ಮಂಗಳೂರು : ಕರಾವಳಿ ಉತ್ಸವ - ಜನಾಕರ್ಷಣೆಯ ಫಲಪುಷ್ಪ ಪ್ರದರ್ಶನ
ಮಂಗಳೂರು,ಜ.25: ದ.ಕ ಜಿಲ್ಲಾಡಳಿತದ ವತಿಯಿಂದ ನಡೆಯುತ್ತಿರುವ ಕರಾವಳಿ ಉತ್ಸವದ ಅಂಗವಾಗಿ ಕದ್ರಿ ಪಾರ್ಕ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ಜನಾಕರ್ಷಣೆಗೆ ಪಾತ್ರವಾಗಿದೆ. ಜ.23 ರಿಂದ ಆರಂಭವಾದ ಫಲಪುಷ್ಪ ಪ್ರದರ್ಶನಕ್ಕೆ ಇಂದು( ಮಂಗಳವಾರ) ತೆರೆಬೀಳಲಿದೆ. ಫಲಪುಷ್ಪ ಪ್ರದರ್ಶನ ಆರಂಭಗೊಂಡಂದಿನಿಂದ ಕದ್ರಿಪಾರ್ಕ್‌ಗೆ ಜನಸಾಗರವೆ ಹರಿದುಬರುತ್ತಿದ್ದು ಪ್ರದರ್ಶನವನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.
ಫಲಪುಷ್ಪ ಪ್ರದರ್ಶನದಲ್ಲಿ ಈ ಭಾರಿಯ ವಿಶೇಷವಾಗಿರುವ 22 ಸಾವಿರ ಹೂವುಗಳಿಂದ ನಿರ್ಮಾಣಗೊಂಡಿರುವ ಯಕ್ಷಗಾನ ಮಾದರಿ, 20 ಸಾವಿರ ಹೂವುಗಳಿಂದ ನಿರ್ಮಾಣಗೊಂಡಿರುವ ಗಿಟಾರ್, ತಬಲ, ವೀಣೆ, ಎರಡು ಸಾವಿರ ಆಸ್ಪರೇಗಸ್‌ಗಳಿಂದ ನಿರ್ಮಾಣಗೊಂಡ ಡಾಲ್ಪಿನ್, 5 ಸಾವಿರ ಹೂವುಗಳಿಂದ ನಿರ್ಮಾಣಗೊಂಡ ಐಸ್‌ಕ್ರೀಮ್ ಆಕರ್ಷಣೆಗೆ ಪಾತ್ರವಾಗಿದೆ. ಈ ವಿಶೇಷ ಕಲಾಕೃತಿಗಳನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.
ಶೈಲೇಶ ಎಂಬವರು ತಯಾರಿಸುತ್ತಿರುವ ತರಕಾರಿ ಕೆತ್ತನೆ ಪ್ರದರ್ಶನ ಕಂಡು ಹೆಚ್ಚಿನವರು ಪುಳಕಿತರಾಗಿದ್ದಾರೆ. ಕಲ್ಲಂಗಡಿ, ಸೌತೆ ಕಾಯಿ, ದ್ರಾಕ್ಷಿ, ನಾನಸು, ಸೋರೆಕಾಯಿಗಳಿಂದ ನಿರ್ಮಾಣಗೊಂಡಿರುವ ಕೋಳಿ, ಗುಲಾಬಿ, ಕಲಶ, ದೀಪ, ತೆಂಗಿನಗರಿ, ಹೂವಿನಚಟ್ಟಿಗಳು ಗಮನಸೆಳೆಯುತ್ತಿದೆ. ಕೈತೋಟ ಹಾಗೂ ತಾರಸಿಮನೆ ಕೃಷಿಗಳನ್ನು ಜನರು ಕುತೂಲಹದಿಂದ ವೀಕ್ಷಿಸುತ್ತಿದ್ದಾರೆ. ಒಟ್ಟಿನಲ್ಲಿ ಕಳೆದ ಮೂರು ದಿನಗಳಿಂದ ಜನರು ಕದ್ರಿಪಾರ್ಕ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಮಾರುಹೋಗಿದ್ದು ಸಾಗರೋಪಾದಿಯಲ್ಲಿ ಪಾರ್ಕ್‌ನತ್ತ ದಾವಿಸುತ್ತಿದ್ದಾರೆ.
ಗಿಡಗಳಿಗೆ ಬೇಡಿಕೆ: ಫಲಪುಷ್ಪ ಪ್ರದರ್ಶನದಲ್ಲಿ ತರಕಾರಿ ಬೀಜ ಮತ್ತು ಗಿಡಗಳು, ಹೂವಿನ ಗಿಡಗಳು, ಆಂತೋರಿಯಮ್ ಹಾಗೂ ಬೋನ್ಸಾಯ್ ಮಾಡಿದ ಗಿಡಗಳನ್ನು ಜನರು ಹೆಚ್ಚಿನ ಆಸಕ್ತಿಯಿಂದ ಖರೀದಿಸುತ್ತಿರುವುದು ಕಂಡುಬಂದಿದೆ.
