿ ತಿಂಗಳಲ್ಲಿ  ಆಟಿ ಕಳೆಂಜ ಮನೆ ಮನೆಗಳಿಗೆ ಬಂದು ಮನೆಯೊಳಗಿದ್ದ ಮನುಷ್ಯರನ್ನು, ಹಟ್ಟಿಯೊಳಗಿದ್ದ ಹಸುಗಳನ್ನು, ನಾಯಿ, ಬೆಕ್ಕುಗಳನ್ನು ತೋಟದಲ್ಲಿದ್ದ ವೃಕ್ಷಗಳನ್ನು ಹರಸಿ ಶುಭವನ್ನು ಹಾರೈಸಿ ಕೆಡುಕುಗಳನ್ನು ಗಡಿಯಾಚೆ ಹಾರಿಸಿಬಿಡುವುದೇ ಅವನ ಭೇಟಿಯ ಉದ್ದೇಶ. ಎಲ್ಲ ರೋಗಗಳನ್ನು ವಾಸಿ ಮಾಡುವ ಮಾಂತ್ರಿಕ ಶಕ್ತಿ ಆತನಿಗೆ ಇದೆ ಎಂದೇ ನಂಬಿರುವವರು ಈ ಮಣ್ಣಿನ ಮಕ್ಕಳು. ಈ ಆಟಿಕಳೆಂಜ ಯಾರು? ಹೇಗೆ ಬಂದ? ಎಂಬ ಬಗ್ಗೆ ಕತೆಗಳಿವೆ. ಒಂದು ಐತಿಹ್ಯದಂತೆ ಆತ ಆಲಿ ಮತ್ತು ಫಾತಿಮಾರ ಮಗ ಎಂಬ ಕತೆಯೂ ಇದೆ.

ಈ ಮಣ್ಣಿನಲ್ಲಿ ಎಲ್ಲ ಮತದವರು ಹೇಗೆ ಸಹಬಾಳ್ವೆ ನಡೆಸಿದರು ಎಂಬುದಕ್ಕೆ ಈ ಕತೆಗಳು ಸಾಕ್ಷಿಯಾಗಿವೆ. ಇಂತಹ ಸಾಮರಸ್ಯಕ್ಕೆ ಹುಳಿ ಹಿಂಡುವ ಪ್ರಯತ್ನಗಳು ನಡೆದಾಗಲೆಲ್ಲ ನಾವು ನಂಬಿದ ಸತ್ಯಗಳ ನೆನಪಾಗುತ್ತದೆ. ಎತ್ತರಕ್ಕೆ ಏರಿದ, ಆಳಕ್ಕೆ ಇಳಿದ ನಾವು ಹೆಗಲಿಗೆ ಹೆಗಲು ಕೊಟ್ಟು ದುಡಿಯುವುದನ್ನು ಕೈ ಕೈ ಹಿಡಿದು ನಡೆಯವುದನ್ನು ಹೇಗೆ ಮರೆತುಬಿಟ್ಟೆವು ಎಂಬುದೇ ವಿಸ್ಮಯ. ಮನುಷ್ಯನ ಮನಸುಗಳಲ್ಲಿದ್ದ ಮಾನವೀಯತೆ, ಹೃದಯಗಳಲ್ಲಿದ್ದ ಪ್ರೀತಿಯ ಆರ್ದ್ರತೆಗಳು ಪೂರ್ಣ ಮಾಯವಾಗುವ ಮೊದಲು ನಾವು ನಂಬಿದ ಸತ್ಯಗಳನ್ನು ಸ್ಮರಿಸಿಕೊಳ್ಳಬೇಕು. ಆಗ ಮಾತ್ರ ಸಮಾಜವು ಛಿದ್ರ ಛಿದ್ರವಾಗುವ ದುರಂತಗಳಿಂದ ಪಾರಾಗಬಹುದು.

Writer - ಬಿ ಎಂ ರೋಹಿಣಿ

contributor

Editor - ಬಿ ಎಂ ರೋಹಿಣಿ

contributor