×
Ad

ಪೊಳ್ಳುಆಶ್ವಾಸನೆಗಳಿಗೆ ಬಲಿಯಾಗದಿರಿ ಮತದಾರರ ದಿನಾಚರಣೆಯಲ್ಲಿ ನ್ಯಾ. ಎ.ಎಸ್.ಬೆಳ್ಳುಂಕೆ ಕರೆ

Update: 2016-01-25 23:48 IST


ಚಿಕ್ಕಬಳ್ಳಾಪುರ, ಜ.25: ರಾಜಕೀಯ ಮುಖಂಡರ ಪೊಳ್ಳು ಆಶ್ವಾಸನೆಗಳಿಗೆ ಬಲಿಯಾಗದೆ, ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎ.ಎಸ್.ಬೆಳ್ಳುಂಕೆ ಮತದಾರರಲ್ಲಿ ಮನವಿ ಮಾಡಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾರತ ಚುನಾವಣಾ ಆಯೋಗದಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಮತದಾರರ ಪ್ರತಿಜ್ಞಾವಿಧಿಯನ್ನು ಬೋಧಿಸಿ ಮಾತನಾಡಿದ ಅವರು, ಮತದಾನದ ಪಾವಿತ್ರತೆ ಹಾಗೂ ಪ್ರಾಮುಖ್ಯತೆಯನ್ನು ಅರಿತು ಮತದಾನ ಮಾಡಬೇಕೆಂದರು.
ಚುನಾವಣೆಯಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಯಲು ಎಷ್ಟೇ ಸುಧಾರಣೆಗಳು ಜಾರಿ ಬಂದರೂ ಸಹ ಭ್ರಷ್ಟಾಚಾರಿಗಳ ಕಪಿಮುಷ್ಠಿಯಿಂದ ಚುನಾವಣೆಯು ಸಂಪೂರ್ಣವಾಗಿ ಹೊರಬಂದಿಲ್ಲ. ಆದ್ದರಿಂದ ಯುವ ಮತದಾರರು ಚುನಾವಣಾ ಆಯೋಗದೊಂದಿಗೆ ಕೈಜೋಡಿಸಿ ಅಕ್ರಮಗಳನ್ನು ತಡೆಯುವ ಮೂಲಕ ಸಂವಿಧಾನದ ಧ್ಯೇಯೋದ್ದೇಶಗಳನ್ನು ಕಾಪಾಡಬೇಕು ಎಂದರು.
ಮತದಾನ ಪಾವಿತ್ರತೆ ಹಾಗೂ ಮಹತ್ವದ ಅರಿವಿನ ಕೊರತೆ ಎದ್ದು ಕಾಣುತ್ತಿದ್ದು, ಈ ಕುರಿತು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಅಲ್ಲದೆ, ಪ್ರಾಥಮಿಕ ಹಂತದಲ್ಲಿಯೇ ಮತದಾನದ ಪ್ರಾಮುಖ್ಯತೆಯ ಅರಿವು ಮೂಡಿಸಲು ಶಿಕ್ಷಣ ಇಲಾಖೆಯು ಮುಂದಾಗುವ ಮೂಲಕ ಪ್ರಜಾಪ್ರಭುತ್ವದ ನೆಲೆಯನ್ನು ಸದೃಢಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕೆಂದು ತಿಳಿಸಿದರು.
ಜನಪರ ಕಾಳಜಿ, ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಸಾಮರ್ಥ್ಯ ಹಾಗೂ ಮುಂದಾಲೋಚನೆಗಳನ್ನು ಹೊಂದಿರುವ ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಗುರುತರ ಜವಾಬ್ದಾರಿಯು ಮತದಾರರ ಮೇಲಿದ್ದು, 18 ವರ್ಷ ತುಂಬಿದ ಯುವಕ ಯುವತಿಯರು ತಪ್ಪದೇ ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಮಾತನಾಡಿ, ವಿಶ್ವದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ನಮ್ಮ ದೇಶದ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಲು ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಬೇಕಿದೆ ಎಂದು ತಿಳಿಸಿದರು.
ಆಮಿಷಗಳಿಗೆ ಒಳಗಾಗಿ ಮತದಾನ ಮಾಡಿದಲ್ಲಿ ಕಾಲಾನುಕ್ರಮೇಣ ವೈಯಕ್ತಿಕ ಹಾಗೂ ಸಾಮಾಜಿಕ ಮೌಲ್ಯಗಳು ಕ್ಷೀಣಗೊಂಡು, ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಆಸೆ, ಆಮಿಷಗಳಿಗೆ ಒಳಗಾಗದೇ ಪ್ರಾಮಾಣಿಕವಾಗಿ ಸಮರ್ಥರನ್ನು ಆಯ್ಕೆ ಮಾಡಿದಲ್ಲಿ ಅಭಿವೃದ್ಧಿ ಪಥದತ್ತ ದೇಶವನ್ನು ಕೊಂಡೊಯ್ಯಬಹುದು ಅಭಿಪ್ರಾಯಪಟ್ಟರು.

 ಕಾರ್ಯಕ್ರಮದಲ್ಲಿ 18 ವರ್ಷ ತುಂಬಿದ ಯುವಕರಿಗೆ ಮತದಾನ ಗುರುತಿನ ಚೀಟಿ ಹಾಗೂ ಮತದಾನದ ಕುರಿತು ಜಾಗೃತಿ ಮೂಡಿಸಲು ಶಾಲಾ-ಕಾಲೇಜುಗಳಲ್ಲಿ ಏರ್ಪಡಿಸಲಾಗಿದ್ದ ಚಿತ್ರಕಲೆ, ಭಾಷಣ, ಚರ್ಚೆ, ಪ್ರಬಂಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜಿಪಂ ಸಿಒಒ ಬಿ.ಬಿ.ಕಾವೇರಿ, ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್, ಉಪವಿಭಾಗಾಧಿಕಾರಿ ಅಮರೇಶ್, ಡಿವೈಎಸ್ಪಿ ಪುರುಷೋತ್ತಮ್, ತಹಶೀಲ್ದಾರ್ ಜಗದೀಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News