×
Ad

‘108’ ಆ್ಯಂಬುಲೆನ್ಸ್ ನೌಕರರ ಮುಷ್ಕರ

Update: 2016-01-25 23:32 IST

ಬೆಂಗಳೂರು, ಜ. 25: ವೇತನ ಹೆಚ್ಚಳ, ಸೇವಾ ಭದ್ರತೆ, ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ಆರೋಗ್ಯ ಕವಚ (108) ಆ್ಯಂಬುಲೆನ್ಸ್ ನೌಕರರು ಫ್ರೀಡಂಪಾರ್ಕ್‌ನಲ್ಲಿ ಧರಣಿ ನಡೆಸಿದರು.

ಸಂಘದ ಗೌರವಾಧ್ಯಕ್ಷ ಹಾಗೂ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಮಾತನಾಡಿ, 108 ಆ್ಯಂಬುಲೆನ್ಸ್ ನೌಕರರು ದಿನದಲ್ಲಿ 12 ಗಂಟೆಗಳ ಕಾಲ ದುಡಿಯುತ್ತಾರೆ. ಆದರೆ ಅವರಿಗೆ ಕೇವಲ 8 ಗಂಟೆಗಳ ವೇತನ ಮಾತ್ರ ನೀಡಲಾಗುತ್ತಿದೆ. ಹಲವು ವರ್ಷಗಳಿಂದ ಹೆಚ್ಚುವರಿ ವೇತನಕ್ಕಾಗಿ ಧರಣಿಯನ್ನು ನಡೆಸಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಸರಕಾರ ಜ.14ರಂದು 6 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಜಿವಿಕೆ ಸಂಸ್ಥೆಯು ಇದರ ಬಗ್ಗೆ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಅಲ್ಲದೇ ಹೆಚ್ಚುವರಿ ವೇತನವನ್ನು ನೀಡಲು ಕೆಲವು ಷರತ್ತುಗಳನ್ನು ವಿಧಿಸಿ ಅದಕ್ಕೆ ಒಪ್ಪಿ ಸಹಿ ಹಾಕಿದರೆ ಮಾತ್ರ ವೇತನವನ್ನು ನೀಡಲಾಗುವುದು ಎನ್ನುತ್ತಿದೆ. ಸಂಸ್ಥೆಯು ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಕಿಡಿಕಾರಿದರು. ತುರ್ತು ಕಾರ್ಯ ನಿರ್ವಹಿಸಬೇಕಾದ ಆ್ಯಂಬುಲೆನ್ಸ್‌ಗಳಿಗೆ ಮೂಲಭೂತ ಸೌಲಭ್ಯಗಳಿಲ್ಲ. ಈ ಬಗ್ಗೆ ಗಮನ ನೀಡುವಲ್ಲಿ ಜಿವಿಕೆ ವಿಫಲವಾಗಿದೆ. ಅದರ ಬದಲಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದರ ಬಗ್ಗೆ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದರೂ ಯಾವ ಪ್ರಯೋಜನವಾಗಿಲ್ಲ ಎಂದು ಅವರು ತಿಳಿಸಿದರು.
 ಪಾವಗಡ ಶ್ರೀನಿವಾಸ್ ಮಾತನಾಡಿ, ಬೇಡಿಕೆಗಳನ್ನು ಈಡೇರಿಸಲು ಕೂಡಲೇ ಸರಕಾರ ಮಧ್ಯಪ್ರವೇಶಿಸಬೇಕು. ಖಾಸಗಿ ಒಡೆತನದಲ್ಲಿರುವ ಆ್ಯಂಬುಲೆನ್ಸ್(108) ವಿಭಾಗವನ್ನು ಸರಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಿದೆ. ಇದಕ್ಕಾಗಿ ಪ್ರತ್ಯೇಕ ಕ್ಯಾಬಿನೆಟ್ ಸಭೆ ಕರೆದು ಚರ್ಚಿಸಿ ಮುಂದಿನ ಬಜೆಟ್ ಅಧಿವೇಶನದಲ್ಲಿ ಮಂಡಿಸಬೇಕು. ಜೊತೆಗೆ ನೌಕರರನ್ನು ಖಾಯಂ ಸರಕಾರಿ ನೌಕರರನ್ನಾಗಿ ಮಾಡಿಕೊಳ್ಳಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿವಿಕೆ ವಿಧಿಸಿರುವ ಶರತ್ತುಬದ್ಧ ನಿಯಮವನ್ನು ಹಿಂಪಡೆದು ತಕ್ಷಣವೇ ಹೆಚ್ಚುವರಿ ವೇತನಗಳನ್ನು ಬಿಡುಗಡೆ ಮಾಡಬೇಕು. ಜೊತೆಗೆ ಉದ್ಯೋಗ ಭದ್ರತೆಯನ್ನು ನೀಡಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕೆಂದು ಅವರು ಆಗ್ರಹಿಸಿದರು.
ಧರಣಿಯಲ್ಲಿ ನೌಕರರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಪಾಂಡಪ್ಪ ಪರ್ತಿ, ಶ್ರೀಶೈಲ್ ಹಳ್ಳೂರು, ಅಸಂಘಟಿತ ಕಾರ್ಮಿಕ ಸಂಘಟನೆಯ ರಾಜ್ಯಉಪಾಧ್ಯಕ್ಷ ರಾಘವೇಂದ್ರ ಗಂಗಾಧರ್, ಬಿಎಸ್‌ಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ನೌಕರರು ಭಾಗವಹಿಸಿದದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News