ಸಹಬಾಳ್ವೆ ಸಾಗರ ಕಾರ್ಯಕ್ರಮದ ಪೋಸ್ಟರ್ ಮತ್ತು ಆಹ್ವಾನಪತ್ರಿಕೆ ಬಿಡುಗಡೆ
ಮಂಗಳೂರು,ಜ.25: ಕರ್ನಾಟಕ ಕೋಮುಸೌಹಾರ್ದ ವೇದಿಕೆಯಿಂದ ಜ.30 ರಂದು ನಗರದ ಪುರಭವನದಲ್ಲಿ ನಡೆಯಲಿರುವ ಸಹಬಾಳ್ವೆ ಸಾಗರ ಕಾರ್ಯಕ್ರಮದ ಪೋಸ್ಟರ್ ಮತ್ತು ಆಹ್ವಾನಪತ್ರಿಕೆಯನ್ನು ದ.ಕ ಜಿಲ್ಲಾಕಾರಿ ಕಚೇರಿ ಮುಂಭಾಗದಲ್ಲಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದ ಪೋಸ್ಟರನ್ನು ಸಾಹಿತಿ ಚಂದ್ರಕಲಾ ನಂದಾವರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಹುಭಾಷೆ , ಬಹುಸಂಸ್ಕೃತಿಯಿಂದ ಶ್ರೇಷ್ಠತೆ ಮೆರೆದುಕೊಂಡಿದ್ದ ನಮ್ಮ ದೇಶದಲ್ಲಿ ಬಹುಸಂಸ್ಕೃತಿ ಮರೆತು ಜಾತಿ,ಧರ್ಮಗಳ ನಡುವೆ ಅಶಾಂತಿ ಸೃಷ್ಟಿಯಾಗಿ ಅಮಾನುಷ, ಅಮಾನವೀಯತೆಯ ಘಟನೆಗಳು ನಡೆಯುತ್ತಿದೆ. ಇಲ್ಲಿನ ನಾಗರಿಕರು ತಮ್ಮ ಮನೆಯೊಳಗೂ ಸುರಕ್ಷಿತರಲ್ಲ ಎಂಬ ಭಾವನೆ ಬರುವಂತಹ ವಾತವರಣ ಸೃಷ್ಟಿಯಾಗಿದೆ. ಇಂತಹ ವಾತವರಣ ಬದಲಾಗಿ ಸಹಬಾಳ್ವೆಯ ವಾತವರಣ ಮೂಡಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಸ್ವಾಗತ ಸಮಿತಿಯ ಉಪಾಧ್ಯಕ್ಷೆ ಸಾಜಿದಾ ಮೂಮಿನ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾ ಅಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲು, ಜಿಲ್ಲಾ ಕಾರ್ಯದರ್ಶಿ ಇಸ್ಮತ್ ಪಜೀರ್ , ಸ್ವಾಗತ ಸಮಿತಿಯ ಪ್ರ.ಕಾರ್ಯದರ್ಶಿ ಉಮರ್ ಯು.ಹೆಚ್, ಸಂಘಟನಾ ಕಾರ್ಯದರ್ಶಿಗಳಾದ ಗುಲಾಬಿ ಬಿಳಿಮಲೆ, ಶಬ್ಬೀರ್ ಅಹ್ಮದ್, ಗೌರವ ಸದಸ್ಯರುಗಳಾದ ಕಾಲಿನ್ ಡಿಸಿಲ್ವಾ, ಪ್ರೊ.ಭೂಮಿಗೌಡ, ಇಕ್ಬಾಲ್,ರೆಹಮತ್ ಮನ್ಸೂರ್, ಕಬೀರ್, ವಿಠಲ ಭಂಡಾರಿ ಹರೇಕಳ, ಲಿಡಿಯ ಡಿಕುನ್ಹ, ಪ್ರವೀಣ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.