ಶ್ರೀನಿವಾಸ ಮಲ್ಯ : ಕರಾವಳಿಯ ಹೆಮ್ಮೆ

Update: 2016-01-28 14:53 GMT

ಕಳೆದ 70 ವರ್ಷಗಳಲ್ಲಿ ಏನೂ ಪ್ರಗತಿಯಾಗಿಲ್ಲ, ಈಗ ಒಂದು ವರ್ಷದಿಂದ ದೇಶ ಪ್ರಗತಿಯಾಗುತ್ತಿದೆ ಎಂದು ನಂಬುವ ಮುಗ್ಧ ಭಕ್ತರು ಶ್ರೀ ಶ್ರೀನಿವಾಸ ಮಲ್ಯರು ಕರಾವಳಿ ಕರ್ನಾಟಕ್ಕೆ ಸಲ್ಲಿಸಿದ ಸೇವೆಯನ್ನೊಮ್ಮೆ ನೆನಪು ಮಾಡಿಕೊಳ್ಳಬೇಕು. ಅವರ ಹೆಸರಿನಲ್ಲಿ ದೆಹಲಿಯಲ್ಲೊಂದು ವಸ್ತು ಸಂಗ್ರಹಾಲಯವಿದೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಕಾರ್ಯದರ್ಶಿಯಾಗಿದ್ದ ಶ್ರೀಮತಿ ಉಷಾ ಮಲ್ಲಿಕ್‌ ಅವರು ಅದನ್ನು ನೋಡಿಕೊಳ್ಳುತ್ತಿದ್ದಾರೆ. ದೆಹಲಿಯ ಇಂಡಿಯಾಗೇಟ್ ನಿಂದ ಐ ಟಿ ಓ ದಕಡೆ ಹೋಗುತ್ತಿದ್ದಾಗ ಸಿಗುವ ಕೆಂಪು ದೀಪದ ಸನಿಹ ಎಡಕ್ಕೆ ತಿರುಗಿದರೆ ದೀನ ದಯಾಳ ಉಪಾಧ್ಯಾಯ ಮಾರ್ಗ ದೊರಕುತ್ತದೆ. ಈ ಮಾರ್ಗದಲ್ಲಿ ಸ್ವಲ್ಪ ಮುಂದೆ ಹೋದರೆ ಬಲ ಬದಿಗೆ ಸಿಗುವ 5ನೇ ನಂಬರಿನ ಮನೆಯೇ ಯು. ಶ್ರೀನಿವಾಸ ಮಲ್ಯ ಮೆಮೋರಿಯಲ್‌ ಥಿಯೇಟರ್‌ ಕ್ರಾಫ್ಟ್ ಮ್ಯೂಸಿಯಂ. ರಾಜಧಾನಿಯಲ್ಲಿ ಕನ್ನಡಿಗರೊಬ್ಬರ ಹೆಸರಿನಲ್ಲಿರುವ ಈ ಒಂದೇ ಒಂದು ವಸ್ತು ಸಂಗ್ರಹಾಲಯವನ್ನುಕಟ್ಟಿ ಬೆಳೆಸಿದವರು ಇನ್ನೊಬ್ಬ ಕನ್ನಡಿಗರಾದ ಕಮಲಾದೇವಿ ಚಟ್ಟೋಪಾಧ್ಯಾಯರು.

