ಅನಧಿಕೃತ ಶಾಲೆ ಮುಚ್ಚಿಸಲು ಅಧಿಕಾರಿಗಳ ಹಿಂದೇಟು: ಸ್ಥಳೀಯರ ಆರೋಪ
ಸಕಲೇಶಪುರ, ಜ.28: ತಾಲೂಕಿನ ಹಾನುಬಾಳು ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಅನಧಿಕೃತ ಶಾಲೆ ಮುಚ್ಚಿಸಲು ಡಿಡಿಪಿಐ ಆದೇಶ ನೀಡಿದ್ದರೂ ಕ್ರಮ ವಹಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಬಗ್ಗೆ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹಾನುಬಾಳು ಗ್ರಾಮಸ್ಥರು, ಇಲ್ಲಿನ ಸಮೃದ್ಧಿ ಎಜುಕೇಶನ್ ಟ್ರಸ್ಟ್ಟ್ ಯಾವುದೇ ಮಾನ್ಯತೆ ಪಡೆಯದೆ ವಾಸದ ಮನೆಯೊಂದರಲ್ಲಿ ಪ್ಲೇ ಹೋಂ, ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ನಡೆಸುತ್ತಿದೆ. ಮಾಹಿತಿ ಹಕ್ಕಿನಡಿ ವಿಚಾರಿಸಿದಾಗ ಈ ಶಾಲೆ ಅನಧಿಕೃತ ಎಂದು ತಿಳಿದಿದೆ. ಜಿಲ್ಲಾಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗೆ ಈ ಬಗ್ಗೆ ದೂರು ನೀಡಿದ್ದು, ಹಿರಿಯ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದರೂ ಸ್ಥಳೀಯ ಅಧಿಕಾರಿಗಳು ಮಾತ್ರ ಶಾಲೆ ಮುಚ್ಚಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.ಪಿಐ ಆದೇಶದಂತೆ ಕಳೆದ ಡಿ.22 ರಂದು ಬಿಇಒ ಪುಷ್ಪಲತಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಶಾಲೆಯನ್ನು ಕೂಡಲೇ ಮುಚ್ಚುವಂತೆ ಸೂಚಿಸಿದ್ದರು. ಇದರಿಂದಾಗಿ ಒಂದೆರಡು ದಿನ ಶಾಲೆ ನಡೆಯಲಿಲ್ಲವಾದರೂ ಕೆಲವೆ ದಿನಗಳಲ್ಲಿಯೆ ಮತ್ತೆ ಆರಂಭವಾಗಿದೆ. ಈ ಬಗ್ಗೆ ಬಿಇಒ ಅವರಿಗೆ ಮಾಹಿತಿ ನೀಡಿದರೆ ಹಾರಿಕೆ ಉತ್ತರಗಳನ್ನು ನೀಡಿ ನುಣುಚಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ತಾವು ಈ ಬಗ್ಗೆ ಡಿಡಿಪಿಐ ಅವರಿಗೆ ಮತ್ತೊಂದು ಪತ್ರ ಬರೆದು ಸದ್ಯದ ಸ್ಥಿತಿಗತಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಾಗ ಅವರಿಂದ ಡಿ.29ರಂದು ಸ್ಪಷ್ಟ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಶಿಕ್ಷಣ ಇಲಾಖೆ ಉಪನಿ ರ್ದೇಶಕ ವಿ.ಎಂ.ಕಾಂತರಾಜು ಅವರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಬರೆದ ತಿಳುವಳಿಕೆ ಪತ್ರದಲ್ಲಿ, ಶಾಲೆ ಅನಧಿಕೃತ ಎಂದು ತಿಳಿದಿದ್ದರೂ ಈ ವರೆಗೆ ಕ್ರಮ ಕೈಗೊಳ್ಳದಿರುವ ಬಗ್ಗೆ ಸ್ಪಷ್ಟನೆ ಕೇಳಿದ್ದರು. ಜೊತೆಗೆ ಕೂಡಲೇ ಶಾಲೆ ಮುಚ್ಚಿಸದಿದ್ದರೆ ಸ್ಥಳೀಯ ಪೊಲೀಸರ ಸಹಾಯದಿಂದ ಶಾಲೆ ಮುಚ್ಚಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಪತ್ರ ಬಂದು ಎರಡು ತಿಂಗಳಾದರೂ ಬಿಇಒ ಪುಷ್ಪಲತಾ ಶಾಲೆ ಮುಚ್ಚಿಸುವ ಪ್ರಯತ್ನವನ್ನೂ ಮಾಡುತ್ತಿಲ್ಲ. ತಮಗೂ ಸಹ ಈ ಬಗ್ಗೆ ಸರಿಯಾಗಿ ಉತ್ತರಿಸದೆ ನುಣುಚಿಕೊಳ್ಳುವ ತಂತ್ರ ಹೂಡುತ್ತಿರುವುದರಿಂದ ಅನುಮಾನಗಳು ವ್ಯಕ್ತವಾಗುತ್ತಿವೆ ಎಂದರು.
ಹಾನುಬಾಳು ಗ್ರಾಮದ ಸಮೃದ್ಧಿ ಎಜುಕೇಶನ್ ಟ್ರಸ್ಟ್‌ನ ಪ್ಲೇ ಹೋಂ ವಿಭಾಗದಲ್ಲಿ 10, ಎಲ್‌ಕೆಜಿ 23 ಹಾಗೂ ಯುಕೆಜಿ ವಿಭಾಗದಲ್ಲಿ 12 ಮಕ್ಕಳು ದಾಖಲಾಗಿದ್ದು, 12 ರಿಂದ 18 ಸಾವಿರ ರೂ. ಡೊನೇಷನ್ ಪಡೆಯಲಾಗುತ್ತಿದೆ. ಜೊತೆಗೆ ಇಲ್ಲಿನ ಮಕ್ಕಳಿಗೆ ಯಾವುದೆ ಭದ್ರತೆ, ರಕ್ಷಣೆ ಇಲ್ಲದಂತಾಗಿದೆ. ಹೆಚ್ಚಿನ ಪೋಷಕರಿಗೆ ಈ ಶಾಲೆ ಅನಧಿಕೃತ ಎಂಬ ಬಗ್ಗೆ ಮಾಹಿತಿ ಇಲ್ಲ. ಸರಕಾರದ ನಿಯಮದಂತೆ ಪರವಾನಿಗೆ ಪಡೆದು ಮಕ್ಕಳಿಗೆ ಎಲ್ಲ ರೀತಿಯ ಅನುಕೂಲಗಳನ್ನು ಮಾಡಿಕೊಟ್ಟು ಶಾಲೆ ಮುಂದುವರೆಸಲು ತಮಗೆ ಅಭ್ಯಂತರವಿಲ್ಲ. ಆದರೆ ಅನಧಿಕೃತವಾಗಿ ಶಾಲೆ ನಡೆಸಲು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಾನುಬಾಳು ಗ್ರಾಮದ ಮುಖಂಡರಾದ ಐ.ಕೆ.ರಾಜೇಶ್ವರಿ, ವಿಜಯ್ ಕುಮಾರ್ ಉಪಸ್ಥಿತರಿದ್ದರು.