ಎಲ್ಲೆಲ್ಲೂ ಸೆಲ್ಪಿ: ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬರುತ್ತಿರುವ ಜನರು ಇಲ್ಲಿನ ಕಲಾಸೊಬಗಿಗೆ ಮಾರುಹೋಗಿದ್ದು ಬಂದವರು ತಮ್ಮ ಮೊಬೈಲ್‌ಗಳ ಮೂಲಕ ಸೆಲ್ಪಿ ಪೊಟೋಗಳನ್ನು ತೆಗೆಯುವ ದೃಶ್ಯ ಮಾಮೂಲಿಯಾಗಿದೆ. ಕಲಾಕೃತಿಗಳ ಮುಂದೆ ಸೆಲ್ಪಿ ತೆಗೆದು ಅದನ್ನು ನೋಡಿ ಮತ್ತೆ ಮತ್ತೆ ಖುಷಿಪಡುತ್ತಿದ್ದು ಅಷ್ಟರಮಟ್ಟಿಗೆ ಇಲ್ಲಿನ ಕಲಾಸೊಬಗು ಜನರ ಆಕರ್ಷಣೆಗೆ ಪಾತ್ರವಾಗಿದೆ.
----
ತರಕಾರಿ ಕೆತ್ತನೆ ಪ್ರದರ್ಶನ ಕಂಡು ಜನರು ತುಂಬಾ ಖುಷಿಯಾಗಿದ್ದಾರೆ. ಕಳೆದ ಎಮಟು ವರ್ಷಗಳಿಂದ ಈ ರೀತಿಯ ಪ್ರದರ್ಶನ ಮಾಡುತ್ತಿದ್ದು ಇಲ್ಲಿ ನಡೆಯುತ್ತಿರುವ ಪ್ರದರ್ಶನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಈ ರೀತಿಯ ಆಕರ್ಷಕ ಕೆತ್ತನೆ ಕಲಿಸಿಕೊಡಿ ಎಂದು ಕೇಳುತ್ತಿದ್ದಾರೆ. ಜನರು ಕೆತ್ತನೆ ಪ್ರದರ್ಶನ ಕಂಡು ಖುಷಿಗೊಂಡಿರುವುದು ನನಗೂ ಸಂತಸ ತಂದಿದೆ.
-ಶೈಲೇಶ್, ತರಕಾರಿ ಕೆತ್ತನೆ ಕಲಾವಿದ
------
ಇಲ್ಲಿರುವ ಯಕ್ಷಗಾನ ಮಾದರಿಯ ಪ್ರದರ್ಶನ ಖುಸಿ ಕೊಟ್ಟಿದೆ. ನಮ್ಮ ಜಾನಪದ ಕಲೆಯನ್ನು ಕಲಾವಿದರು ತೋರಿಸಿಕೊಟ್ಟಿದ್ದಾರೆ. ವರ್ಷಕ್ಕೆ ಒಂದು ಬಾರಿ ಈ ರೀತಿಯ ಪ್ರದರ್ಶನ ಮಾಡಿದರೆ ಮಕ್ಕಳನ್ನು ಕರೆದುಕೊಂಡು ಬಂದು ಅವರೊಂದಿಗೆ ಖುಷಿಪಡಬಹುದು. ಇಂತಹ ಪ್ರದರ್ಶನಗಳು ಹೆಚ್ಚೆಚ್ಚು ಆಗಬೇಕು.
- ಗೋಪಾಲಕೃಷ್ಣ ರಾವ್, ಮಂಗಳೂರು ನಿವಾಸಿ
---------
ತರಕಾರಿಯನ್ನು ತಿನ್ನಲು ಮಾತ್ರ ಉಪಯೋಗಿಸಲಾಗುತ್ತರದೆ ಎಂಬ ನಂಬುಗೆ ಈ ಪ್ರದರ್ಶನ ಕಂಡು ಹುಸಿಯಾಗಿದೆ. ತರಕಾರಿಗಳ ಮೂಲಕವು ಅದ್ಬುತ ಕಲಾಕೃತಿಗಳನ್ನು ರಚಿಸಬಹುದು ಎಂಬುದು ತರಕಾರಿ ಕೆತ್ತನೆ ಪ್ರದರ್ಶನ ನೋಡಿ ತಿಳಿದುಬಂದಿದೆ. ತರಕಾರಿಗಳನ್ನು ಈ ರೀತಿ ಸುಂದರವಾಗಿ ಚಿತ್ರಿಸಬಹುದು ಎಂದು ತೋರಿಸಿಕೊಟ್ಟ ಕಲಾವಿದರು ಮಕ್ಕಳಿಗೂ ಕಲಿಯಲು ಪ್ರೇರಣೆ ಕೊಟ್ಟಿದ್ದಾರೆ.
-ಪ್ರವೀಣ್ , ಕುಂಪಲ ನಿವಾಸಿ
-----------
ತೋಟಗಾರಿಕಾ ಇಲಾಖೆಯು ಸಣ್ಣ ಜಾಗದಲ್ಲಿ ಮಾಡಿರುವ ಕೃಷಿ ನೋಡಿ ಖುಷಿಯಾಯಿತು. ನನ್ನಲ್ಲೂ ಹತ್ತು ಸೆಂಟ್ಸ್ ಜಾಗವಿದ್ದು ಅದರಲ್ಲಿ ಇಲ್ಲಿ ಮಾಡಿರುವ ರೀತಿಯ ಕೃಷಿಯನ್ನು ಮಾಡಬೇಕೆಂದು ಇಲ್ಲಿ ತೀರ್ಮಾನಿಸಿದ್ದೇನೆ. ಈ ಬಗ್ಗೆ ತೋಟಗಾರಿಕಾ ಇಲಾಖೆ ಜೊತೆ ಮತನಾಡಿ ಕೃಷಿ ಚಟುವಟಿಕೆ ಆರಂಭಿಸುತ್ತೇನೆ. ಈ ಪ್ರದರ್ಶನ ನನ್ನನ್ನು ತೀವೃವಾಗಿ ಆಕರ್ಷಿಸಿದೆ.
-ಮೈಕಲ್ ಡಿಸೋಜ, ಮಂಗಳೂರು ನಿವಾಸಿ