ರೌಡಿ ಶೀಟರ್ ಪಟ್ಟಿಯಲ್ಲಿ ಕಾರ್ಯಕರ್ತರ ಹೆಸರು: ಆರೋಪ
ಜೆಡಿಎಸ್ ಮುಖಂಡರಿಂದ ಪ್ರತಿಭಟನಾ ರೇಲಿ-ಡಿಸಿಗೆ ಮನವಿ
ಕೋಲಾರ, ಜ.27: ತಾಲೂಕಿನ ಜೆಡಿಎಸ್ ಕಾರ್ಯಕರ್ತರನ್ನು ವಿನಾಕಾರಣ ಪೊಲೀಸರು ರೌಡಿ ಶೀಟರ್ ಪಟ್ಟಿಗೆ ಸೇರಿಸುತ್ತಿದ್ದಾರೆಂದು ಆರೋಪಿಸಿ ಮಾಜಿ ಸಚಿವ ಶ್ರೀನಿವಾಸ ಗೌಡ ಅವರ ನೇತೃತ್ವದಲ್ಲ್ಲಿ ಜೆಡಿಎಸ್ ಮುಖಂಡರು ಬೃಹತ್ ರ್ಯಾಲಿಯನ್ನು ನಡೆಸುವ ಮೂಲಕ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ ಚಂದ್ರ ಅವರಿಗೆ ಮನವಿ ಸಲ್ಲಿಸಿದರು. ನಗರದ ಪ್ರವಾಸಿ ಮಂದಿರದ ಬಳಿ ಜಮಾಯಿಸಿದ ಜೆಡಿಎಸ್‌ನ ನೂರಾರು ಕಾರ್ಯಕರ್ತರು ಎಂ.ಜಿ. ರಸ್ತೆಯ ಮೂಲಕ ಜಿಲ್ಲಾಧಿಕಾರಿಯವರ ಕಚೇರಿಯ ವರೆಗೆ ಪ್ರತಿಭಟನಾ ರ್ಯಾಲಿಯನ್ನು ನಡೆಸಿದರು. ಇದೇ ವೇಳೆ ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಸುಧಾಕರ್ ಹಾಗೂ ಸಬ್‌ಇನ್‌ಸ್ಪೆಕ್ಟರ್ ದೇವೇಂದ್ರಪ್ಪ ಅವರು ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಿ ದ್ದಾರೆಂದು ಆಪಾದಿಸಿದರಲ್ಲದೆ ಧಿಕ್ಕಾರ ಕೂಗಿದರು. ೋಲಾರದ ಶಾಸಕ ವರ್ತೂರು ಪ್ರಕಾಶ್ ಜೆಡಿಎಸ್ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹಾಕುತ್ತಿದ್ದಾರೆ. ತಾಲೂಕಿನ ಬೆಳಮಾರನಹಳ್ಳಿ, ಕೂತಂಡಹಳ್ಳಿ, ಅಜ್ಜಪ್ಪನಹಳ್ಳಿ ಮೊದಲಾದ ಅನೇಕ ಗ್ರಾಮಗಳಲ್ಲಿ ಜೆಡಿಎಸ್ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದರೂ ಅವರ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳುವುದು ಬಿಟ್ಟು ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ. ಇನ್ನೂ ಕೆಲವು ಪೊಲೀಸರಂತೂ ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ವಸತಿ ಹೀನರಿಗೆ ಸೂರು ಕಲ್ಪಿಸುವ ದೃಷ್ಟಿಯಿಂದ ಸರಕಾರ ಜಾರಿ ಮಾಡಿರುವ ಬಸವ ವಸತಿ ಯೋಜನೆಯಲ್ಲಿ ಶಾಸಕರು ತಾರತಮ್ಯ ಮಾಡುತ್ತಿದ್ದಾರೆ. ಅಲ್ಲದೆ, ಕುಡಿಯುವ ನೀರಿನಲ್ಲಿ ರಾಜಕೀಯ ಮುಂದುವರಿಸಿರುವ ಶಾಸಕ ವರ್ತೂರು ಪ್ರಕಾಶ್, ಗ್ರಾಪಂಗಳಲ್ಲಿ ಜೆಡಿಎಸ್ ಬೆಂಬಲಿತ ಅಧ್ಯಕ್ಷರಿಗೆ ಕೊಳವೆ ಬಾವಿ ಬೇಕಾದರೆ ಪಕ್ಷಾಂತರ ಮಾಡುವ ಒತ್ತಾಯವನ್ನು ಹೇರಿ ಕೀಳು ಮಟ್ಟದ ರಾಜಕೀಯವನ್ನು ಪ್ರದರ್ಶಿಸುತ್ತಿದ್ದಾರೆ. ಎಂದು ಆರೋಪಿಸಿದರು. ೋಲಾರ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಬೇಕು. ಅವಿಭಜಿತ ಕೋಲಾರ ಜಿಲ್ಲೆಯ ಬಹುದಿನಗಳ ಬೇಡಿಕೆಯಾದ ಶಾಶ್ವತ ನೀರಾವರಿ ಯೋಜನೆಯನ್ನು ಸರಕಾರವು ಆದಷ್ಟು ಬೇಗನೆ ಜಾರಿಗೊಳಿಸಬೇಕು. ಕುಡಿಯುವ ನೀರಿನ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುತ್ತಿರುವ ಶಾಸಕರ ಪ್ರವೃತ್ತಿಯನ್ನು ಜಿಲ್ಲಾಡಳಿತ ತಡೆಯಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷ ಬಿ.ಎಂ.ಮುಬಾರಕ್, ಜೆಡಿಎಸ್ ಮುಖಂಡ ಡಿ.ಎನ್.ನಾಗರಾಜ್, ಅನ್ವರ್ ಪಾಷ, ಮಣಿ, ಹಾರೋಹಳ್ಳಿ ವೆಂಕಟೇಶ್ ಉಪಸ್ಥಿತರಿದ್ದರು.