‘ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ’ ಸ್ಥಾಪಿಸಲು ತೀರ್ಮಾನ
ಬೆಂಗಳೂರು, ಜ. 25: ರಾಜ್ಯದಲ್ಲಿನ ಸಫಾಯಿ ಕರ್ಮಚಾರಿಗಳು ಹಾಗೂ ಪೌರ ಕಾರ್ಮಿಕರ ಸರ್ವತೋಮುಖ ಅಭಿವೃದ್ಧಿಗಾಗಿ ‘ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ’ವನ್ನು ಸ್ಥಾಪಿಸಲು ರಾಜ್ಯ ಸರಕಾರ ತೀರ್ಮಾನ ಮಾಡಿದೆ.
ಸೋಮವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟದಲ್ಲಿ ಮೇಲ್ಕಂಡ ನಿರ್ಧಾರ ಕೈಗೊಂಡಿದ್ದು, ಇದರಿಂದಾಗಿ ರಾಜ್ಯದಲ್ಲಿನ 1.50ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಸಫಾಯಿ ಕರ್ಮಚಾರಿ ಹಾಗೂ ಪೌರ ಕಾರ್ಮಿಕರಿಗೆ ಹೆಚ್ಚಿನ ಅನುಕೂಲಗಳಾಗಲಿವೆ ಎಂದು ಹೇಳಲಾಗಿದೆ.
2015-16ನೆ ಸಾಲಿನ ಆಯವ್ಯಯದಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಸ್ಥಾಪಿಸಲಾಗುವುದು ಎಂದು ಪ್ರಕಟಿಸಿದ್ದು, ಇದೀಗ ನಿಗಮ ಸ್ಥಾಪಿಸಲು ರಾಜ್ಯ ಸರಕಾರ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.
ಸಂಗೊಳ್ಳಿ ಪ್ರಾಧಿಕಾರ: ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನವನ್ನು ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ’ ಎಂದು ಮಾರ್ಪಡಿಸಲು ಒಪ್ಪಿಗೆ ನೀಡಲಾಗಿದೆ. ಎಸ್ಸಿ-2 ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲಾ ಸಂಕೀರ್ಣಗಳನ್ನು ಸೊರಬ ತಾಲೂಕಿನ ಹಿರೇ ಮಾಗಡಿ ಮತ್ತು ಕನಕಪುರದ ಶಿವನಹಳ್ಳಿ ಹಾಗೂ ಗದಗದ ಕನಗಿನಹಾಳ, ಹುಣಸಗಿ ಹಾಗೂ ನಂಜನಗೂಡು ಇಲ್ಲಿ 3 ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಂಕೀರ್ಣ ನಿರ್ಮಾಣಕ್ಕೆ ಸಮ್ಮತಿಸಲಾಗಿದೆ ಎಂದು ಗೊತ್ತಾಗಿದೆ.
ಇನ್‌ವೆಸ್ಟ್ ಕರ್ನಾಟಕ-2016 ಸಮಾವೇಶವನ್ನು ಬೆಂಗಳೂರು ಅರಮನೆ ಮೈದಾನದಲ್ಲಿ ಫೆ.3ರಿಂದ 3ದಿನಗಳ ಕಾಲ ನಡೆಸಲು 40 ಕೋಟಿ ರೂ.ವೆಚ್ಚಕ್ಕೆ ಅನುಮೋದನೆ. ರಾಜ್ಯದ 9 ಸಹಕಾರಿ ನೂಲಿನ ಗಿರಣಿಗಳಿಗೆ ನೀಡಲಾದ ಸರಕಾರಿ ಸಾಲವನ್ನು ಈಕ್ವಿಟಿಯಾಗಿ ಪರಿವರ್ತಿಸಿ ಹಾಗೂ ಅದರ ಮೇಲಿನ ಬಡ್ಡಿ ಮತ್ತು ಸುಸ್ಥಿ ಬಡ್ಡಿಯನ್ನು ಮನ್ನಾ ಮಾಡಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಹೇಳಲಾಗಿದೆ.
ಹೊಸ ಕೈಗಾರಿಕಾ ನೀತಿಯನ್ವಯ ಹೊಸ ಕೈಗಾರಿಕೆ ಘಟಕಗಳಿಗೆ ಮಾರುಕಟ್ಟೆ ಶುಲ್ಕ ವಿನಾಯಿತಿ ವಿಸ್ತರಿಸುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಅಧಿನಿಯಮ 1966ರ ಕಲಂ 65(6)ಕ್ಕೆ ತಿದ್ದುಪಡಿ ತರಲು ಒಪ್ಪಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೇಲ್ಮನೆಗೆ ನಾಮ ನಿರ್ದೇಶನ
ವಿಧಾನ ಪರಿಷತ್‌ಗೆ ನಾಮನಿರ್ದೇಶನಗೊಂಡ ಪ್ರೊ.ಪಿ.ವಿ. ಕೃಷ್ಣಭಟ್, ಜಗ್ಗೇಶ್ ಅವರ ಅವಧಿ ಫೆ.3ಕ್ಕೆ ಕೊನೆಗೊಳ್ಳಲಿದ್ದು, ಆ ಸ್ಥಾನಕ್ಕೆ ಕಲೆ, ಸಾಹಿತ್ಯ, ವಿಜ್ಞಾನ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಸೂಕ್ತ ವ್ಯಕ್ತಿಗಳನ್ನು ನಾಮ ನಿರ್ದೇಶನ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಧಿಕಾರ ನೀಡಲಾಗಿದೆ.