ವೈದ್ಯಕೀಯ ಕಾಲೇಜುಗಳ ಕಾರ್ಮಿಕರಿಗೆ ಕಿರುಕುಳ: ಆರೋಪ
ಕೋಲಾರ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸಿಐಟಿಯು ಧರಣಿ
ಕೋಲಾರ, ಜ.28: ದೇವರಾಜ ಅರಸು ವೈದ್ಯ ಕೀಯ ಕಾಲೇಜು ಮತ್ತು ಆರ್.ಎಲ್.ಜಾಲಪ್ಪ ಆಸ್ಪತ್ರೆಗಳಲ್ಲಿ ದುಡಿಯುತ್ತಿರುವ ನೌಕರರಿಗೆ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿ ಹಲವಾರು ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿದ್ದು, ಮುಂದೆ ಇಂತಹ ಕೃತ್ಯಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿ ಸಿಐಟಿಯು ವತಿಯಿಂದ ಜಿಲ್ಲಾಧಿಕಾರಿ ಕಚೆೇರಿ ಎದುರು ಧರಣಿಯನ್ನು ಹಮ್ಮಿಕೊಳ್ಳಲಾಯಿತು.
ಕೋಲಾರ ನಗರದ ಟಮಕದಲ್ಲಿ 1986 ರಲ್ಲಿ ಮಾಜಿ ಸಚಿವ ಆರ್.ಎಲ್.ಜಾಲಪ್ಪಅವರು ಪ್ರಾರಂಭಿಸಿದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳು ಜಿಲ್ಲೆಯ ಜನತೆಗೆ ಆರೋಗ್ಯದ ಸೇವೆಯನ್ನು ಒದಗಿಸುತ್ತಿದೆ. ಲ್ಲಿ ಪ್ರಾರಂಭದಿಂದಲೂ ಸಾವಿರಕ್ಕಿಂತಲೂ ಹೆಚ್ಚಿನ ನೌಕರರು ವಿವಿಧ ವಿಭಾಗಗಳಲ್ಲಿ ದುಡಿಯುತ್ತಿದ್ದಾರೆ. ಇವರಿಗೆ ಕನಿಷ್ಠ ವೇತನ, ಕೆಲಸದ ಭದ್ರತೆ, ರಜೆ, ಗ್ರಾಚ್ಯುಯಿಟಿ, ಆರೋಗ್ಯ ಸೇವೆ, ಕ್ಯಾಂಟೀನ್ ಸೌಲಭ್ಯ ಸೇರಿದಂತೆ ಕಾರ್ಮಿಕ ಕಾನೂನಿನ ಅನ್ವಯ ಸಿಗಬೇಕಾದ ಯಾವುದೇ ಸೌಲಭ್ಯಗಳನ್ನು ನೀಡದೇ ವಂಚಿಸಲಾಗುತ್ತಿದೆ ಎಂದು ಸಿಐಟಿಯು ಮುಖಂಡರು ಆರೋಪಿಸಿದ್ದಾರೆ.ನ್ನೂ ಕೆಲವು ನೌಕರರಿಗೆ ಭವಿಷ್ಯ ನಿಧಿ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಜನಪ್ರತಿನಿಧಿಯಾಗಿ ಹಲವಾರು ವರ್ಷಗಳ ಕಾಲ ಮಂತ್ರಿಯಾಗಿದ್ದ ಜಾಲಪ್ಪಕಾನೂನನ್ನು ಗಾಳಿಗೆ ತೂರಿ ನೌಕರರನ್ನು ಶೋಷಣೆ ಮಾಡುತ್ತಿರುವುದು ಖಂಡನೀಯ. 2007 ರಲ್ಲಿ ಮೆಡಿಕಲ್ ಕಾಲೇಜು, ಡೀಮ್ಡ್ ಟುಬಿ ಯೂನಿವರ್ಸಿಟಿಯಾಗಿದೆ. ಇದರ ಅನ್ವಯ ನೌಕರರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡುತ್ತಿಲ್ಲ. ಅತ್ಯಂತ ಕಡಿಮೆ ವೇತನವನ್ನು ನೀಡುತ್ತಿದ್ದಾರೆ. ಈ ವಿಷಯವಾಗಿ ನೌಕರರು ಮಾತನಾಡಿದರೆ ಅವರನ್ನು ಬೆದರಿಸುವುದು, ವರ್ಗಾವಣೆ, ಅಮಾನತು ಮಾಡಲಾಗುತ್ತಿದೆ ಎಂದು ದೂರಿದರು.
