×
Ad

‘ಸಹಬಾಳ್ವೆ ಸಾಗರ’ ರಾಷ್ಟ್ರೀಯ ಸಮಾವೇಶ :28ರಂದು ಐತಿಹಾಸಿಕ ನಗರಗಳಿಂದ ನದಿ ಜನ ಜಾಥಾ

Update: 2016-01-27 13:53 IST

ಮಂಗಳೂರು: ಕರ್ನಾಟಕ ಕೋಮು ಸೌಹಾರ್ದ ವೇದಿಕೆಯು ಜನವರಿ 30ರಂದು ನಗರದ ಪುರಭವನದಲ್ಲಿ ಹಮ್ಮಿಕೊಂಡಿರುವ ಸಹಬಾಳ್ವೆ ಸಾಗರ ರಾಷ್ಟ್ರೀಯ ಸಮಾವೇಶದ ಪ್ರಯುಕ್ತ ಜ.28ರಂದು ರಾಜ್ಯದ ವಿವಿಧ ಐತಿಹಾಸಕ ನಗರಗಳಿಂದ ನದಿ ಜನ ಜಾಥಾ ಹೊರಡಲಿದೆ ಎಂದು ವೇದಿಕೆಯ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನೇತ್ರಾವತಿ, ಮಲಪ್ರಭಾ ಜಾಥಾ ಕೂಡಲಸಂಗಮದಿಂದ, ಶರಾವತಿ ಜಾಥಾ ಶಿಶುನಾಳದಿಂದ, ಸೀತಾ- ಭದ್ರಾ ಜಾಥಾ ಬಾಬಾ ಬುಡನ್‌ಗಿರಿಯಿಂದ, ಶಾಂಭವೀ- ಕಾವೇರಿ ಜಾಥಾ ಶ್ರೀರಂಗಪಟ್ಟಣದಿಂದ, ಸೌಪರ್ಣಿಕಾ ಮತ್ತು ಶಾಲ್ಮಲಾ ಜಾಥಾ ಅಂಕೋಲದಿಂದ, ಕುಮರಾಧಾರ ಮತ್ತು ಫಲ್ಗುಣಿ ಜಾಥಾ ಚಿಕ್ಕಬಳ್ಳಾಪುರದ ಕೈವಾರ ತಾತಯ್ಯ ಕ್ಷೇತ್ರದಿಂದ, ಕಾಳೀ ಮತ್ತು ಕೃಷ್ಣ ಜಾಥಾ ಸುರಪುರದ ತಿಂಥಣಿ ವೌನೇಶ್ವರ ಕ್ಷೇತ್ರದಿಂದ ಹೊರಡಲಿದೆ ಎಂದು ಹೇಳಿದರು.

ಜ. 29ರಂದು ಈ ಜಾಥಾಗಳು ಮಂಗಳೂರು ತಲುಪಲಿವೆ. ಜ. 30ರಂದು ನಗರದ ಪುರಭವನದಲ್ಲಿ ಬೆಳಗ್ಗೆ 9 ಗಂಟೆಯಿಂದ 8 ಗಂಟೆಯವರೆಗೆ ವಿವಿಧ ಗೋಷ್ಠಿ, ಕಲಾ ಪ್ರಕಾರಗಳ ಪ್ರದರ್ಶನಗಳು ನಡೆಯಲಿವೆ. ಬೆಳಗ್ಗೆ 9 ಗಂಟೆಗೆ ಕುದ್ಮುಲ್ ರಂಗರಾವ್ ವೇದಿಕೆಯಲ್ಲಿ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ನಡೆಯಲಿದ್ದು, ಹಿರಿಯ ರಂಗಕರ್ಮಿ ಸದಾನಂದ ಸುವರ್ಣ ಉದ್ಘಾಟನೆ ನೆರವೇರಿಸಲಿದ್ದಾರೆ. 10.15ಕ್ಕೆ ಸಿರಿ ವೇದಿಕೆಯಲ್ಲಿ ಉದ್ಘಾಟನಾ ಅಧಿವೇಶನ ನಡೆಯಲಿದ್ದು, ಸಾಹಿತಿ ಬರಗೂರು ರಾಮಚಂದ್ರಪ್ಪ ಸಮಾವೇಶ ಉದ್ಘಾಟಿಸುವರು. 11.30ಕ್ಕೆ ನಾರಾಯಣ ಗುರು ವೇದಿಕೆಯಲ್ಲಿ ನಡೆಯುವ ‘ಜಾತ್ಯತೀತ ಸಮಾಜ- ಧಾರ್ಮಿಕ ಸಹಬಾಳ್ವೆ’ ಅಧಿವೇಶನದಲ್ಲಿ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್ ಆಶಯ ಭಾಷಣ ಮಾಡಲಿದ್ದಾರೆ. ಡಾ. ಪಂಡಿತಾರಾಧ್ಯ ಶಿವಾರ್ಚಾಯ ಮಹಾಸ್ವಾಮಿ, ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್, ಬಿಷಪ್ ರೆ.ಫಾ. ಅಲೋಶಿಯಸ್ ಪಾವ್ಲ್ ಡಿಸೋಜಾ, ಬೋಧಿ ದತ್ತ ಭಂತೇಜಿ ಅತಿಥಿಗಳಾಗಿ ಭಾಗವಹಿಸಲಿದ್ದು, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 2.45ಕ್ಕೆ ರಾಣಿ ಅಬ್ಬಕ್ಕ ವೇದಿಕೆಯಲ್ಲಿ ಸೌಹಾರ್ದ ಸಮಾಜ ನಿರ್ಮಾಣದಲ್ಲಿ ರಾಜಕೀಯ ಪಕ್ಷಗಳ ಪಾತ್ರ ಎಂಬ ವಿಷಯದಲ್ಲಿ ನಡೆಯಲಿರುವ ಚರ್ಚಾಗೋಷ್ಠಿಯನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌ಮಟ್ಟು ಉದ್ಘಾಟಿಸುವರು. ಎ.ಕೆ. ಸುಬ್ಬಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಯು.ಟಿ.ಖಾದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 5.20ಕ್ಕೆ ಬಪ್ಪಬ್ಯಾರಿ ವೇದಿಕೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಸ್ವರಾಜ್ ಅಭಿಯಾನದ ರಾಷ್ಟ್ರೀಯ ಮುಖಂಡ ಯೋಗೇಂದ್ರ ಯಾದವ್, ಖ್ಯಾತ ಮಾನವಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾದ್ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ. ಗೌರಿ ಲಂಕೇಶ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ವಿವರಿಸಿದರು.

ಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮರ್ ಯು.ಎಚ್., ಉಪಾಧ್ಯಕ್ಷೆ ಸಾಜಿದಾ ಮೂಮಿನ್, ವೇದಿಕೆಯ ಜಿಲ್ಲಾ ಅಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್, ಸ್ವಾಗತ ಸಮಿತಿಯ ಗೌರವ ಸದಸ್ಯರಾದ ನಂದ ಗೋಪಾಲ್ ಎಸ್., ಇಸ್ಮಾಯಿಲ್ ಕರ್ವೇಲ್, ಕಾರ್ಯದರ್ಶಿ ಗುಲಾಬಿ ಬಿಳಿಮಲೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor