ತುಮಕೂರು: ಫೆ.10ರಂದು ಮಹಾನಗರ ಪಾಲಿಕೆ ಚುನಾವಣೆ
ತುಮಕೂರು,ಜ.25: ತುಮಕೂರು ಮಹಾನಗರಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳಿಗೆ ಹಾಗೂ 4 ಸ್ಥಾಯಿಸಮಿತಿ ಸದಸ್ಯರ ಸ್ಥಾನಗಳಿಗೆ ಫೆ.10ರಂದು ಚುನಾವಣೆ ನಡೆಯಲಿದೆ. ಪ್ರಾದೇಶಿಕ ಆಯುಕ್ತರಾದ ಎಂ.ವಿ.ಜಯಂತಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಸರಕಾರದ ಆದೇಶದಂತೆ ಮೇಯರ್ ಸ್ಥಾನವು ಪರಿಶಿಷ್ಟ ಜಾತಿಯ ಮಹಿಳೆ ಹಾಗೂ ಉಪಮೇಯರ್ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದೆ. ಚುನಾವಣೆಗೆ ಸ್ಪರ್ಧಿಸುವವರು ತುಮಕೂರು ಮಹಾನಗರಪಾಲಿಕೆಯಲ್ಲಿ ರಜಾದಿನಗಳನ್ನು ಹೊರತುಪಡಿಸಿ ಕಚೇರಿ ವೇಳೆಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ಈ ಚುನಾವಣೆಯಲ್ಲಿ ಮಹಾನಗರಪಾಲಿಕೆಯ ಚುನಾಯಿತ ಸದಸ್ಯರು, ಚುನಾವಣೆಯ ಕ್ಷೇತ್ರವು ನಗರದೊಳಗಿದ್ದು, ನಗರದ ಒಂದು ಭಾಗವನ್ನು ಅಥವಾ ಇಡೀ ನಗರ ಪ್ರದೇಶವನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರು ಮತ್ತು ರಾಜ್ಯ ವಿಧಾನಸಭಾ ಸದಸ್ಯರು, ನಗರ ಪರಿಮಿತಿಯೊಳಗೆ ಮತದಾರರೆಂದು ನೋಂದಾಯಿಸಿರುವ ರಾಜ್ಯ ಸಭೆ ಮತ್ತು ವಿಧಾನಪರಿಷತ್ ಸದಸ್ಯರು ಮತಚಲಾಯಿಸುವ ಹಕ್ಕನ್ನು ಹೊಂದಿರುತ್ತಾರೆ. ಚುನಾವಣೆ ಪ್ರಕ್ರಿಯೆಯು ಫೆ.10ರಂದು ಬೆಳಗ್ಗೆ 11:30 ಗಂಟೆಯಿಂದ ಆರಂಭವಾಗಲಿದೆ ಎಂದು ತುಮಕೂರು ಮಹಾನಗರಪಾಲಿಕೆ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.