ಮಿತಿ ಮೀರಿದ ಶೋಷಣೆಯ ಬಗ್ಗೆ ಕಾರ್ಮಿಕರು ಕಾರ್ಮಿಕ ಇಲಾಖೆಗೆ ದೂರನ್ನು ನೀಡಿ, ಕಾರ್ಮಿಕ ಸಂಘವನ್ನು ನೋಂದಾಯಿಸಿಕೊಂಡ ನಂತರ ಕಾರ್ಮಿಕರಿಗೆ ಕೊಡುತ್ತಿರುವ ಕಿರುಕುಳ ಮತ್ತಷ್ಟು ಹೆಚ್ಚಾಗಿದೆ. ಕಾರ್ಮಿಕ ಸಂಘಕ್ಕೆ ಸದಸ್ಯರಾಗಬಾರದೆಂದು ಬೆದರಿಕೆ ಹಾಕಿ ಕಾನೂನು ಬಾಹಿರವಾಗಿ ಸಹಿಗಳನ್ನು ಪಡೆಯುತ್ತಿದ್ದಾರೆ. ಸಹಿ ಹಾಕದವರಿಗೆ ವೇತನವನ್ನು ಕಡಿತಗೊಳಿಸುತ್ತಿದ್ದಾರೆ. ಕಾನೂನು ಬಾಹಿರವಾದ ನೋಟಿಸ್‌ಗಳನ್ನು ನೀಡಿ ನೌಕರರನ್ನು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದರು.
ನೌಕರರ ಮಕ್ಕಳ ಶಾಲಾ ಶುಲ್ಕದಲ್ಲಿ ನೀಡುತ್ತಿದ್ದ ಶೇ.50 ರಷ್ಟು ರಿಯಾಯಿತಿಯನ್ನು ನೀಡದೇ ಶೇ.100 ರಷ್ಟು ಶಾಲಾ ಶುಲ್ಕವನ್ನು ಕಟ್ಟಲಿಲ್ಲವೆಂದು ಶಾಲೆಯಿಂದ ಹೊರಗೆ ನಿಲ್ಲಿಸಿ ನಂತರ ಛೀಮಾರಿ ಹಾಕಿಸಿಕೊಂಡಿದ್ದಾರೆ. ಸ್ಪತ್ರೆಯಲ್ಲಿ ಕೆಲಸ ಮಾಡಿದರೂ ಒಬ್ಬರಿಗೂ ಉಚಿತ ಆರೋಗ್ಯ ಸೇವೆ ನೀಡುವುದಿಲ್ಲ. ಇನ್ನೂ ಹಲವಾರು ರೀತಿಯಲ್ಲಿ ಕಾರ್ಮಿಕ ಕಾನೂನುಗಳನ್ನು ಉಲ್ಲಂಘನೆ ಮಾಡುತ್ತಿದ್ದರೂ ಕಾರ್ಮಿಕ ಇಲಾಖೆ ಅಧಿಕಾರಿಗಳಾಗಲಿ, ಜಿಲ್ಲಾಧಿಕಾರಿಗಳಾಗಲಿ ಇವರ ಈ ಕಾನೂನು ಬಾಹಿರ ಕೃತ್ಯಗಳ ವಿರುದ್ದ ಕ್ರಮ ಜರಗಿಸದೇ ಇರುವುದು ಅವರಿಗೆ ಪರೋಕ್ಷವಾಗಿ ಬೆಂಬಲ ನೀಡಿದಂತಾಗಿದೆ ಎಂದು ಆರೋಪಿಸಿದರು.ೂಡಲೇ ವರ್ಗಾವಣೆ, ಅಮಾನತುಗೊಂಡ ನೌಕರರನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕು ಮತ್ತು ಸಂಸ್ಥೆಯವರು ಕಾರ್ಮಿಕ ಇಲಾಖೆಗೆ ನೀಡಿರುವ ಮಾಹಿತಿ ಪ್ರಕಾರ ಕರ್ನಾಟಕ ಸರ್ಕಾರದ ಅನ್ವಯದ 4ನೆ ವೇತನ ಆಯೋಗ ಮತ್ತು 5ನೆ ವೇತನ ಆಯೋಗ ಶಿಫಾರಸಿನಂತೆ ವೇತನದ ಹಿಂಬಾಕಿ, 6ನೆ ವೇತನ ಆಯೋಗ ಶಿಫಾರಸಿನಂತೆ ವೇತನ ನೀಡಬೇಕು ಎಂದು ಆಗ್ರಹಿಸಿದರು.ಡಿತಗೊಳಿಸಿರುವ ವೇತನವನ್ನು ಹೆಚ್ಚಿಸಿ ಕೊಡಬೇಕು, ಕಾರ್ಮಿಕ ವಿರೋಧಿ ನೀತಿಗಳನ್ನು ಕೈ ಬಿಟ್ಟು ಕಾರ್ಮಿಕರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕೆಂದು ಆಗ್ರಹಿಸಿ, ಧರಣಿ ನಿರತ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ಎಚ್.ಎಂ.ಯಲ್ಲಪ್ಪ, ತಾಲೂಕು ಕಾರ್ಯದರ್ಶಿ ಮುನಿರಾಜಮ್ಮ, ವಿಜಿಯಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.