ಈ ವಸ್ತು ಸಂಗ್ರಹಾಲಯಕ್ಕೆ ಉಳ್ಳಾಲ ಶ್ರೀನಿವಾಸ ಮಲ್ಯರ (ಜನನ: ನವೆಂಬರ 21, 1902, ಮರಣಜನವರಿ 19, 1965) ಹೆಸರಿಡಲಾಗಿದೆ. ಶ್ರೀ ಮಲ್ಯರು ಆಧುನಿಕ ದಕ್ಷಿಣ ಕನ್ನಡ ಜಿಲ್ಲೆಯ ನಿರ್ಮಾತೃ. 18 ವರ್ಷಗಳ ಕಾಲ (1945-1965) ಸಂಸದರಾಗಿದ್ದಅವರು ಕರಾವಳಿ ಜಿಲ್ಲೆಗಳನ್ನು ದೇಶದ ಇತರ ಭಾಗಗಳೊಂದಿಗೆ ಜೋಡಿಸಿದ ಬಹುದೊಡ್ಡ ಯೋಜನೆಗಳನ್ನು ಜ್ಯಾರಿಗೆ ತಂದ ಮಹಾ ಮುತ್ಸದ್ದಿ. ರಾಷ್ಟೀಯ ಹೆದ್ದಾರಿಗಳಾದ 17 (ಮುಂಬಾಯಿ-ಕೊಚ್ಚಿ ) ಮತ್ತು 48 ( ಮಂಗಳೂರು-ಬೆಂಗಳೂರು ) ಕೂಡಾ ಅವರ ಕನಸುಗಳು.  ನೇತ್ರಾವತಿ ನದಿಗೆ ಉಳ್ಳಾಲದಲ್ಲಿ ಸೇತುವೆ ನಿರ್ಮಾಣ, ನವಮಂಗಳೂರು ಬಂದರು,  ಸುರತ್ಕಲ್‌ ಇಂಜಿನೀಯರಿಂಗ್‌ ಕಾಲೇಜು,  ಮಂಗಳೂರು ಪುರಭವನ, ಬಜ್ಪೆ ವಿಮಾನ ನಿಲ್ದಾಣ, ಮಂಗಳೂರು ಆಕಾಶವಾಣಿ ಮತ್ತಿತರವುಗಳ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದವರು ಅವರು. 

ತಮ್ಮ 18 ನೇ ವರ್ಷದಲ್ಲಿಕಾಲೇಜು ತೊರೆದು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಶ್ರೀನಿವಾಸ ಮಲ್ಯರು ಮುಂದೆ ಎಲ್ಲವನ್ನೂತೊರೆದು ಗಾಂಧಿ ಅನುಯಾಯಿಗಳಾದರು. ಸ್ವಾತಂತ್ರ್ಯ ದೊರಕುವ ಹೊತ್ತಿಗೆ ನೆಹರೂ ಅವರಿಗೆ ಹತ್ತಿರವಾಗಿದ್ದಅವರ ಆಧುನಿಕತೆಯ ಪರವಾದ ಯೋಚನೆಗಳು ಮತ್ತು ಯೋಜನೆಗಳು  ನೆಹರೂ ಅವರಿಗೆ ಸಹಜವಾಗಿ ಆಪ್ತವಾಗಿತ್ತು. 1951 ರ ಹೊತ್ತಿಗೆ ಅವರು ಇನ್ನೊಬ್ಬ ಮಂಗಳೂರಿಗರಾಗಿದ್ದ ಕಮಲಾದೇವಿ ಚಟ್ಟೋಪಾಧ್ಯಾಯರಿಗೂ ಆಪ್ತರಾಗಿದ್ದರು. ಕಲೆ, ಸಾಹಿತ್ಯ, ಸಂಗೀತಗಳಲ್ಲಿ ಸಮಾನ ಆಸಕ್ತಿ ಹೊಂದಿದ್ದ ಅವರಿಬ್ಬರೂ ನಾಡಿನ ಕಲಾ ಸಂರಕ್ಷಣಾ ಕೆಲಸಗಳಲ್ಲಿ ಜೊತೆಜೊತೆಯಾಗಿ ಕೆಲಸ ಮಾಡಿದ್ದು  ವಿಶೇಷ ಘಟನೆ.

ಅವರಂಥ ಧುರೀಣರಿಂದಾಗಿ ಇಂದು ಕರಾವಳಿಯು  ದೇಶದ ಅಭಿವೃದ್ಧಿಯ ಕ್ಷೇತ್ರದಲ್ಲಿ ಬಹಳ ಮುಂದೆ ಸಾಗಿದೆ. ನಾವೀಗ ಅವರ ಹೆಸರಿಗೆ ಮಸಿ ಬಳೆಯದಿರೋಣ.

ಬನ್ನಿ, ಜನವರಿ 30 ರಂದು ನಡೆಯುವ ಸಹಬಾಳ್ವೆ ಸಾಗರದಲ್ಲಿ ಶ್ರೀ ಮಲ್ಯರಂಥವರನ್ನು ನೆನೆಸಿಕೊಳ್ಳೋಣ. ನಮ್ಮಚರಿತ್ರೆಯನ್ನು ತಿಳಿಯೋಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor